ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಗೆ, ಆತಂಕದ ನಡುವೆಯೂ ಪ್ರಚಾರದ ಕಾವು

ಭದ್ರಾವತಿ ನಗರಸಭಾ ಚುನಾವಣೆ; ತಾಲ್ಲೂಕಿನಲ್ಲಿ ಹೆಚ್ಚಿದ ಕೊರೊನಾ ಪ್ರಕರಣಗಳ ಸಂಖ್ಯೆ
Last Updated 22 ಏಪ್ರಿಲ್ 2021, 5:32 IST
ಅಕ್ಷರ ಗಾತ್ರ

ಭದ್ರಾವತಿ: ಒಂದೆಡೆ ಬಿಸಿಲ ಧಗೆ, ಮತ್ತೊಂದೆಡೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿನ ನಿರಂತರ ಹೆಚ್ಚಳದ ನಡುವೆಯೂ ನಗರಸಭೆ ಚುನಾವಣೆ ಪ್ರಚಾರದ ಭರಾಟೆ ಹೆಚ್ಚುತ್ತಿದೆ.

ಪ್ರಮುಖ ರಾಜಕೀಯ ಪಕ್ಷಗಳ ಶಾಸಕರು, ಸಚಿವರು, ಸಂಸದರು ನಗರಕ್ಕೆ ಭೇಟಿ ನೀಡಿ ತಮ್ಮ ಅಭ್ಯರ್ಥಿಗಳ ಗೆಲುವಿಗೆ ನಿರಂತರ ಪ್ರಯತ್ನ ನಡೆಸಿದ್ದರೆ, ಮತ್ತೊಂದೆಡೆ ಪಕ್ಷೇತರರು ಸದ್ದಿಲ್ಲದೆ ಮತಬುಟ್ಟಿ ಬಲ ಮಾಡಿಕೊಳ್ಳುವಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ರಥವೇರಿದ ಶಾಸಕರು: ಶಾಸಕ ಬಿ.ಕೆ.ಸಂಗಮೇಶ್ವರ ತೆರೆದ ವಾಹನದಲ್ಲಿ ನಿರ್ಮಿಸಿರುವ ರಥವೇರಿ ಅಭ್ಯರ್ಥಿ ಹಾಗೂ ಪಕ್ಷದ ಮುಖಂಡರನ್ನು ಜತೆಗಿಟ್ಟುಕೊಂಡು ಪ್ರತಿ ವಾರ್ಡ್‌ನ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಮತಯಾಚನೆ ನಡೆಸಿದರು.

ಬಿಜೆಪಿ ದಂಡು: ಚುನಾವಣಾ ವೇಳಾಪಟ್ಟಿ ಪ್ರಕಟವಾದ ದಿನದಿಂದ ಭಾರಿ ಕಸರತ್ತು ಆರಂಭಿಸಿದ ಬಿಜೆಪಿ, ಅಭ್ಯರ್ಥಿಗಳ ಆಯ್ಕೆಯಲ್ಲೂ ಕಾರ್ಯಕರ್ತರಿಗೆ ಮಣೆ ಹಾಕುವ ಮೂಲಕ ನಿಷ್ಠಾವಂತರಲ್ಲಿ ಹುರುಪು ಹೆಚ್ಚಿಸುವ ಕೆಲಸ ನಡೆಸಿದೆ.

ಈಗ ಪ್ರಚಾರ ಕಣಕ್ಕೆ ಕೆ.ಎಸ್.ಈಶ್ವರಪ್ಪ, ರಾಘವೇಂದ್ರ ಸೇರಿ ವಿವಿಧ ಮೋರ್ಚಾ ಮುಖಂಡರನ್ನು ಹಾಗೂ ಶಿವಮೊಗ್ಗ ಮಹಾನಗರಪಾಲಿಕೆ ಸದಸ್ಯರನ್ನು ನಿಯೋಜಿಸಿದ್ದು, ಅಭಿವೃದ್ಧಿ ಮಂತ್ರದೊಂದಿಗೆ ಕೇಂದ್ರದ ಅಮೃತ್ ಯೋಜನೆಯಿಂದ ಆಗಿರುವ ಲಾಭವನ್ನು ವಿವರಿಸುವ ಕೆಲಸ ನಡೆಸಿದೆ.

ಜೆಡಿಎಸ್ ಪ್ರಚಾರ: ಜೆಡಿಎಸ್‌ ಪಕ್ಷವು ಮಾಜಿ ಶಾಸಕ ಅಪ್ಪಾಜಿ ಹೆಸರಿನಲ್ಲಿ ಎಲ್ಲ ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಘೋಷಿಸಿ ಕೆಲಸ ಮಾಡುವ ಜತೆಗೆ ಅಪ್ಪಾಜಿ ಶಾಸಕತ್ವದ ಅಡಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸ ಕಾರ್ಯವನ್ನು ಜನರಿಗೆ ತಲುಪಿಸುವ ಕೆಲಸ ನಡೆಸಿದೆ.

ಮುಖಂಡರಾದ ಶಾರದಾ ಅಪ್ಪಾಜಿ, ಎಂ.ಎ.ಅಜಿತ್, ಎಸ್.ಕುಮಾರ್, ಆರ್.ಕರುಣಾಮೂರ್ತಿ ಸೇರಿ ಇನ್ನಿತರ ಮುಖಂಡರ ದಂಡು ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಇನ್ನಿತರರ ಹೋರಾಟ: ಕಣದಲ್ಲಿ ಎಎಪಿ, ಜೆಡಿಯು, ಸ್ನೇಹಜೀವಿ ಪೊಲೀಸ್ ಉಮೇಶ್ ಬಳಗ, ವೇಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಸೇರಿ ಇನ್ನಿತರೆ ಪಕ್ಷೇತರರು ಕಣದಲ್ಲಿದ್ದು, ಅವರು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಪ್ರಚಾರ ನಡೆಸಿರುವುದು ಪಕ್ಷಗಳ ಪಾಲಿಗೆ ಒಂದಿಷ್ಟು ತಲೆನೋವಾಗಿ ಪರಿಣಮಿಸಿದೆ.

ಇತರೆ ಪಕ್ಷಗಳ ಹಾಗೂ ಪಕ್ಷೇತರರ ಮತಬುಟ್ಟಿ ಹೆಚ್ಚಾದಷ್ಟೂ ಯಾರಿಗೆ ಲಾಭ, ನಷ್ಟ ಎಂಬುದು ಹೆಚ್ಚು ಚರ್ಚಿತ ಸಂಗತಿಯಾಗಿದೆ. ಅವರ ಪ್ರಚಾರ ಭರಾಟೆ ಸಹ ಸಹಜವಾಗಿ ಹೆಚ್ಚಿದೆ.

ಅಗತ್ಯ ಇರಲಿಲ್ಲ: ‘ಕೊರೊನಾ ಹೆಚ್ಚಿದೆ. ಚುನಾವಣೆ ಅಗತ್ಯ ಇರಲಿಲ್ಲ. ಇಷ್ಟು ವರ್ಷವೇ ಸದಸ್ಯರಿಲ್ಲದೆ ಖಾಲಿ ಇದ್ದ ಸ್ಥಾನಕ್ಕೆ ಈಗ ಚುನಾವಣೆ ನಡೆಸುವ ಅಗತ್ಯ ಇರಲಿಲ್ಲ’ ಎನ್ನುತ್ತಾರೆ ಬಿಎಸ್ಸಿ ಪದವೀಧರೆ ಪುಷ್ಪಲತಾ.

‘ಕಳೆದ ಸಾರಿ ಗೆದ್ದವರು ಪುನಃ ನಮ್ಮ ಬಳಿ ಬಂದು ಮತ ಕೇಳುತ್ತಿದ್ದಾರೆ. ಹೋದ ಸರಿ ಭರವಸೆ ನೀಡಿ ಹೋಗಿದ್ದವರು ಕೆಲಸವೇ
ಮಾಡಿಲ್ಲ. ಈಗ ಮತ್ತೆ ಮತ ಕೇಳುತ್ತಿದ್ದಾರೆ’ ಎನ್ನುತ್ತಾರೆ ಹಳೇನಗರದ ಸುಶೀಲಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT