ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ವ್ಯಕ್ತಿ ಪ್ರತಿಷ್ಠೆಯ ಕಣದಲ್ಲಿ ಪಕ್ಷಗಳ ಕಾರುಬಾರು

ನಗರಸಭೆಯ 29ನೇ ವಾರ್ಡ್‌ಗೆ ಸೆ.3ರಂದು ಮರು ಚುನಾವಣೆ
Last Updated 25 ಆಗಸ್ಟ್ 2021, 5:48 IST
ಅಕ್ಷರ ಗಾತ್ರ

ಭದ್ರಾವತಿ: ಕ್ಷೇತ್ರದ ವ್ಯಕ್ತಿ ಪ್ರತಿಷ್ಠೆಯ ರಾಜಕಾರಣದ ಮತ್ತೊಂದು ಹಣಾಹಣಿಗೆ ಸೆ.3ರಂದು ನಡೆಯುವ 29ನೇ ವಾರ್ಡ್‌ ಸಜ್ಜಾಗಿದೆ. ವಾರ್ಡ್‌ಗೆ ನಡೆಯುವ ಮರು ಚುನಾವಣೆಯಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳ ಪ್ರಚಾರದ ಕಾರುಬಾರು ಸದ್ದು ಮಾಡುತ್ತಿದೆ.

ಕಿತ್ತೂರುರಾಣಿ ಚನ್ನಮ್ಮ ಲೇಔಟ್, ಎನ್‌ಟಿಬಿ ಲೇಔಟ್ ಹಾಗೂ ಸಿದ್ದಾಪುರ ಹೊಂದಿಕೊಂಡು ಈ ವಾರ್ಡಿನಲ್ಲಿ 3,374 ಮತದಾರರಿದ್ದಾರೆ. ಅವರಲ್ಲಿ 1,686 ಪುರುಷ ಹಾಗೂ 1,688 ಮಹಿಳಾ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಕ್ಷೇತ್ರ ರಾಜಕಾರಣದಲ್ಲಿ ಮಾಜಿ ಶಾಸಕದಿವಂಗತ ಎಂ.ಜೆ.ಅಪ್ಪಾಜಿ, ಹಾಲಿ ಶಾಸಕ ಬಿ.ಕೆ.ಸಂಗಮೇಶ್ವರ ಅವರ ವ್ಯಕ್ತಿ ಪ್ರತಿಷ್ಠೆಯ ಚುನಾವಣೆಗೆ ಮತ್ತೊಂದು ಮೈಲುಗಲ್ಲು ಎಂಬ ರೀತಿಯಲ್ಲಿ ಈ ಮರು ಚುನಾವಣೆ ರಂಗೇರಿದೆ. ಏ. 28ರಂದು ನಡೆದ ನಗರಸಭಾ ಚುನಾವಣೆ ವೇಳೆಯಲ್ಲಿ ಇಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ನಿಧನರಾದ ಹಿನ್ನೆಲೆಯಲ್ಲಿ ರದ್ದಾಗಿದ್ದ ಚುನಾವಣೆ ಈಗ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಮಧ್ಯೆ ಬಿರುಸಿನ ಸ್ಪರ್ಧೆ ಕಾಣುತ್ತಿದೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಹಿರಿಯ ವಕೀಲ ದಿವಂಗತ ಎ.ಬಿ.ನಂಜಪ್ಪ ಅವರ ಪತ್ನಿ ಲೋಹಿತಾ, ಜೆಡಿಎಸ್ ಪಕ್ಷದಿಂದ ಹಿಂದಿನ ನಗರಸಭಾ ಸದಸ್ಯ ಅನಿಲಕುಮಾರ್ ಪತ್ನಿ ನಾಗರತ್ನಾ ಕಣದಲ್ಲಿದ್ದಾರೆ. ಬಿಜೆಪಿ ರಮಾ ವೆಂಕಟೇಶ್ ಅವರನ್ನು ಕಣಕ್ಕೆ ಇಳಿಸಿದೆ. ವಾರದ ಹಿಂದೆಯಷ್ಟೇ ಕಾಂಗ್ರೆಸ್ ಸೇರಿದ ಲೋಹಿತಾ ನಂಜಪ್ಪ ಅವರಿಗೆ ಶಾಸಕ ಬಿ.ಕೆ.ಸಂಗಮೇಶ್ವರ ಪಕ್ಷದ ‘ಬಿ ಫಾರಂ’ ನೀಡುವ ಮೂಲಕ ಜೆಡಿಎಸ್ ಭದ್ರಕೋಟೆಗೆ ಕೈಹಾಕಿದ್ದಾರೆ. ಕಳೆದ ನಗರಸಭೆಯಲ್ಲಿ ಕ್ಷೇತ್ರ ಪ್ರತಿನಿಧಿಸಿದ್ದ ಅನಿಲಕುಮಾರ್ ತಮ್ಮ ಪತ್ನಿ ನಾಗರತ್ನಾ ಅವರನ್ನು ಕಣಕ್ಕೆ ಇಳಿಸುವ ಮೂಲಕ ಅಪ್ಪಾಜಿ ಭದ್ರಕೋಟೆ ಉಳಿಸುವ ಯತ್ನ ನಡೆಸಿದ್ದಾರೆ. ಬಿಜೆಪಿ ಕಳೆದ ಬಾರಿ ಟಿಕೆಟ್ ನೀಡಿದ್ದ ರೂಪ ನಾಗರಾಜ್ ಅವರನ್ನು ಬದಲಿಸಿ, ಸಾಮಾಜಿಕ ಹೋರಾಟಗಾರ್ತಿ ರಮಾ ವೆಂಕಟೇಶ್ ಅವರನ್ನು ಪಕ್ಷಕ್ಕೆ ಸೆಳೆದುಕೊಂಡು ಅಭ್ಯರ್ಥಿಯಾಗಿಸಿದೆ.

ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಶಾಸಕ ಬಿ.ಕೆ.ಸಂಗಮೇಶ್ವರ, ಸಹೋದರ ಬಿ.ಕೆ.ಮೋಹನ್, ಪುತ್ರರಾದ ಗಣೇಶ್, ಬಸವೇಶ್ ಪ್ರಚಾರ ಭರಾಟೆಯಲ್ಲಿದ್ದರೆ, ಜೆಡಿಎಸ್ ಅಭ್ಯರ್ಥಿ ಪರ ಎಂ.ಜೆ. ಅಪ್ಪಾಜಿ ಅವರ ಪತ್ನಿ ಶಾರದಮ್ಮ,
ಪುತ್ರ ಎಂ.ಎ.ಅಜಿತ್ ತಮ್ಮ ಬೆಂಬಲಿಗರ ಜತೆ ತೀವ್ರ ಪ್ರಚಾರದಲ್ಲಿ ತೊಡಗಿದ್ದಾರೆ. ಮೂರು ಪಕ್ಷದ ಅಭ್ಯರ್ಥಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT