ಶಿರಾಳಕೊಪ್ಪ: ಪಟ್ಟಣದಲ್ಲಿ ಸೋಮವಾರ ಹಿಂದೂ ಜಾಗರಣ ವೇದಿಕೆ ಕರೆ ನೀಡಿದ್ದ ಸ್ವಯಂ ಪ್ರೇರಿತ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಟ್ಟಣದ ಶಿಕಾರಿಪುರ ರಸ್ತೆಯ ವಾಲ್ಮಿಕಿ ಭವನದಿಂದ ಪೊಲೀಸ್ ಠಾಣೆಯವರೆಗೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯನ್ನೂ ನಡೆಸಿದರು.
ನಂತರ ಪೊಲೀಸ್ ಠಾಣೆಯ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ದಕ್ಷಿಣ ಪ್ರಾಂತೀಯ ಸಂಚಾಲಕ ಸತೀಶ್ ದಾವಣಗೆರೆ, ‘ಹಳ್ಳಿಯಿಂದ ಬೆಳೆ ಮಾರಾಟ ಮಾಡಲು ಬರುವ ರೈತರಿಗೆ ಮಾರುಕಟ್ಟೆಯಲ್ಲಿ ರಕ್ಷಣೆಯಿಲ್ಲ. ಪೊಲೀಸ್ ಇಲಾಖೆಯ ಅಧಿಕಾರಿಗಳು ಅಪರಾಧ ಹಿನ್ನೆಲೆಯುಳ್ಳ ಮತೀಯ ಶಕ್ತಿಗಳ ಜೊತೆಗೆ ಕೈಜೋಡಿಸಿದ್ದಾರೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನನ್ನು ಜ. 10ರಂದು ಸಂಜೆಯವರೆಗೂ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡು ದೌರ್ಜನ್ಯ ಎಸಗಿದ್ದಾರೆ’ ಎಂದು ಆಪಾದಿಸಿದರು.
‘ಜಿಲ್ಲೆಯಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ ಈ ಬಗ್ಗೆ ಗಮನ ಹರಿಸದಿರುವುದು ಬೇಸರದ ಸಂಗತಿಯಾಗಿದೆ. ಅಪರಾಧ ಹಿನ್ನೆಲೆಯಿರುವ ಅನ್ಯ ಕೋಮಿನ ವ್ಯಕ್ತಿಗಳಿಗೆ ಪೊಲೀಸರು ರಾಜಾತಿಥ್ಯ ನೀಡುತ್ತಿದ್ದಾರೆ. ಹೀಗಾಗಿ ಪೊಲೀಸರ ಮೇಲೆ ಮೊದಲು ಕ್ರಮ ಜರುಗಿಸಬೇಕು’ ಎಂದು ಹಿಂದೂ ಜಾಗರಣ ವೇದಿಕೆಯ ಉಡುಪಿ ಜಿಲ್ಲಾ ಸಂಚಾಲಕ ಶ್ರೀಕಾಂತ್ ಶೆಟ್ಟಿ ಒತ್ತಾಯಿಸಿದರು.
‘ಪಟ್ಟಣದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಇರಬಹುದು. ಹಿಂದೂಗಳು ಹೆದರುವ ಅವಶ್ಯಕತೆಯಿಲ್ಲ. ಸುತ್ತಮುತ್ತಲ ಹಳ್ಳಿಯಲ್ಲಿ ಹಿಂದೂಗಳನ್ನು ಸಂಘಟನೆ ಮಾಡುತ್ತೇವೆ. ರಕ್ಷಣೆ ನೀಡುತ್ತೇವೆ’ ಎಂದು ಭರವಸೆ ನೀಡಿದರು.
ಶಿಕಾರಿಪುರ ಗ್ರೇಡ್-2 ತಹಶೀಲ್ದಾರ್ ವಿಶ್ವನಾಥ ಮುರಡಿ ಹಾಗೂ ಕಂದಾಯ ನಿರೀಕ್ಷಕ ಹರ್ಷ ಸ್ಥಳಕ್ಕೆ ಬಂದರು. ಕರ್ತವ್ಯ ಲೋಪ ಎಸಗಿದ ಪೊಲೀಸರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನಕಾರರು ಗ್ರೇಡ್-2 ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಫೆ. 20ರ ಒಳಗಾಗಿ ಪೊಲೀಸರ ವಿರುದ್ಧ ಶಿಸ್ತು ಕ್ರಮ ಜರುಗಿಸದಿದ್ದರೆ ಫೆ. 20 ರಂದು ಶಿರಾಳಕೊಪ್ಪದಿಂದ ಶಿಕಾರಿಪುರದವರೆಗೆ ಜಗದೀಶ್ ಕಾರಂತ ನೇತೃತ್ವದಲ್ಲಿ ಜಾಥಾ ನಡೆಸಲಾಗುವುದು ಎಂದು ಹಿಂದೂ ಜಾಗರಣ ವೇದಿಕೆ ನಾಯಕರು ಘೋಷಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ದಕ್ಷಿಣ ಪ್ರಾಂತ್ಯ ಸಹ ಸಂಚಾಲಕ ಪ್ರಕಾಶ್ ಕುಕ್ಕೆಹಳ್ಳಿ, ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಬಂದೋಡ್, ಶಿವಮೊಗ್ಗ ಜಿಲ್ಲಾ ಸಂಚಾಲಕ ದೇವರಾಜ್ ಅರಳೆಹಳ್ಳಿ, ಶಿಕಾರಿಪುರ ತಾಲ್ಲೂಕು ಸಂಚಾಲಕ ಪ್ರದೀಪ್ ಪುನೇದಹಳ್ಳಿ ಇದ್ದರು.
ಬಂದ್ ಹಿನ್ನೆಲೆ: ಬೈಕ್ ನಿಧಾನವಾಗಿ ಚಲಾಯಿಸಲು ಹೇಳಿದ್ದರು ಎಂಬ ಕಾರಣ ಜ. 9ರಂದು ಮಾರುಕಟ್ಟೆಯಲ್ಲಿ 2 ಕೋಮಿನ ಯುವಕರ ಮಧ್ಯೆ ಗಲಾಟೆಯಾಗಿ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಜ. 10 ರಂದು ನಡೆದ ಮತ್ತೊಂದು ಪ್ರಕರಣದಲ್ಲಿ, ಫುಟ್‍ಪಾತ್‌ನಲ್ಲಿ ಕಡಲೆಕಾಯಿ ಮಾರಾಟ ಮಾಡುತ್ತಿದ್ದ ಅಂಗಡಿಯ ಎದುರು ಬೈಕ್ ನಿಲ್ಲಿಸಿಕೊಂಡು ಮಾತನಾಡುತ್ತಿದ್ದ ರೈತನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ಠಾಣೆಗೆ ದೂರು ನೀಡಲು ಹೋದಾಗ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನನ್ನು ರಾತ್ರಿ 9ರವರೆಗೆ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡು ದೌರ್ಜನ್ಯ ಮಾಡಿದ್ದಾರೆ ಎಂದು ಆಪಾದಿಸಿ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.