ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂದಿಮುಚ್ಚಿದ ಕೆಂಡವಾದ ಶಿವಮೊಗ್ಗ: 24ರವರೆಗೂ ಕರ್ಫ್ಯೂ

ಗುರುವಾರದವರೆಗೂ ಶಾಲಾ, ಕಾಲೇಜಿಗೆ ರಜೆ ಮುಂದುವರಿಕೆ, ಮತ್ತೆ ಐದು ವಾಹನಗಳಿಗೆ ಬೆಂಕಿ
Last Updated 23 ಫೆಬ್ರುವರಿ 2022, 3:15 IST
ಅಕ್ಷರ ಗಾತ್ರ

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯ ನಂತರವೂ ನಗರದ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತೆ ಇದ್ದು, ಫೆ.24ರ ಬೆಳಿಗ್ಗೆ 6ರವರೆಗೂ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಶಾಲಾ, ಕಾಲೇಜುಗಳಿಗೆ ಗುರುವಾರದವರೆಗೂ ರಜೆ ಮುಂದುವರಿಸಲಾಗಿದೆ.

ಗಾಂಧಿ ಬಜಾರ್, ಹಳೆ ತೀರ್ಥಹಳ್ಳಿ ರಸ್ತೆ, ಸೀಗೆಹಟ್ಟಿ, ಆಜಾದ್ ನಗರ ಮತ್ತಿತರ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸವಳಂಗ ರಸ್ತೆ, ದುರ್ಗಿಗುಡಿ, ಆಲ್ಕೋಳ ರಸ್ತೆ, ವಿನೋಬನಗರ, ಸವಳಂಗ ರಸ್ತೆ, ಹೊನ್ನಾಳಿ ರಸ್ತೆಗಳ ಬಡಾವಣೆಗಳಲ್ಲಿ ಜನಜೀವನ ಸಹಜವಾಗಿತ್ತು. ಆಟೊರಿಕ್ಷಾಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

ಮತ್ತೆ ಐದು ವಾಹನಗಳಿಗೆ ಬೆಂಕಿ: ಹರ್ಷ ಅಂತ್ಯಸಂಸ್ಕಾರದ ನಂತರ ರಾತ್ರಿ ಕಿಡಿಗೇಡಿಗಳು ಟಿಪ್ಪುನಗರ, ಗೋಪಾಳದ ಕೊರಮರ ಕೇರಿಯಲ್ಲಿ ಮೂರು ಆಟೊರಿಕ್ಷಾ, ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಸಂಬಂಧ ಪ್ರಕರಣಗಳು ದಾಖಲಾಗಿವೆ.

ಪಥ ಸಂಚಲನ: ನಗರದ ಎಲ್ಲೆಡೆ ಪೊಲೀಸ್‌ ಪಹರೆ ಹಾಕಲಾಗಿದೆ. ಜನರಲ್ಲಿ ವಿಶ್ವಾಸ ತುಂಬಲು ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಯಿತು. ಅಮೀರ್‌ ಅಹಮದ್‌ ವೃತ್ತದಿಂದ ಆರಂಭವಾದ ಪಥ ಸಂಚಲನ ಓಟಿ ರಸ್ತೆ, ಸೀಗೆಹಟ್ಟಿ, ಬಿಬಿ ರಸ್ತೆ, ವಂದನ ಟಾಕೀಸ್, ಸಿದ್ದಯ್ಯ ರಸ್ತೆ, ಎಂಕೆಕೆ ರಸ್ತೆ, ಎಸ್ಎನ್ ವೃತ್ತ, ಲಷ್ಕರ್ ಮೊಹಲ್ಲಾ ಮೂಲಕ ಸಾಗಿತು.

ಹರ್ಷ ಮನೆಗೆ ಗಣ್ಯರ ದಂಡು: ಮೃತ ಹರ್ಷ ಅವರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಕೆಲವರು ಆರ್ಥಿಕ ನೆರವು ನೀಡಿದರು. ಕೆಲವರು ಸರ್ಕಾರ, ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಕಾರದ ವಿರುದ್ಧ ಸೂಲಿಬೆಲೆ ಆಕ್ರೋಶ: ಸರ್ಕಾರ ಗುಪ್ತಚರ ಇಲಾಖೆಯಿಂದ ಮಾಹಿತಿ ಸಂಗ್ರಹಿಸುವಲ್ಲಿ ವಿಫಲವಾಗಿದೆ ಎಂದು ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಬೆಲಿ ಆರೋಪಿಸಿದರು. ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ, ಕೊಲೆಯಾಗಿದೆ. ಕೊಲೆಯ ಹಿಂದೆ ಸರ್ಕಾರ ಹಾಗೂ ಗುಪ್ತಚರ ಇಲಾಖೆಯ ವಿಫಲ ಅಡಗಿದೆ. ಶಿವಮೊಗ್ಗದಲ್ಲಿ ಮುಸ್ಲಿಂ ಸಂಘಟನೆಗಳು ಸಕ್ರಿಯವಾಗಿವೆ. ಸರ್ಕಾರ ಕಣ್ಣೊರೆಸುವ ಕೆಲಸ ಮಾಡುತ್ತಿದೆ. ಗೃಹ ಸಚಿವರ ತವರು ಜಿಲ್ಲೆಯಲ್ಲೇ ಹಿಂದೂ ಕಾರ್ಯಕರ್ತನ ಹತ್ಯೆಯಾಗಿರುವುದು ತಲೆ ತಗ್ಗಿಸುವ ವಿಷಯ. ರಕ್ಷಣೆ ಮಾಡದಿದ್ದರೆ ನಾವೇ ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಯಶ್ ಪಾಲ್ ಸುವರ್ಣ ಸಾಂತ್ವನ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಭೇಟಿ ನೀಡಿ ₹ 1 ಲಕ್ಷ ಮೊತ್ತದ ಚೆಕ್ ನೀಡಿದರು. ‘ಹರ್ಷನ ಹತ್ಯೆ ಹಿಂದೆ ಜಿಹಾದಿ ಸಂಘಟನೆಯ ಕೈವಾಡವಿದೆ. ಅವರದೇ ಭಾಷೆಯಲ್ಲಿ ಉತ್ತರ ಕೊಡುವ ಕೆಲಸ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಮುಸ್ಲಿಂ ಸಂಘಟನೆ ನಿಷೇಧಕ್ಕೆ ಆಗ್ರಹ
ಶಿವಮೊಗ್ಗ
: ರಾಜ್ಯದಲ್ಲಿ ಕೋಕಾ ಕಾಯ್ದೆ ಜಾರಿಗೊಳಿಸಬೇಕು. ಎಸ್‌ಡಿಪಿಐ, ಪಿಎಫ್ಐ, ಸಿಎಫ್ಐ ಸೇರಿ ಹಲವು ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಒತ್ತಾಯಿಸಿದರು.

ಮೃತ ಹರ್ಷ ಅವರ ಮನೆಗೆ ಮಂಗಳವಾರ ಭೇಟಿ ನೀಡಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ದೇಶದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಯ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ. ಕೆಲವು ಸಂಘಟನೆಗಳ ಕೈವಾಡವಿದೆ. ಅವುಗಳನ್ನು ನಿಷೇಧಿಸಲು ಅಗತ್ಯ ದಾಖಲೆಗಳನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ನೀಡಬೇಕು ಎಂದು ಆಗ್ರಹಿಸಿದರು.

ಹರ್ಷ ಹತ್ಯೆ ಪ್ರಕರಣವನ್ನು ಭಯೋತ್ಪಾದಕ ಕೃತ್ಯವೆಂದು ದಾಖಲಿಸಕೊಳ್ಳಬೇಕು. ರಾಜ್ಯದಲ್ಲೂ ಭಯೋತ್ಪಾದಕ ನಿಗ್ರಹ ದಳ ರಚಿಸಬೇಕು. ಹಿಂದೂ ಯುವಕರ ಹತ್ಯೆ ಸರಣಿಗೆ ಇತಿಶ್ರೀ ಹಾಡಬೇಕು ಎಂದು ಒತ್ತಾಯಿಸಿದರು.

ಹರ್ಷನ ಕುಟುಂಬಕ್ಕೆ ₹ 5 ಲಕ್ಷ ಘೋಷಣೆ
ಹೊನ್ನಾಳಿ:
‘ಶಿವಮೊಗ್ಗದ ಬಜರಂಗ ದಳದ ಕಾರ್ಯಕರ್ತ ಹರ್ಷ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದು ಖಂಡನೀಯ’ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಹೇಳಿದರು.

ಮಂಗಳವಾರ ಪತ್ರಿಕೆಯೊಂದಿಗೆ ಅವರು ಮಾತನಾಡಿದ ಅವರು, ‘ಹರ್ಷನಂತಹ ಮಗನನ್ನು ಕಳೆದುಕೊಂಡ ತಂದೆ–ತಾಯಿಗೆ ಸಾಂತ್ವನ ಹೇಳುವುದು ನಮ್ಮ ಕರ್ತವ್ಯ. ನಿನ್ನೆ ಅವರ ಕುಟುಂಬಕ್ಕೆ ₹ 2 ಲಕ್ಷ ಕೊಡುವುದಾಗಿ ಹೇಳಿದ್ದೆ. ಅದಕ್ಕೆ ಬದಲಾಗಿ ವೈಯಕ್ತಿಕವಾಗಿ ₹ 5 ಲಕ್ಷ ಹಾಗೂ ಹೊನ್ನಾಳಿ ತಾಲ್ಲೂಕು ಬಿಜೆಪಿ ಮುಖಂಡರಿಂದ ₹ 1 ಲಕ್ಷ ಸೇರಿಸಿ ಒಟ್ಟು ₹ 6 ಲಕ್ಷ ಕೊಡುತ್ತೇವೆ’ ಎಂದು ಹೇಳಿದರು.

ಫೆ. 24 ರಂದು ಸಂಜೆ ಶಿವಮೊಗ್ಗದಲ್ಲಿರುವ ಹರ್ಷನ ನಿವಾಸಕ್ಕೆ ತೆರಳಿ ಅವರ ತಂದೆ–ತಾಯಿಗೆ ಮತ್ತು ಅವರ ಸಹೋದರಿಯರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿ ಬರಲಾಗುವುದು. ಆ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ನಾವು ಮಾಡುತ್ತೇವೆ’ ಅವರು ಹೇಳಿದರು.

ಸುದ್ದಿ ತಿಳಿದ ಸೋದರತ್ತೆಗೆ ಹೃದಯಾಘಾತ
ಹರ್ಷ ನಿಧನದ ಸುದ್ದಿ ಭದ್ರಾವತಿಯಲ್ಲಿರುವ ಅವರ ಸೋದರತ್ತೆ ಜಲಜಾಕ್ಷಮ್ಮ (65) ಅವರಿಗೆ ತಿಳಿಯುತ್ತಿದ್ದಂತೆ ತೀವ್ರ ಹೃದಯಾಘಾತದಿಂದ ಸೋಮವಾರ ರಾತ್ರಿಯೇ ಮೃತಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT