ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಧ್ವಜದ ಹೆಸರಿನಲ್ಲಿ ಪಕ್ಷ ರಾಜಕಾರಣ: ಗೋಪಾಲಕೃಷ್ಣ ಬೇಳೂರು

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪ
Last Updated 11 ಆಗಸ್ಟ್ 2022, 4:38 IST
ಅಕ್ಷರ ಗಾತ್ರ

ಸಾಗರ: ‘ಹರ್ ಘರ್ ತಿರಂಗಾ ಅಭಿಯಾನದಡಿ ರಾಷ್ಟ್ರಧ್ವಜವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಧ್ವಜದ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ’ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದ್ದಾರೆ.

‘ಬಿಜೆಪಿಯ ಯಾವುದೇ ಮುಖಂಡರು ಸ್ವಾತಂತ್ರ್ಯದ ಹೋರಾಟದಲ್ಲಿ ಭಾಗವಹಿಸಿದ ಇತಿಹಾಸವಿಲ್ಲ. ಜಾತಿ–ಧರ್ಮದ ಹೆಸರಿನಲ್ಲಿ ವಿಭಜನೆಯ ರಾಜಕಾರಣ ಮಾಡುವ ಬಿಜೆಪಿಯವರು ಈಗ ಎಲ್ಲರೂ ತಮ್ಮ ಮನೆಯ ಮೇಲೆ ಧ್ವಜ ಹಾರಿಸಬೇಕು ಎಂದು ಹೇಳುತ್ತಿರುವುದರ ಹಿಂದೆ ಚುನಾವಣೆ ಹತ್ತಿರ ಬರುತ್ತಿರುವ ಕಾರಣವಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

‘ಅತಿವೃಷ್ಟಿಯಿಂದಾಗಿ ಸಾಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಅಪಾರ ಹಾನಿ ಉಂಟಾಗಿದೆ. ಬೆಳೆ ಕಳೆದುಕೊಂಡ ರೈತರಿಗೆ, ಮನೆ ಕಳೆದುಕೊಂಡ ಸಂತ್ರಸ್ತರಿಗೆ ನೆರವು ನೀಡುವ ಬದಲು ಶಾಸಕ ಹಾಲಪ್ಪ ಹರತಾಳು ಅವರು ಧ್ವಜದ ಹೆಸರಿನಲ್ಲಿ ರಾಜಕೀಯ ಮಾಡಲು ಮುಂದಾಗಿದ್ದಾರೆ. ಜನರ ನೋವಿಗೆ ಸ್ಪಂದಿಸದೆ ಇದ್ದರೆ ಸರ್ಕಾರಕ್ಕೆ ಹಾಗೂ ಶಾಸಕರಿಗೆ ಜನರ ಶಾಪ ತಟ್ಟಲಿದೆ’ ಎಂದು ಹೇಳಿದರು.

ತಾಲ್ಲೂಕು ಆಡಳಿತ ಈಚೆಗೆ ನಡೆಸಿದ ವ್ಯಸನಮುಕ್ತ ಆಂದೋಲನದಲ್ಲಿ ಶಾಸಕ ಹಾಲಪ್ಪ ಅವರು ಭಾಗವಹಿಸಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಹತ್ತಾರು ಬಾರ್‌ಗಳ ಮಾಲೀಕರಾಗಿರುವ, ಎಂಎಸ್‌ಐಎಲ್ ಅಧ್ಯಕ್ಷರಾದ ನಂತರ ಹಳ್ಳಿ ಹಳ್ಳಿಗಳಲ್ಲಿ ವೈನ್ ಸ್ಟೋರ್ ತೆರೆಯಲು ಪ್ರೋತ್ಸಾಹ ನೀಡುತ್ತಿರುವ ಹಾಲಪ್ಪ ಅವರು ವ್ಯಸನಮುಕ್ತ ಆಂದೋಲನದಲ್ಲಿ ಕಾಣಿಸಿಕೊಂಡಿದ್ದು ನಗೆ ತರುವ ವಿಷಯವಾಗಿದೆ ಎಂದು ಟೀಕಿಸಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶ್ ಬಾಬು, ಕಾಂಗ್ರೆಸ್‌ನ ಪ್ರಮುಖರಾದ ಗಣಪತಿ ಮಂಡಗಳಲೆ, ಮಹಾಬಲ ಕೌತಿ, ಶ್ರೀನಾಥ್, ಡಿ.ದಿನೇಶ್, ತಾರಾಮೂರ್ತಿ, ಸಂತೋಷ್ ಸದ್ಗುರು, ಸೈಯದ್ ಅನ್ವರ್, ರವಿ ಲಿಂಗನಮಕ್ಕಿ, ಯಶವಂತ ಫಣಿ, ಆನಂದ ಭೀಮನೇರಿ, ಕೃಷ್ಣಪ್ಪ, ಶ್ರೀಧರ ಪಟೇಲ್ ಇದ್ದರು.

ತಪ್ಪು ಕಾಣಿಕೆ ಹಾಕಲು ಶಾಸಕರು ಧರ್ಮಸ್ಥಳಕ್ಕೆ

‘ಈ ಹಿಂದೆ ಶಾಸಕ ಹಾಲಪ್ಪ ಹರತಾಳು ಅವರು ಮರಳು ಮಾಫಿಯಾದಿಂದ ಯಾವುದೇ ಲಂಚ ಸ್ವೀಕರಿಸಿಲ್ಲ ಎಂದು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ಹೋಗಿದ್ದರು. ನಂತರ ಅವರ ರಾಜಕೀಯ ಜೀವನದಲ್ಲಿ ಸಾಕಷ್ಟು ಏರುಪೇರು ಆಗಿದೆ. ಹೀಗಾಗಿ ಹಿತೈಷಿಗಳ ಸಲಹೆ ಮೇರೆಗೆ ಅವರು ತಪ್ಪು ಕಾಣಿಕೆ ಹಾಕಲು ಈಗ ಧರ್ಮಸ್ಥಳಕ್ಕೆ ಹೋಗಿರಬಹುದು’ ಎಂದು ಬೇಳೂರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT