ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ‘ಪಂಚರತ್ನ’ ಪಂಕ್ಚರ್, ‘ಪ್ರಜಾಧ್ವನಿ’ ಬ್ರೇಕ್‌ ಫೇಲ್

ಬಿಜೆಪಿ ಪೇಜ್ ಪ್ರಮುಖರ ಸಮಾವೇಶ: ನಳಿನ್‌ಕುಮಾರ್ ಕಟೀಲ್ ಲೇವಡಿ
Last Updated 6 ಫೆಬ್ರುವರಿ 2023, 6:26 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಜೆಡಿಎಸ್‌ನ ಪಂಚರತ್ನ ಯಾತ್ರೆ ಹಾಸನದಲ್ಲಿಯೇ ಪಂಕ್ಚರ್ ಆಗಿದೆ. ಕಾಂಗ್ರೆಸ್‌ನ ಪ್ರಜಾಧ್ವನಿ ಬ್ರೇಕ್‌ ಫೇಲ್ ಆಗುವ ಹಂತದಲ್ಲಿದೆ. ಬಿಜೆಪಿಯ ಸಂಕಲ್ಪ ಯಾತ್ರೆ ವಿಜಯ ಯಾತ್ರೆಯಾಗಿ ಬದಲಾಗಿದ್ದು, 150 ಸ್ಥಾನಗಳ ಗೆಲ್ಲುವತ್ತ ಮುನ್ನಡೆಯಲ್ಲಿದೆ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಹೇಳಿದರು.

ಇಲ್ಲಿನ ಎನ್‌ಇಎಸ್ ಮೈದಾನದಲ್ಲಿ ಭಾನುವಾರ ಬಿಜೆಪಿ ಪೇಜ್‌ ಪ್ರಮುಖರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಬೂತ್ ಗೆದ್ದರೆ ದೇಶವನ್ನು ಗೆಲ್ಲಬಹುದು. ಬೂತ್ ಗೆಲ್ಲಬೇಕು. ಹೀಗಾಗಿ ಶಿವಮೊಗ್ಗದಿಂದಲೇ ಪೇಜ್‌ ಪ್ರಮುಖರ ಸಮಾವೇಶ ಆರಂಭವಾಗಿದೆ’ ಎಂದು ತಿಳಿಸಿದರು.

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಕೇರಳದಲ್ಲಿ ಬೂತ್ ಪ್ರಮುಖರೊಬ್ಬರ ಮನೆಗೆ ತೆರಳಿ ಚಹಾ ಸೇವಿಸುತ್ತಾರೆ. ಆದರೆ, ಕಾಂಗ್ರೆಸ್ ವಿಚಾರದಲ್ಲಿ ಅದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮತದಾರರ ಪಟ್ಟಿಯೇ ಬಿಜೆಪಿ ಕಾರ್ಯಕರ್ತರಿಗೆ ಭಗವದ್ಗೀತೆ. ಅಂತ್ಯೋದಯವೇ ಪೇಜ್ ಪ್ರಮುಖರ ಕೆಲಸ. ಚುನಾವಣೆ ವೇಳೆಯಲ್ಲಷ್ಟೇ ಅಲ್ಲ. ಚುನಾವಣೆ ನಂತರವೂ ಅವರು ಮತದಾರರ ಜೊತೆಯಲ್ಲಿರುತ್ತಾರೆ. ಮತದಾರರ ಪಟ್ಟಿಯಲ್ಲಿರುವ ಪ್ರತೀ ಮನೆಯವನ್ನು ಸಂಪರ್ಕಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಪೇಜ್ ಪ್ರಮುಖರ ಸಮಿತಿ ಕೂಡ ರಚಿಸಲಾಗಿದೆ’ ಎಂದು ತಿಳಿಸಿದರು.

‘ಕಾಂಗ್ರೆಸ್‌ನಲ್ಲಿ ಪೇಜ್ ಪ್ರಮುಖರಿರಲಿ ರಾಜ್ಯ ಮಟ್ಟದ ಕಾರ್ಯಕಾರಿಣಿಯೇ ಇಲ್ಲ. ಡಿ.ಕೆ.ಶಿವಕುಮಾರ್ ಅಧ್ಯಕ್ಷರಾದ ನಂತರ ರಾಜ್ಯದಲ್ಲಿ ಕಾರ್ಯಕಾರಿಣಿಯೇ ನಡೆದಿಲ್ಲ. ಅದನ್ನು ಮಾಡಲು ಹೋದರೆ ರಾಜ್ಯಮಟ್ಟದಲ್ಲಿ ಇರಲಿ ಜಿಲ್ಲಾ ಮಟ್ಟದಲ್ಲೇ ಪಕ್ಷದಲ್ಲಿ ಒಡಕು ಮೂಡಲಿದೆ. ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡದ ಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷರು ಇದ್ದಾರೆ’ ಎಂದು ಲೇವಡಿ ಮಾಡಿದರು.

‘ರಾಜ್ಯದಲ್ಲಿ ಇವತ್ತು ಕಾಂಗ್ರೆಸ್ ಎಲ್ಲಿದೆ’ ಎಂದು ಪ್ರಶ್ನಿಸಿದ ಕಟೀಲ್, ‘ಕಾಂಗ್ರೆಸ್ ಡಿ.ಕೆ.ಶಿವಕುಮಾರ್ ಅವರ ಮನೆ ಹಾಗೂ ಸಿದ್ದರಾಮಯ್ಯರ ಮನೆ ಅಂಗಳದಲ್ಲಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಇವತ್ತು ಧ್ವನಿ ಇಲ್ಲ. ಹಾಗಾಗಿ ಪ್ರಜಾಧ್ವನಿ ಹಿಡಿದುಕೊಂಡು ಹೊರಟಿದ್ದಾರೆ’ ಎಂದು ಟೀಕಿಸಿದರು.

‘ಜಗತ್ತಿನಲ್ಲಿ ಅದ್ಭುತ ಪರಿವರ್ತನೆ ಆಗುತ್ತಿದೆ. ಜಗತ್ತಿನ ನಾಯಕತ್ವ ವಹಿಸಲು ನಮ್ಮೊಂದಿಗೆ ಭಾರತ ಹಾಗೂ ನರೇಂದ್ರ ಮೋದಿ ಮಾತ್ರ ಪೈಪೋಟಿ ಮಾಡಲು ಸಾಧ್ಯ ಎಂದು ಸ್ವತಃ ಅಮೆರಿಕದ ಅಧ್ಯಕ್ಷರು ಹೇಳುತ್ತಾರೆ. ಜಗತ್ತು ಭಾರತದತ್ತ ನೋಡುತ್ತಿದೆ. ವಿಶ್ವದ ನಾಯಕತ್ವವನ್ನು ಭಾರತ ವಹಿಸಿಕೊಳ್ಳಬೇಕು ಎಂದು ಜಪಾನ್‌ ಹೇಳಿದೆ. ಅಮೆರಿಕದಲ್ಲಿ ಭಾರತ ಮಾತಾಕೀ ಜೈ ಘೋಷಣೆ ಕೇಳಿಬರುತ್ತಿದೆ. ನರೇಂದ್ರ ಮೋದಿ ಅವರಂತಹ ಧೈರ್ಯವಂತ ಪ್ರಧಾನಿ ಬೇಕಿದೆ. ಸ್ವಾಭಿಮಾನಿ ಭಾರತ ಎದ್ದು ನಿಲ್ಲುತ್ತಿದೆ. ಯುಪಿಎ ಕಾಲಘಟ್ಟದಲ್ಲಿ ಭಾರತವನ್ನು ಭಿಕ್ಷುಕರ ರಾಷ್ಟ್ರ ಎಂದು ಜಗತ್ತು ಗುರುತಿಸುತ್ತಿತ್ತು. ಈಗ ಭಾರತವನ್ನು ಕೊಂಡಾಡುವ ಕಾಲ ಬಂದಿದೆ’ ಎಂದರು.

‘ಪೇಜ್ ಪ್ರಮುಖರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಯನ್ನು ಮತದಾರರಿಗೆ ತಲುಪಿಸಲಿದ್ದಾರೆ. ರಾಜ್ಯದಲ್ಲಿ ಸಂಘಟನೆ ಇರೋ ಪಕ್ಷ ಬಿಜೆಪಿ ಮಾತ್ರ. ಕಾಂಗ್ರೆಸ್, ಜೆಡಿಎಸ್ ನವರು ಜನ ಸೇರಿಸಿ, ಕಾರ್ಯಕ್ರಮ ಮಾಡ್ತಾ ಇದ್ದಾರೆ. ಜನ ನೋಡಿ, ನಾವು ಗೆಲ್ತೇವೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ಜನ ಬಂದು ಬಿಜೆಪಿಗೆ ಓಟು ಹಾಕುತ್ತಾರೆ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

‘ಸಂಘಟನಾತ್ಮಕವಾಗಿ ಬಿಜೆಪಿ ಸಾಕಷ್ಟು ಬಲಗೊಂಡಿದೆ. ಸಂಘಟನೆ, ಅಭಿವೃದ್ಧಿ, ನೇತತ್ವಕ್ಕಾಗಿ ಜನ
ಬಿಜೆಪಿಗೆ ಮತ ಚಲಾಯಿಸ್ತಾರೆ. ಕಳೆದ ಬಾರಿ 47 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದೆನು. ಈ ಬಾರಿ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ’ ಎಂದು ಈಶ್ವರಪ್ಪ ಮನವಿ ಮಾಡಿದರು.

ಸಮಾವೇಶದಲ್ಲಿ ಶಾಸಕ ಕೆ.ಬಿ.ಅಶೋಕ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಡಿ.ಎಸ್.ಅರುಣ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ವಿಭಾಗ ಪ್ರಮುಖ್ ಭಾನುಪ್ರಕಾಶ್, ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ‌.ಮೇಘರಾಜ್, ಮೇಯರ್ ಶಿವಕುಮಾರ್‌, ಉಪಮೇಯರ್ ಲಕ್ಷ್ಮೀ ಶಂಕರನಾಯ್ಕ, ಪ್ರಮುಖರಾದ ಎಸ್.ದತ್ತಾತ್ರಿ, ಚನ್ನಬಸಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಈ.ಕಾಂತೇಶ್ ಉಪಸ್ಥಿತರಿದ್ದರು.

***

ಸಮಾವೇಶದಲ್ಲಿ ಕಂಡದ್ದು, ಕೇಳಿದ್ದು

l ವಿಧಾನಸಭೆ ಚುನಾವಣೆಗೆ ಕಳೆದ ಆರು ತಿಂಗಳಿನಿಂದ ಸಂಘಟನೆಯಲ್ಲಿ ತೊಡಗಿ, ಸ್ಪರ್ಧಾಕಾಂಕ್ಷಿ ಎಂಬ ಆಶಯದಿಂದ ಬಿಜೆಪಿ ಸೇರ್ಪಡೆ ಆಗಿದ್ದ ಡಾ.ಧನಂಜಯ ಸರ್ಜಿ ಅವರನ್ನು ಪೇಜ್ ಪ್ರಮುಖರ ಸಮಾವೇಶದಲ್ಲಿ ವೇದಿಕೆಗೆ ಕರೆಯಲಿಲ್ಲ. ಸಾಮಾನ್ಯ ಪ್ರೇಕ್ಷಕರಂತೆ ಕುಳಿತು ಕಾರ್ಯಕ್ರಮ ವೀಕ್ಷಿಸಿದರು. ಸಮಾರಂಭದ ಮಧ್ಯೆ ಮಹಿಳೆಯೊಬ್ಬರು ದಿಢೀರನೆ ಅಸ್ವಸ್ಥರಾಗಿ ಕುಸಿದುಬಿದ್ದರು. ಆಕೆಗೆ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಡಾ.ಸರ್ಜಿ, ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಸಾಗಿಸಲು ನೆರವಾದರು.

l ಸಮಾರಂಭ ಆರಂಭಕ್ಕೆ ಮುನ್ನ ಶಾಸಕ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಕೈ ಹಿಡಿದು ಮೇಲೆತ್ತಿ ಒಗ್ಗಟ್ಟು ಪ್ರದರ್ಶಿಸಿದರು. ಆಯನೂರು ಮಂಜುನಾಥ್ ಒಗ್ಗಟ್ಟು ಪ್ರದರ್ಶನಕ್ಕೆ ಕೈ ಜೋಡಿಸದೇ ಆಸನದತ್ತ ತೆರಳಿದರು.

l ಭಾಷಣದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೊಂಡಾಡಿದ ನಳಿನ್‌ಕುಮಾರ್ ಕಟೀಲ್, ‘ಯಡಿಯೂರಪ್ಪ ನಮ್ಮ ಸರ್ವೋಚ್ಚ ನಾಯಕ. ಸೈಕಲ್‌ನಲ್ಲಿ ಹತ್ತಾರು ಹಳ್ಳಿಗಳಿಗೆ ತಿರುಗಿ ಪಕ್ಷವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದರು. ನಾನು ಅವರಿಂದ ಪ್ರೇರಣೆ ‍ಪಡೆಯಲು ಶಿವಮೊಗ್ಗಕ್ಕೆ ಬಂದಿರುವೆ’ ಎಂದು ಹೇಳಿದರು.

l ಸಮಾವೇಶದ ಆರಂಭದಲ್ಲಿ ಜನರಿಲ್ಲದೇ ಖಾಲಿ ಕುರ್ಚಿಗಳು ಕಂಡುಬಂದವು. ಜನರ ನಿರೀಕ್ಷೆಯಲ್ಲಿ ಸಮಾರಂಭ ಕೂಡ ಒಂದು ಗಂಟೆ ತಡವಾಗಿ ಆರಂಭವಾಯಿತು.

lಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್ ತಮ್ಮ ಭಾಷಣದಲ್ಲಿ, ‘ಬೇರೆ ಬೇರೆ ಕಡೆ ಜಾತ್ರೆಗಳು ಇರುವುದರಿಂದ ಹಲವು ಪೇಜ್ ಪ್ರಮುಖರು ಬಂದಿಲ್ಲ. ಆದರೆ, ಬಿಜೆಪಿ ಹೊರತಾಗಿ ಉಳಿದ ಪಕ್ಷಗಳಿಗೆ ಇಷ್ಟೊಂದು ಜನರನ್ನು ಸೇರಿಸಲು ಸಾಧ್ಯವಿಲ್ಲ’ ಎಂದರು.

lಸಮಾವೇಶದಲ್ಲಿ ಪಾಲ್ಗೊಂಡವರಿಗೆ ಜಿಲೇಬಿ, ಮಿರ್ಚಿ, ಪಲಾವು, ಅನ್ನ–ಸಾಂಬಾರಿನ ಔತಣ ನೀಡಲಾಯಿತು.

***

ಕಾಂಗ್ರೆಸ್ ಭಯೋತ್ಪಾದಕ ಪಕ್ಷ: ನಳಿನ್

‘ಕಾಂಗ್ರೆಸ್ ಭಯೋತ್ಪಾದಕ ಪಕ್ಷ’ ಎಂದು ಟೀಕಿಸಿದ ನಳಿನ್‌ಕುಮಾರ್ ಕಟೀಲ್, ‘ದೇಶದ್ರೋಹಿಗಳ ಪರ ಆ ಪಕ್ಷ ನಿಲ್ಲುತ್ತಿದೆ. ಬುರ್ಕಾ ವಿಚಾರ, ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಅದನ್ನು ಸಾಬೀತುಪಡಿಸಿದೆ’ ಎಂದರು.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಎರಡು ಕುಕ್ಕರ್‌ಗಳೆಂದರೆ ಬಹಳ ಪ್ರೀತಿ. ಒಂದು ತೀರ್ಥಹಳ್ಳಿಯಿಂದ ಮಂಗಳೂರಿಗೆ ತಂದಿದ್ದ ಕುಕ್ಕರ್. ಇನ್ನೊಂದು ಬೆಳಗಾವಿಯ ಕುಕ್ಕರ್’ ಎಂದು ಛೇಡಿಸಿದರು.

‘ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಮೂರು ಹೋಳಾಗಿದೆ. ಅದರ ಮಧ್ಯೆ ಕಮಲ ಅರಳಲಿದೆ’ ಎಂದು ಹೇಳಿದರು.

***

ತಪ್ಪು ಕಲ್ಪನೆ ಹೋಗಲಾಡಿಸಿ: ಬಿವೈಆರ್

‘ಟಿವಿಯಲ್ಲಿ ಇತ್ತೀಚೆಗೆ ಜನಾಭಿಪ್ರಾಯ ಸಂಗ್ರಹ ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದೆ. ಶಿವಮೊಗ್ಗ ನಗರದಲ್ಲಿ 10ರಲ್ಲಿ ಎಂಟು ಮಂದಿ ಬಿಜೆಪಿ ವಿರುದ್ಧವೇ ಮಾತನಾಡಿದರು. ಅದನ್ನು ನೋಡಿ ಅತ್ಯಂತ ನೋವಾಯಿತು. ವಿರೋಧಿಗಳ ಅಪಪ್ರಚಾರವೇ ಅದಕ್ಕೆ ಕಾರಣ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

‘ಬಿಜೆಪಿ ಬಡವರಿಗೆ ಉಚಿತವಾಗಿ ಅಕ್ಕಿ ಕೊಡುವುದನ್ನು ನಿಲ್ಲಿಸಿದೆ ಎಂದು ಆ ಕಾರ್ಯಕ್ರಮದಲ್ಲಿ ಕೆಲವರು ಹೇಳುತ್ತಿದ್ದರು. ಆದರೆ, ಕೇಂದ್ರ ಸರ್ಕಾರ ಅಕ್ಕಿ ವಿತರಣೆ ನಿಲ್ಲಿಸಿಲ್ಲ. ಪ್ರತಿ ವ್ಯಕ್ತಿಗೆ ಐದು ಕೆ.ಜಿ. ಅಕ್ಕಿ ಕೊಡಲಾಗುತ್ತಿದೆ. ಈ ಸತ್ಯ ಜನರಿಗೆ ತಿಳಿಸಿ ಬಡವರಲ್ಲಿನ ತಪ್ಪು ಕಲ್ಪನೆ ಹೋಗಲಾಡಿಸಿ’ ಎಂದು ಸಂಸದರು ಪೇಜ್ ಪ್ರಮುಖರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT