ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಹನ ದಟ್ಟಣೆ .. ಜನಸಂಚಾರಕ್ಕೆ ಅಡಚಣೆ...

ಭದ್ರಾವತಿ: ರಸ್ತೆ ಒತ್ತುವರಿ, ಬಗೆಹರಿಯದ ಸಮಸ್ಯೆ
ಕಿರಣ್ ಕುಮಾರ್
Published 9 ಆಗಸ್ಟ್ 2024, 6:15 IST
Last Updated 9 ಆಗಸ್ಟ್ 2024, 6:15 IST
ಅಕ್ಷರ ಗಾತ್ರ

ಭದ್ರಾವತಿ: ನಗರದ ಮುಖ್ಯ ರಸ್ತೆಗಳಲ್ಲಿ ಮನಬಂದಂತೆ ವಾಹನಗಳ ನಿಲುಗಡೆ, ವ್ಯಾಪಾರಿಗಳಿಂದ ರಸ್ತೆ ಅತಿಕ್ರಮಣ, ದ್ವಾರ ಬಾಗಿಲುಗಳ ನಿರ್ಮಾಣ  ಕಾಮಗಾರಿಯ ವಿಳಂಬ ಪ್ರಕ್ರಿಯೆಯಿಂದಾಗಿ ವಾಹನ ದಟ್ಟಣೆ ಹೆಚ್ಚಾಗುತ್ತ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಇಲ್ಲಿನ ಡಾ.ರಾಜಕುಮಾರ್ ರಸ್ತೆ, ಚನ್ನಗಿರಿ ರಸ್ತೆ, ಬಸವೇಶ್ವರ ವೃತ್ತ, ರಂಗಪ್ಪ ವೃತ್ತ, ಡಬಲ್ ಟಾಕೀಸ್ ರಸ್ತೆಗಳು ನಿತ್ಯ ಜನದಟ್ಟಣೆಯಿಂದ ಕೂಡಿರುತ್ತವೆ. ಶಾಲೆ– ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು, ಸರ್ಕಾರಿ ಕಚೇರಿಗಳಿಗೆ, ಮಾರುಕಟ್ಟೆಗೆ ಬರುವ ಗ್ರಾಮಸ್ಥರು ಈ ಪ್ರದೇಶಗಳಲ್ಲಿ ಹೆಚ್ಚು ತಿರುಗಾಡುತ್ತಾರೆ.

ಡಾ. ರಾಜಕುಮಾರ್ ರಸ್ತೆಯಲ್ಲಿ ಬೀದಿಬದಿಯ ವ್ಯಾಪಾರಿಗಳು ನಿಗದಿಪಡಿಸಿದ ಸ್ಥಳದಿಂದ ಮುಂದೆ ಬಂದು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಮಳಿಗೆ ನಿರ್ಮಿಸಿ ಸ್ಥಳ ನಿಗದಿಪಡಿಸಿದ್ದರೂ ವ್ಯಾಪಾರಸ್ಥರು ಬೀದಿ ಬದಿಯಲ್ಲಿಯೇ ಮಾರಾಟ ನಡೆಸುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಸ್ಥಳವಿಲ್ಲದೆ ಪಾದಚಾರಿಗಳು, ವಾಹನ ಸವಾರರು ಪರದಾಡುವಂತಾಗಿದೆ. ಸದಾ ವಾಹನ ದಟ್ಟಣೆ ಸಾಮಾನ್ಯವಾಗಿದೆ.

ಇದೇ ರಸ್ತೆಯ ಬಸವೇಶ್ವರ ವೃತ್ತದಲ್ಲಿ ಸಂಜೆ ಆಗುತ್ತಿದ್ದಂತೆಯೇ ತಿಂಡಿ ಅಂಗಡಿಗಳು ತೆರೆದುಕೊಳ್ಳುತ್ತವೆ. ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಲು ಕಾರುಗಳಲ್ಲಿ, ದ್ವಿಚಕ್ರ ವಾಹನಗಳಲ್ಲಿ ಅಧಿಕ ಸಂಖ್ಯೆಯ ಜನರು ಬರುವುದರಿಂದ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ವ್ಯವಸ್ಥಿತವಾದ ವಾಹನ ನಿಲುಗಡೆ ಇಲ್ಲದಿರುವುದು ಈ ಸ್ಥಳದಲ್ಲಿ ಹೆಚ್ಚಿನ ಸಮಸ್ಯೆ ತಂದೊಡ್ಡಿದೆ. ಈ ರಸ್ತೆಯಲ್ಲಿ ಶಾಲೆ– ಕಾಲೇಜು, ಕನಕ ಮಂಟಪದ ಆಟದ ಮೈದಾನ, ಕಲ್ಯಾಣ ಮಂಟಪ, ಚಿತ್ರಮಂದಿರ, ಹೋಟೆಲ್‌ಗಳು ಇರುವುದರಿಂದ ಪಾರ್ಕಿಂಗ್‌ಗೆ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದು ಶಿಕ್ಷಕ ಸಂತೋಷ್ ವಿವರಿಸಿದರು.

ಮಂದಗತಿಯಲ್ಲಿ ಕಮಾನು ಕಾಮಗಾರಿ: ನಗರದ ರಂಗಪ್ಪ ವೃತ್ತದಲ್ಲಿ ಹೊಸಮನೆ ರಸ್ತೆಗೆ ಕಮಾನು (ದ್ವಾರ ಬಾಗಿಲು) ನಿರ್ಮಿಸಲಾಗುತ್ತಿದೆ. ರಸ್ತೆಯ ಮಧ್ಯ ಭಾಗದಲ್ಲಿ ಬೃಹತ್ ಕಂಬಗಳನ್ನು ಕಟ್ಟಲಾಗಿದೆ. ಎತ್ತರದಲ್ಲಿಯೂ ವ್ಯತ್ಯಯ ಕಂಡುಬರುತ್ತಿದೆ. ಇದರಲ್ಲಿ ಭಾರಿ ವಾಹನಗಳು, ಸರಕು ಸಾಗಣೆ ಲಾರಿಗಳು ಒಳ ಬಂದರೆ ಸಮಸ್ಯೆ ಎದುರಾಗುತ್ತಿದೆ.

ಚನ್ನಗಿರಿ ರಸ್ತೆ ಮಾರ್ಗ ಪ್ರತಿದಿನವೂ ಸಂಚಾರ ದಟ್ಟಣೆಯಿಂದ ತುಂಬಿರುತ್ತದೆ. ಅಲ್ಲದೆ, ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದೆಲ್ಲದರ ಪರಿಣಾಮ ರಸ್ತೆ ಅತ್ಯಂತ ಕಿರಿದಾಗಿ ಮಾರ್ಪಟ್ಟಿದೆ ಎಂಬುದು ಸಾರ್ವಜನಿಕರ ದೂರು.

ಕಿರಿದಾದ ಸಿ.ಎನ್ ರಸ್ತೆಯಲ್ಲಿ ಸಂಚರಿಸಲು ಪರದಾಡುತ್ತಿರುವ ಚಾಲಕರು
ಕಿರಿದಾದ ಸಿ.ಎನ್ ರಸ್ತೆಯಲ್ಲಿ ಸಂಚರಿಸಲು ಪರದಾಡುತ್ತಿರುವ ಚಾಲಕರು
ಬಸವೇಶ್ವರ ವೃತ್ತದಲ್ಲಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿರುವ ವಾಹನಗಳು
ಬಸವೇಶ್ವರ ವೃತ್ತದಲ್ಲಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿರುವ ವಾಹನಗಳು
ಡಾ. ರಾಜಕುಮಾರ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ರಸ್ತೆ ಒತ್ತುವರಿ ಮಾಡಿರುವುದು
ಡಾ. ರಾಜಕುಮಾರ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ರಸ್ತೆ ಒತ್ತುವರಿ ಮಾಡಿರುವುದು
ಹೊಸಮನೆ ರಸ್ತೆಯಲ್ಲಿ ನಿರ್ಮಿಸುತ್ತಿರುವ ದ್ವಾರ ಬಾಗಿಲು
ಹೊಸಮನೆ ರಸ್ತೆಯಲ್ಲಿ ನಿರ್ಮಿಸುತ್ತಿರುವ ದ್ವಾರ ಬಾಗಿಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT