ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಆಡಳಿತ ಗ್ರಾಮೀಣಾಭಿವೃದ್ಧಿಗೆ ಮಾರಕ

ಕಿಮ್ಮನೆ, ಆರ್‌ಎಂಎಂ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಚ್.‌ಎಸ್.‌ ಸುಂದರೇಶ್‌
Last Updated 7 ಫೆಬ್ರುವರಿ 2023, 5:02 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಭಾರತದ ಸುದೀರ್ಘ ಕಾಂಗ್ರೆಸ್‌ ಇತಿಹಾಸದಲ್ಲಿ ದೇಶವನ್ನು ಸುಭದ್ರವಾಗಿ ಕಟ್ಟಲಾಗಿತ್ತು. 8 ವರ್ಷಗಳ ಬಿಜೆಪಿ ಆಡಳಿತದಲ್ಲಿ ದೇಶ ಸಾಲದ ಸುಳಿಯಿಂದ ಅಭದ್ರತೆಯತ್ತ ಸಾಗಿದೆ. ಗ್ರಾಮೀಣ ಅಭಿವೃದ್ಧಿ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.‌ ಸುಂದರೇಶ್‌ ಟೀಕಿಸಿದರು.

‘ಸಾಮಾಜಿಕ ಭದ್ರತೆ ಇಲ್ಲದೆ ಬಡವರು ಕಂಗಾಲಾಗಿದ್ದಾರೆ. ನಿರುದ್ಯೋಗ, ಆರ್ಥಿಕ, ಆರೋಗ್ಯ, ಶೈಕ್ಷಣಿಕ ವ್ಯವಸ್ಥೆ ಹದಗೆಟ್ಟಿದೆ. ಬಡವರ್ಗವನ್ನು ಶೋಷಿಸುವ ಮೂಲಕ ಬಂಡವಾಳಶಾಯಿಗಳ ಕಪಿಮುಷ್ಠಿಗೆ ದೇಶವನ್ನು ತಳ್ಳುತ್ತಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಆಡಳಿತಾತ್ಮಕ ವಿಚಾರದಲ್ಲಿ ಸೋತಿರುವ ಬಿಜೆಪಿ ರಾಜ್ಯ ನಾಯಕರು ಮೋದಿ ಹೆಸರು ಹೇಳಿ ಮತಯಾಚನೆ ಮಾಡುವ ಹೀನಾಯ ಸ್ಥಿತಿಗೆ ತಲುಪಿದ್ದಾರೆ. ಭ್ರಷ್ಟಾಚಾರ ಎಲ್ಲ ಇಲಾಖೆಗಳಲ್ಲೂ ನಡೆದಿದೆ. ದೇಶವನ್ನು ಅದಾನಿಯಂತಹ ಬಂಡವಾಳಶಾಹಿಗಳ ಕೈಗೆ ಇಟ್ಟು ಸಾಲಕ್ಕೆ ಸಿಲುಕಿಸಿದ್ದಾರೆ. ಅದಾನಿಗೆ ಇರುವ ಎರಡೂವರೆ ಸಾವಿರ ಲಕ್ಷ ಆಸ್ತಿಯನ್ನಾದರೂ ಮುಟ್ಟುಗೋಲು ಹಾಕಬೇಕು’ ಎಂದು ಆಗ್ರಹಿಸಿದರು.

‘ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಹಾಗೂ ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥ ಗೌಡರ ನಡುವಿನ ಭಿನ್ನಾಭಿಪ್ರಾಯ ಶಮನಗೊಳಿಸಲಾಗಿದೆ. ಪ್ರಜಾಧ್ವನಿ ಯಾತ್ರೆಗೆ ಟಿಕೆಟ್‌ ಆಕಾಂಕ್ಷಿಗಳು, ಪಕ್ಷದ ಮುಖಂಡರು ಒಟ್ಟಾಗಿ ಶ್ರಮಿಸಲಿದ್ದಾರೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾದ ಕಿಮ್ಮನೆ ರತ್ನಾಕರ, ಆರ್.ಎಂ. ಮಂಜುನಾಥ ಗೌಡ, ಕಡ್ತೂರು ದಿನೇಶ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ, ತೀರ್ಥಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ, ಗ್ರಾಮಾಂತರ ಅಧ್ಯಕ್ಷ ಮುಡುಬ ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT