ಶನಿವಾರ, ಸೆಪ್ಟೆಂಬರ್ 18, 2021
23 °C
ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಒತ್ತಾಯ

ಈಶ್ವರಪ್ಪಗೆ ಆರ್‌ಎಸ್‌ಎಸ್‌ ಮುಖಂಡರು ಬುದ್ಧಿ ಕಲಿಸಲಿ: ಗೋಪಾಲಕೃಷ್ಣ ಬೇಳೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ಮಾತು ಮಾತಿಗೆ ಆರ್‌ಎಸ್‍ಎಸ್ ಸಂಸ್ಕೃತಿಯಲ್ಲಿ ಬೆಳೆದು ಬಂದವನು ನಾನು ಎಂದು ಗರ್ವದಿಂದ ಹೇಳುವ ಈಶ್ವರಪ್ಪ ಅವರಿಗೆ ಆರ್‌ಎಸ್‍ಎಸ್ ಮುಖಂಡರೇ ಕಿವಿಹಿಂಡಿ ಬುದ್ಧಿ ಹೇಳಬೇಕು’ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಆಗ್ರಹಿಸಿದರು.

‘ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್‌ ನಾಯಕರನ್ನು ಟೀಕಿಸುವ ಭರದಲ್ಲಿ ನಾಲಿಗೆ ಮೇಲಿನ ಹಿಡಿತ ಕಳೆದುಕೊಂಡು ಬಾಯಿಚಪಲಕ್ಕಾಗಿ
ಮನಸ್ಸಿಗೆ ಬಂದಂತೆ ಈಶ್ವರಪ್ಪ ಮಾತನಾಡಿದ್ದಾರೆ. ಪ್ರಮಾಣವಚನ ಸ್ವೀಕರಿಸುವಾಗ ರಾಗ, ದ್ವೇಷವಿಲ್ಲದೆ ನಡೆದುಕೊಳ್ಳುವೆ ಎಂದು ದೇವರ ಹೆಸರಲ್ಲಿ ಪ್ರಮಾಣ ಮಾಡಿದ ಅವರು ಈ ರೀತಿ ಅವಾಚ್ಯವಾಗಿ ಮಾತನಾಡುತ್ತಾರೆ ಎಂದರೆ ಭಾರತ ಮಾತೆಗೆ ಕೊಡುವ ಗೌರವ ಇದೆ ಏನು? ಸಂಸ್ಕೃತಿ, ಸಂಸ್ಕಾರದ ಅರಿವಿಲ್ಲದ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಈಶ್ವರಪ್ಪ ಅವರು ಪ್ರಚೋದನಕಾರಿ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರು. ಈ ಹಿಂದೆಯೂ ಇದೇ ರೀತಿ ಹೇಳಿಕೆ ಕೊಟ್ಟಿದ್ದರು. ಹೊಡೆಯಿರಿ, ಬಡಿಯಿರಿ ಎನ್ನುವುದು ಅದ್ಯಾವ ಸಂಸ್ಕೃತಿಯೋ ನಮಗಂತೂ ಗೊತ್ತಿಲ್ಲ. ಈ ಕೆಟ್ಟ ವರ್ತನೆ ಅವರು ಬಿಡದೇ ಹೋದರೆ ಮುದೊಂದು ದಿನ ಭಾರಿ ಬೆಲೆ ತೆರಬೇಕಾಗುತ್ತದೆ. ರಾಜ್ಯಪಾಲರು ಅವರ ಉದ್ಧಟತನವನ್ನು ಕ್ಷಮಿಸದೆ ಸಂಪುಟದಿಂದ ಕೈ ಬಿಡಬೇಕು’ ಎಂದು ಒತ್ತಾಯಿಸಿದರು.

ಇ.ಡಿ ದಾಳಿ ರಾಜಕೀಯ ಪ್ರೇರಿತ: ‘ಜಮೀರ್ ಅಹಮ್ಮದ್ ಮನೆ ಮೇಲೆ ಇ.ಡಿ ದಾಳಿ ನಡೆದದ್ದು ರಾಜಕೀಯ ಪ್ರೇರಿತ. ಯಡಿಯೂರಪ್ಪ ಅವರ ಮಕ್ಕಳ ಆಸ್ತಿಯ ವಿವರ ತನಿಖಾ ಸಂಸ್ಥೆಗಳಿಗೆ ಗೊತ್ತಿಲ್ಲವೆ?. ಅವರ ಆಸ್ತಿ ಹೆಚ್ಚಾಗಿಲ್ಲವೇ? ಅವರೇನು ಶುಂಠಿ, ಭತ್ತ ಬೆಳೆದಿದ್ದಾರೆಯೇ’ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ವರ್ಗಾವಣೆ ಮಾಡಿ: ‘ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಅವರು ಸಂಸದ ಬಿ.ವೈ.ರಾಘವೇಂದ್ರ ಅವರ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ತಡೆಯುವಲ್ಲಿ ವಿಫಲರಾಗಿದ್ದಾರೆ. ಜೋಗ ಜಲಪಾತ ವೀಕ್ಷಣೆಗೆ ಪ್ರತಿದಿನ ಸಾವಿರಾರೂ ಜನ ಬರುತ್ತಿದ್ದರೂ ಯಾವ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗಲು ಜಿಲ್ಲಾಡಳಿತವೇ ಕಾರಣ. ಅವರನ್ನು ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪಂಡಿತ್‌ ವಿ.ವಿಶ್ವನಾಥ್ (ಕಾಶಿ), ಜಿ.ಡಿ.ಮಂಜುನಾಥ್, ರಾಜಶೇಖರ್ ಇದ್ದರು.

ಹಾಲಪ್ಪರಿಗೆ ಸಚಿವ ಸ್ಥಾನ ತಪ್ಪಲು ಪೂಜಾರಿ ಕಾರಣ

‘ಕೋಟಾ ಶ್ರೀನಿವಾಸ ಪೂಜಾರಿ ಅವರು ಹರತಾಳು ಹಾಲಪ್ಪ ಅವರಿಗೆ ಸಚಿವ ಸ್ಥಾನವನ್ನು ತಪ್ಪಿಸಿದ್ದಾರೆ. ಒಂದು ಕಾಲದಲ್ಲಿ ನನಗೂ ಸಚಿವ ಪಟ್ಟವನ್ನು ತಪ್ಪಿಸಲಾಗಿತ್ತು. ಈಗ ಅದು ಸರಿ ಹೋಗಿದೆ. ಈ ಹಿಂದೆ ಸಿಗಂದೂರು ವಿಷಯಕ್ಕೆ ಬಂದರೆ ಮೂವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಬಹಿರಂಗವಾಗಿ ಹೇಳಿದ್ದೆ. ಆ ಮಾತು ಸತ್ಯವಾಗಿದೆ. ಒಬ್ಬರು ಈಗಾಗಲೇ ಅಧಿಕಾರ ಕಳೆದುಕೊಂಡಿದ್ದಾರೆ. ಇನ್ನಿಬ್ಬರು ಬಾಕಿ ಉಳಿದಿದ್ದಾರೆ’ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು