ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಕ್ಷೇತ್ರದ ಖಾಸಗೀಕರಣ ಬಿಜೆಪಿ ಗುರಿ

ಬಿಜೆಪಿ ಸರ್ಕಾರದ ವಿರುದ್ಧ ಡಿ.ಸಿ. ಮಾಯಣ್ಣ ವಾಗ್ದಾಳಿ
Last Updated 27 ಸೆಪ್ಟೆಂಬರ್ 2020, 3:13 IST
ಅಕ್ಷರ ಗಾತ್ರ

ಭದ್ರಾವತಿ: ‘ಕೃಷಿ ಸೇರಿ ಎಲ್ಲಾ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಯತ್ನವನ್ನು ಬಿಜೆಪಿ ಸರ್ಕಾರ ನಡೆಸುವ ಮೂಲಕ ರೈತರನ್ನು ಕಾರ್ಮಿಕರನ್ನಾಗಿ ಮಾಡುತ್ತಿದೆ’ ಎಂದು ಹಿರಿಯ ಕಾರ್ಮಿಕ ಮುಖಂಡ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಡಿ.ಸಿ.ಮಾಯಣ್ಣ ದೂರಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಅಂಬಾನಿ, ಅದಾನಿ ಸಮೂಹಕ್ಕೆ ಅನುಕೂಲ ಮಾಡಿಕೊಡುವ ಕೆಲಸ ಮಾಡುತ್ತಿದೆ.ದೇಶದಲ್ಲಿನ ಶೇ 1ರಷ್ಟಿರುವ ಬಂಡವಾಳಶಾಹಿ ಶಕ್ತಿಗಳು ಇಡೀ ರಾಷ್ಟ್ರದ ಅರ್ಥವ್ಯವಸ್ಥೆಯನ್ನು ತಮ್ಮ ಅಧೀನದಲ್ಲಿ ಇಟ್ಟುಕೊಂಡು ರಾಜ್ಯಭಾರ ಮಾಡುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಅಣಕಿಸಿವೆ. ಇದಕ್ಕೆ ಉತ್ತರ ನೀಡಲು ವಿರೋಧ ಪಕ್ಷಗಳ ಕೊರತೆ ಇದೆ’ ಎಂದರು.

ಒಕ್ಕೂಟದ ಮುಖಂಡ ಪ್ರೊ.ಎಂ. ಚಂದ್ರಶೇಖರಯ್ಯ, ‘ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಕೃಷಿಕ ಮತ್ತು ಮಾರುಕಟ್ಟೆಗೆ ಇದ್ದ ನೇರ ಸಂಬಂಧವನ್ನು ದಲ್ಲಾಳಿಗಳ ಕೈಗೆ ಕೊಡುವ ಕೆಲಸ ಮಾಡಿರುವುದು ಖಂಡನೀಯ.ನೂತನ ಮಸೂದೆ ಬೆಂಬಲ ಬೆಲೆ ಕುರಿತು ಯಾವುದೇ ವಿಷಯವನ್ನು ಪ್ರಸ್ತಾಪ ಮಾಡದೆ ಮೌನ ವಹಿಸಿರುವುದು ಸಹ ಮಾರುಕಟ್ಟೆಯ ಕೇಂದ್ರೀಕೃತ ವ್ಯವಸ್ಥೆಗೆ ರಹದಾರಿ ಮಾಡಿಕೊಡುವ ಯತ್ನದ ಭಾಗ’ ಎಂದು ಆರೋಪಿಸಿದರು.

ಪ್ರಜಾಪ್ರತಿನಿಧಿಯ ಸುರೇಶ್, ‘ಸೆ.28ರಂದು ಬಂದ್ ಮಾಡುವ ಜತೆಗೆ ಅಂದು ಬೆಳಿಗ್ಗೆ 10.30 ಗಂಟೆಗೆ ಲೋಯರ್ ಹುತ್ತಾ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಪ್ರತಿ ವೃತ್ತದಲ್ಲೂ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.

ಉಜ್ಜೀನಿಪುರ ರಾಜು, ‘ಪ್ರಗತಿಪರ ಸಂಘಟನೆಗಳ ಈ ಹೋರಾಟಕ್ಕೆ 38 ಸಂಘಟನೆಗಳು ಬೆಂಬಲ ನೀಡಿದ್ದು ಅವರೆಲ್ಲರ ಸಹಕಾರ ಬೆಂಬಲದ ಜತೆಗೆ ಹೋರಾಟ ನಡೆಯಲಿದೆ’ ಎಂದರು.

ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಚಂದ್ರೇಗೌಡ, ಬಿ.ಕೆ.ಮೋಹನ್, ಜೆಡಿಎಸ್‌ನ‌ ‌ಆರ್. ಕರುಣಾಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಮಣಿಶೇಖರ್, ರಾಮಕೃಷ್ಣ, ಜೆಡಿಎಸ್ ಮಹಿಳಾ ವಿಭಾಗದ ಅಧ್ಯಕ್ಷೆ ಸುಕನ್ಯ, ಮುಖಂಡರಾದ ನಾಗವೇಣಿ, ರವಿಕುಮಾರ್, ಅಬುಲ್ ಕಯಾರ್, ಜೆ.ಬಿ.ಟಿ.ಬಾಬು, ರಾಜೇಂದ್ರ, ಹನುಮಮ್ಮ, ಲವೇಶಗೌಡ್ರು, ಈರಣ್ಣ, ಸಣ್ಣಯ್ಯ,
ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT