ಮಂಗಳವಾರ, ಜೂನ್ 28, 2022
23 °C

ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಖಚಿತ: ಗಿರೀಶ್ ಪಟೇಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ವಿರೋಧ ಪಕ್ಷಗಳು ಮತ್ತು ದೇಶದ್ರೋಹಿ ಶಕ್ತಿಗಳು ಮೋದಿ ಸರ್ಕಾರದ ವಿರುದ್ಧ ಎಷ್ಟೇ ಅಪಪ್ರಚಾರ ಮಾಡಿದರೂ ಕೊನೆಗೆ ಸತ್ಯಕ್ಕೆ ಜಯ ಕಟ್ಟಿಟ್ಟ ಬುತ್ತಿ ಎಂದು ಬಿಜೆಪಿ ಶಿವಮೊಗ್ಗ ವಿಭಾಗ ಪ್ರಭಾರಿ ಗಿರೀಶ್ ಪಟೇಲ್ ಹೇಳಿದರು.

ಬಿಜೆಪಿಯ ಜಿಲ್ಲಾ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದರು.

ಕೆಟ್ಟ ಶಕ್ತಿಗಳಿಗೆ ಸೋಲು ಕಟ್ಟಿಟ್ಟ ಬುತ್ತಿ. ಅಧರ್ಮದ ವಿರುದ್ಧ ಧರ್ಮಕ್ಕೆ ಜಯ ಎಂಬುದು ಇತಿಹಾಸದಲ್ಲಿ ಸಾಬೀತಾಗಿದೆ. ಪ್ರಧಾನಿ ಮೋದಿ ದೇಶಕ್ಕಷ್ಟೇ ಅಲ್ಲ, ವಿಶ್ವಕ್ಕೇ ನಾಯಕರಾಗಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳ ನಾಯಕರು ಕೂಡ ಮೋದಿ ಅವರನ್ನು ಗೌರವಿಸುತ್ತಿ
ದ್ದಾರೆ. ವಿಶ್ವ ನಾಯಕ ಎಂದು ಒಪ್ಪಿಕೊಳ್ಳುತ್ತಿದ್ದಾರೆ. ವಿಶ್ವವನ್ನು ಒಗ್ಗೂಡಿಸುವ ಶಕ್ತಿ ನರೇಂದ್ರ ಮೋದಿ ಅವರಿಗೆ ಮಾತ್ರ ಇದೆ ಎಂದು ಬಣ್ಣಿಸಿದರು.

ಜನಸಾಮಾನ್ಯರಿಗಾಗಿ ವಿವಿಧ 376 ಯೋಜನೆಗಳನ್ನು ಮೋದಿ ಸರ್ಕಾರ ನೀಡಿದೆ. ಯಾವುದೇ ಹಗರಣಗಳಿಲ್ಲದೇ ವಿಶ್ವಮಟ್ಟದ ಸಾಧನೆಗಳನ್ನು ಮಾಡಿದ್ದಾರೆ. ಮಾತೆಯರು ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

‘ವಿರೋಧ ಪಕ್ಷಗಳ ಸರ್ಕಾರವಿರುವಾಗ ದೇಶದ ಇತಿಹಾಸ ತಿರುಚುವ ಮತ್ತು ದುರ್ಬಲತೆ ಸಾರುವ ಪಠ್ಯಗಳನ್ನು ಇರಿಸಲಾಗಿತ್ತು. ಬಿಜೆಪಿ ಸರ್ಕಾರ ಸ್ವಾಭಿಮಾನ ಭಾರತದ ನೈಜ ಇತಿಹಾಸದ ಪಠ್ಯವನ್ನು ಅಳವಡಿಸಿಕೊಂಡಿದೆ. ಹಿಂದೂ ವಿರೋಧಿ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಾ ಗೊಂದಲ ಉಂಟು ಮಾಡುವ ಕೆಲಸವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ಹೋದರೆ ನಮ್ಮ ದೇಶದ ವಿರುದ್ಧ ಹೇಳಿಕೆ ನೀಡಬಾರದು ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲ’ ಎಂದು ಕುಟುಕಿದರು.

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ವಿದ್ಯಾ ಲಕ್ಷ್ಮಿಪತಿ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಮಹಿಳೆಯರನ್ನು ಗುರುತಿಸಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಥಾನ ಮಾನಗಳನ್ನು ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಸ್ವಂತ ಉದ್ಯೋಗಕ್ಕೆ ಮಹಿಳೆಯರನ್ನು ಪ್ರೋತ್ಸಾಹಿಸಲಾಗುತ್ತಿದೆ. ಉಜ್ವಲ ಯೋಜನೆಯಡಿ 9 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ ವಿತರಿಸಲಾಗಿದೆ. ಮುದ್ರಾ ಯೋಜನೆ, ಮನೆ ನಿರ್ಮಾಣಕ್ಕೆ ಸಹಕಾರ, ಪೋಷಣ್ ಅಭಿಯಾನ್, ಮಾತೃ ವಂದನಾ ಹಾಗೂ ರಾಜ್ಯ ಸರ್ಕಾರದಿಂದ ಭಾಗ್ಯಲಕ್ಷ್ಮಿ ಬಾಂಡ್, ಮಹಿಳಾ ಕಿಟ್, ಸೈಕಲ್ ವಿತರಣೆ ಮುಂತಾದ ಯೋಜನೆಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ’ ಎಂದರು.

ಮೋದಿ ಅವರ 8 ವರ್ಷದ ಆಡಳಿತ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಜೂನ್‌ 1 ರಿಂದ 15ರವರೆಗೆ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸುವ ಕಾರ್ಯವನ್ನು ಮಹಿಳಾ ಮೋರ್ಚಾ ಮಾಡಬೇಕು ಎಂದರು.

ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಶಿಲ್ಪಾ ಸುವರ್ಣಾ, ಉಪಾಧ್ಯಕ್ಷೆ ಪದ್ಮಿನಿ ರಾವ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು