ಶುಕ್ರವಾರ, ಆಗಸ್ಟ್ 6, 2021
25 °C
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್ ಮಾಹಿತಿ

ಸರ್ಕಾರ ಸಾಧನೆಗಳ ಮಾಹಿತಿಗೆ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳ ಒಂದು ವರ್ಷದ ಸಾಧನೆ, ಸಂಸದ ಬಿ.ವೈ.ರಾಘವೇಂದ್ರ ಅವರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಮಾಹಿತಿ ಸಾರ್ವಜನಿಕರಿಗೆ ತಲುಪಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ವರ್ಷದ ಸಾಧನೆಗಳ ಮೂರು ಕಿರುಹೊತ್ತಿಗೆ ಬಿಡುಗಡೆ ಮಾಡಿದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಜೂನ್‌ 5ರಿಂದಲೇ ಬಿಜೆಪಿ ಮನೆ ಮನೆ ಸಂಪರ್ಕ ಅಭಿಯಾನ ಆರಂಭಿಸಿದೆ. ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ಈ ಅಭಿಯಾನಗಳಿಗೆ ಚಾಲನೆ ನೀಡುವರು. ಜಿಲ್ಲೆಯ 1,775 ಬೂತ್‌ಗಳಿಗೂ ಬಿಜೆಪಿ ಸಾಧನೆಯ ಮೂರು ಕರಪತ್ರಗಳು ತಲುಪಲಿವೆ. ಜತೆಗೆ ಸಾರ್ವಜನಿಕರ ಜತೆ ಸಂವಾದ ನಡೆಸಲಾಗುವುದು ಎಂದು ವಿವರ ನೀಡಿದರು.

ದೇಶದ ಭದ್ರತೆಗೆ ಮೋದಿ ಸರ್ಕಾರ ಮೊದಲ ಆದ್ಯತೆ ನೀಡಿದೆ. ದೇಶ ಕೆಣಕಿದವರ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್ ಯಶಸ್ವಿಯಾಗಿ ಮಾಡಿದೆ. ಇಡೀ ದೇಶಕ್ಕೆ ಒಂದೇ ತೆರಿಗೆ ಪದ್ಧತಿ ಜಾರಿ ಮಾಡಿದ್ದಾರೆ. ರೈತರಿಗೆ ಬೆಂಬಲ ಬೆಲೆ ನೀಡಿದ್ದಾರೆ. ಮೊದಲ ಐದು ವರ್ಷದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳ ಮೂಲಕ ಜನರನ್ನು ಮುಟ್ಟಿದ್ದಾರೆ. ನಂತರದ ಒಂದು ವರ್ಷದಲ್ಲಿ ಭಾರತವನ್ನು ವಿಶ್ವಮಾನ್ಯವಾಗಿಸಲು ಶ್ರಮಿಸಿದ್ದಾರೆ ಎಂದರು.

ದೇಶದ ಏಕತೆಗಾಗಿ 370 ವಿಧಿ ತೆಗೆದು ಹಾಕಲಾಗಿದೆ. ರಕ್ಷಣಾ ಕ್ಷೇತ್ರದ ಮೂರು ವಿಭಾಗ ಸೇರಿಸಿ ಮೊದಲ ಸೇನಾ ಮುಖ್ಯಸ್ಥರನ್ನು ನೇಮಕ ಮಾಡಲಾಗಿದೆ. ತ್ರಿವಳಿ ತಲಾಕ್ ರದ್ದು ಮಾಡಿದೆ. ರಾಮಮಂದಿರ ನಿರ್ಮಾಣ ವಿವಾದವನ್ನು ಸೂಕ್ಷ್ಮವಾಗಿ ಬಗೆಹರಿಸಿದೆ. ಆಡಳಿತ ಸುಧಾರಣೆಗೆ ಹೆಚ್ಚಿನ ಗಮನ ನೀಡಿದೆ ಎಂದು ಶ್ಲಾಘಿಸಿದರು.

ಕೊರೊನಾ ಸಂಕಷ್ಟದಲ್ಲಿ ಜನರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಹಕಾರ ನೀಡಿದೆ. ಸಧೃಡ ಭಾರತ ಕಟ್ಟಲು ಸರ್ಕಾರ ಮುಂದಾಗಿದೆ.ಅದಕ್ಕಾಗಿ ₨ 20 ಲಕ್ಷ ಕೋಟಿ ನೆರವು ನೀಡಿದೆ ಎಂದು ವಿವರ ನೀಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವೂ ಉತ್ತಮ ಆಡಳಿತ ನೀಡುತ್ತಿದೆ. ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾದ ಕಾರ್ಮಿಕರಿಗೆ ₨ 5 ಸಾವಿರ ನೀಡಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 42 ಸಾವಿರ ಕಾರ್ಮಿಕರಿಗೆ ಹಣ ತಲುಪಿದೆ. ಕೋವಿಡ್ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ತಲಾ ₨ 3 ಸಾವಿರ ಜಮೆ ಮಾಡಲಾಗಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಅವರು ಒಂದು ವರ್ಷದಲ್ಲಿ ನೂರಾರು ಸಾಧನೆ ಮಾಡಿದ್ದಾರೆ. ಅಲ್ಪ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ ಸಂಸದರ ಪಟ್ಟಿಯಲ್ಲಿದ್ದಾರೆ. ಅವರ ಸಾಧನೆ ಜನರಿಗೆ ತಿಳಿಸುವ ಕೆಲಸ ಪಕ್ಷ ಮಾಡಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಮಧುಸೂದನ್, ರಮೇಶ್, ಸುನೀತಾ ಅಣ್ಣಪ್ಪ, ಎನ್.ಡಿ.ಸತೀಶ್, ಋಷಿಕೇಶ್ ಪೈ, ಶಿವಕುಮಾರ್, ಅಣ್ಣಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು