ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಗಳ ಜತೆಗೆ ಸಮಾಜಕ್ಕೂ ನಿಷ್ಠರಾಗಿರಿ: ಈಶ್ವರಾನಂದಪುರಿ ಸ್ವಾಮೀಜಿ

Last Updated 27 ಅಕ್ಟೋಬರ್ 2021, 5:10 IST
ಅಕ್ಷರ ಗಾತ್ರ

ಶಿಕಾರಿಪುರ: ಪಕ್ಷ ರಾಜಕಾರಣಕ್ಕೆ ಸೀಮಿತರಾಗದೇ ಕುರುಬ ಸಮಾಜದ ಸಂಘಟನೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಪೀಠಾಧ್ಯಕ್ಷ ಈಶ್ವರಾನಂದಪುರಿ ಸ್ವಾಮೀಜಿ ಸಲಹೆ ನೀಡಿದರು.

‘ನೂರು ದಿನ ಸಾವಿರ ಹಳ್ಳಿ' ಕಾರ್ಯಕ್ರಮದ ಪ್ರಯುಕ್ತ ಪಟ್ಟಣ ಸಮೀಪದ ಕನಕ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ನಡೆದ ಕುರುಬ ಸಮಾಜದ ಮುಖಂಡರ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ರಾಜಕೀಯ ಅಧಿಕಾರ ಶಾಶ್ವತ ಅಲ್ಲ. ಆದರೆ ಸಮುದಾಯದ ಮಠಗಳು ಸೂರ್ಯ ಚಂದ್ರ ಇರುವವರೆಗೂ ಇರುತ್ತವೆ. ಸಮುದಾಯದವರು ಪಕ್ಷ ನಿಷ್ಠೆ ಜತೆ ಸಮಾಜಕ್ಕೆ ನಿಷ್ಠರಾಗಿರಬೇಕು. ಚುನಾವಣೆ ಬಂದಾಗ ಮಾತ್ರ ಪಕ್ಷ ರಾಜಕಾರಣ ಮಾಡಬೇಕು. ಉಳಿದ ಸಂದರ್ಭದಲ್ಲಿ ಸಮಾಜ ಸಂಘಟನೆಗೆ ಆದ್ಯತೆ ನೀಡಬೇಕು. ಮಠದ ಕಾರ್ಯ ಗಳಿಗೆ ಸಮಾಜದವರು ಸಹಕರಿಸಬೇಕು’ ಎಂದು ಸಲಹೆ ನೀಡಿದರು.

‘ಮಠದೊಂದಿಗೆ ಭಕ್ತರು ನಿರಂತರ ಸಂಪರ್ಕ ಹೊಂದಬೇಕು. ನಮ್ಮ ಮಠಗಳಲ್ಲಿ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯಲು ಭಕ್ತರ ಸಹಕಾರ ಮುಖ್ಯವಾಗಿದೆ. ನಮ್ಮ ಮಠ ನಮ್ಮ ಸ್ವಾಮೀಜಿ ಎಂಬ ಕಲ್ಪನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಸಂಕ್ರಾಂತಿಯಿಂದ ಹೊಸದುರ್ಗ ಶಾಖಾ ಮಠದಿಂದ 'ನೂರು ದಿನ ಸಾವಿರ ಹಳ್ಳಿ' ಕಾರ್ಯಕ್ರಮ ಆಯೋಜಿಸಿದ್ದು, ನೂರು ದಿನಗಳಲ್ಲಿ ಸಾವಿರ ಹಳ್ಳಿಗಳಿಗೆ ಭೇಟಿ ನೀಡಲಾಗುತ್ತದೆ. ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

‘ಕುರುಬ ಕೂಡಿ ಕೆಟ್ಟ, ದೊಂಬ ಅಗಲಿ ಕೆಟ್ಟ ಎಂಬ ಮಾತು ಹಿಂದಿತ್ತು. ಆದರೆ ಕುರುಬ ಕೂಡಿದರೆ ಕೆಡುವುದಿಲ್ಲ, ಕಟ್ಟುತ್ತಾನೆ. ವಿಜಯನಗರ ಸಾಮ್ರಾಜ್ಯ ಕಟ್ಟಿದವರು ಕುರುಬ ಸಮುದಾಯದ ಹಕ್ಕ–ಬುಕ್ಕರಾಗಿದ್ದಾರೆ ಎಂದು ಶ್ಲಾಘಿಸಿದ ಅವರು, ಪಟ್ಟಣದಲ್ಲಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವು ಮಾಡಿದ್ದು ಉತ್ತಮ ಬೆಳವಣಿಗೆಯಲ್ಲ. ಆದರೆ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಸೂಕ್ತ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ಅವರು ನನ್ನ ಜತೆ ಮಾತನಾಡಿದ್ದಾರೆ’ ಎಂದರು.

ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಕಬಾಡಿ ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುರುಬ ಸಮಾಜ ಉಪಾಧ್ಯಕ್ಷ ಭದ್ರಾಪುರ ಹಾಲಪ್ಪ, ತಾಲ್ಲೂಕು ಗೌರವಾಧ್ಯಕ್ಷ ನಗರದ ಮಹಾದೇವಪ್ಪ, ಉಪಾಧ್ಯಕ್ಷ ಗೋಣಿ ಮಾಲತೇಶ್, ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಜೆ. ಸುಕೇಂದ್ರಪ್ಪ, ರಾಜ್ಯ ಪ್ರದೇಶ ಕುರುಬರ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಎಂ. ಶರತ್, ನಿರ್ದೇಶಕ ಕೆ. ರಂಗನಾಥ್, ಸಂಚಾರಿ ಕುರಿಗಾರರ ಸಂಘ ರಾಜ್ಯ ಉಪಾಧ್ಯಕ್ಷ ಡಾ. ಪ್ರಶಾಂತ್, ಚಂದ್ರಗುಪ್ತಮೌರ್ಯ ಸೊಸೈಟಿ ಅಧ್ಯಕ್ಷ ಸಕಲೇಶ್ ಹುಲ್ಮಾರ್, ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಸದಸ್ಯರಾದ ಹುಲ್ಮಾರ್ ಮಹೇಶ್, ಗೋಣಿ ಪ್ರಕಾಶ್, ಕುರುಬ ಸಮಾಜ ಕಾರ್ಯದರ್ಶಿ ಬಿ.ಎಲ್. ರಾಜು, ಕನಕ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್.ಎಸ್. ರಘು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT