ಭಾನುವಾರ, ಸೆಪ್ಟೆಂಬರ್ 26, 2021
21 °C
ಅಪಾಯದಲ್ಲಿ ಭದ್ರಾ ಜಲಾಶಯ: ಕಳವಳ

ಭದ್ರಾ ಜಲಾಶಯದ ಬುಡದಲ್ಲಿಯೇ ಬಹುದೊಡ್ಡ ಹಗರಣ: ಕೆ.ಟಿ.ಗಂಗಾಧರ್ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ವಿಶ್ವಬ್ಯಾಂಕ್ ನೆರವಿನೊಂದಿಗೆ ಭದ್ರಾ ಜಲಾಶಯದಲ್ಲಿ ಕೈಗೊಂಡಿದ್ದ ದುರಸ್ತಿ ಕಾಮಗಾರಿ ಅತ್ಯಂತ ಕಳಪೆ ಎನ್ನುವುದು ಸಾಬೀತಾಗಿದ್ದು, ತುರ್ತಾಗಿ ದುರಸ್ತಿ ಮಾಡದೇ ಹೋದರೆ ಇಡೀ ಜಲಾಶಯಕ್ಕೆ ಅಪಾಯ ಎದುರಾಗಬಹುದು ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ಕಳವಳ ವ್ಯಕ್ತಪಡಿಸಿದರು.

‘ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ ಜಿಲ್ಲೆಗಳ ಜನರ ಜೀವನಾಡಿ. ಕುಡಿಯುವ ನೀರು, ಕೈಗಾರಿಕೆ ಮತ್ತು ನೀರಾವರಿಗೆ ಇರುವ ಪ್ರಮುಖ ಜಲಾಶಯ. ಈ ಜಲಾಶಯದ ದುರಸ್ತಿ ಕಾರ್ಯ 2016ರಲ್ಲಿ ಆರಂಭವಾಗಿ 2018ರಲ್ಲಿ ಪೂರ್ಣ
ಗೊಂಡಿದೆ. ಕಾಮಗಾರಿ ಮುಗಿದ ನಂತರ ನೀರು ಬಿಟ್ಟಾಗ ಇಡೀ ಕಾಮಗಾರಿ ನೀರಿನಲ್ಲಿ ಕೊಚ್ಚಿಹೋಗಿದೆ. ₹ 7 ಕೋಟಿ ಹಣ ಜಲಾಶಯದ ತಳದಲ್ಲಿಯೇ ಮುಚ್ಚಿಹೋಗಿದೆ. ಕಾಮಗಾರಿಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಭದ್ರಾ ಜಲಾಶಯದ ಬುಡದಲ್ಲಿಯೇ ಈ ಬಹುದೊಡ್ಡ ಹಗರಣ ನಡೆದಿದೆ. ಖಾಸಗಿ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಮಧ್ಯೆ ಹೊಂದಾಣಿಕೆಯೂ ಇರಲಿಲ್ಲ. ಈಗ ಜಲಾಶಯಕ್ಕೆ ಕುತ್ತು ಬಂದಿದೆ. ತುರ್ತಾಗಿ ದುರಸ್ತಿ ಮಾಡಬೇಕಿದೆ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ದುರಸ್ತಿ ಮಾಡದೆ ಹೋದರೆ ಇಡೀ ಜಲಾಶಯಕ್ಕೆ ಹಾನಿಯಾಗಬಹುದು’ ಎಂದು ಎಚ್ಚರಿಸಿದರು.

ಈ ದುರಸ್ತಿ ಯೋಜನೆಯೇ ಅವೈಜ್ಞಾನಿಕವಾಗಿತ್ತು. ಯಾವುದೇ ಯೋಜನೆ ಆರಂಭಕ್ಕೆ ಮೊದಲು ತಜ್ಞರ ಸಮಿತಿಯ ಒಪ್ಪಿಗೆ ಪಡೆಯಬೇಕಿತ್ತು. ಅವರು ಯಾವ ಒಪ್ಪಿಗೆಯನ್ನೂ ಪಡೆಯದೆ ಹಣ ಲೂಟಿ ಮಾಡಲು ಕೃತಕ ಯೋಜನೆ ರೂಪಿಸಿದ್ದರು. ಹಾಗಾಗಿ, ಕಳಪೆ ಕಾಮಗಾರಿ ಮಾಡಿದ್ದಾರೆ. ‌ಇದರಿಂದ ವಿಪರೀತ ನೀರು ಸೋರಿಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಆ ಪ್ರದೇಶದಲ್ಲಿ ಮೊಕ್ಕಾಂ ಹೂಡಿ ತಜ್ಞರೊಂದಿಗೆ ಪರಿಶೀಲನೆ ನಡೆಸಿದ್ದೇವೆ. ಇದೊಂದು ದೊಡ್ಡ ಹಗರಣ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನೀರಾವರಿ ಸಚಿವರು ಇದರ ಸಂಪೂರ್ಣ ತನಿಖೆ ನಡೆಸಬೇಕು. ಜಲಾಶಯದ ಉಳಿವಿಗಾಗಿ ಹೊಸದಾಗಿ ಕಾಮಗಾರಿ ಕೈಗೊಳ್ಳಬೇಕು. ಲೂಟಿ ಹೊಡೆದ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು