ಶಿವಮೊಗ್ಗ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪ್ರಾಸಿಕ್ಯೂಷನ್‌ಗೆ ಆದೇಶದ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಿಜೆಪಿಯಿಂದ ಇಲ್ಲಿನ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಸಿಎಂ ವಿರುದ್ಧ ತನಿಖೆಗೆ ಆದೇಶ ನೀಡಿದ್ದ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಸಿದ್ದರಾಮಯ್ಯ ಅವರು ಈಗಲಾದರೂ ಸಹ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಮುಂದಾಗಬೇಕಿದೆ. ಇದು ಬಿಜೆಪಿಯ ಹೋರಾಟಕ್ಕೆ ಸಿಕ್ಕಿರುವ ಜಯವಾಗಿದೆ ಎಂದು ಹೇಳಿದರು.
ಕಾನೂನು ಮತ್ತು ಸಂವಿಧಾನಕ್ಕೆ ಗೌರವ ಕೊಡುವಂತಹ ಕೆಲಸ ಸಿಎಂ ಮಾಡುವುದು ಅಗತ್ಯವಿದೆ. ಮುಡಾ ಹಗರಣವು ದೊಡ್ಡ ಪ್ರಮಾಣದಲ್ಲಿ ನಡೆದಿದೆ ಎನ್ನವುದಕ್ಕೆ ಹೈಕೋರ್ಟ್ ನೀಡಿರುವ ಆದೇಶವೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬರೀ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಆರೋಪ ಬಂದಾಗ ರಾಜೀನಾಮೆ ನೀಡುವ ಮೂಲಕ ತನಿಖೆ ಎದುರಿಸುವುದು ಅಗತ್ಯವಿದೆ. ಆರೋಪದಿಂದ ಮುಕ್ತಾರಾಗುವರೆಗೆ ರಾಜೀನಾಮೆ ನೀಡುವುದು ಅಗತ್ಯವಿದೆ. ರಾಜೀನಾಮೆ ನೀಡದಿದ್ದರೆ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದಿಂದ ಉಗ್ರವಾಗಿ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಕಾನೂನು ನಿಯಮಗಳನ್ನು ಉಲ್ಲಂಘನೆ ಮಾಡುವ ಮೂಲಕ ಸಿಎಂ ಪತ್ನಿಗೆ ಮುಡಾದಿಂದ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿ ಅವರು ಪ್ರಭಾವ ಬೀರಿದ ಹಿನ್ನೆಲೆಯಲ್ಲಿ ನಿವೇಶನ ನೀಡಲಾಗಿದೆ. ಇದರಲ್ಲಿ ದೊಡ್ಡ ಅವ್ಯವಹಾರ ಕೂಡ ನಡೆದಿದೆ ಎಂದು ಆರೋಪಿಸಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬಳಿಕ ಕಾಂಗ್ರೆಸ್ ನಾಯಕರು ರಾಜ್ಯಪಾಲರ ವಿರುದ್ಧ ಮನಸ್ಸಿಗೆ ಬಂದಂತೆ ಮಾತನಾಡಿದರು. ಇದೀಗ ಹೈಕೋರ್ಟ್ ತನಿಖೆಗೆ ಆದೇಶ ನೀಡಿದ ಪರಿಣಾಮವಾಗಿ ಕಾಂಗ್ರೆಸ್ ನಾಯಕರ ಬಾಯಿಗೆ ಬೀಗ ಜಡಿದಂತಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಜನತೆ ಸಂಪೂರ್ಣ ರೋಸಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಜನರು ಬೀದಿಗಿಳಿದು ಹೋರಾಟ ಮಾಡುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಮೋಹನ್ ರೆಡ್ಡಿ, ಸಂತೋಷ್ ಬಳ್ಳಕೆರೆ, ರಾಮು, ಜಿ ಗೀತಾ, ವೀರಭದ್ರ ಪೂಜಾರಿ, ಸುರೇಖಾ,ನಾಗರಾಜ, ಜದೀಶ್ ಇದ್ದರು.
ರಾಜೀನಾಮೆ ನೀಡಿ; ನಿಮ್ಮ ಮತ್ತು ಪಕ್ಷದ ಗೌರವ ಉಳಿಸಿ
ಶಿವಮೊಗ್ಗ:ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ನಿಮ್ಮ ಮತ್ತು ಪಕ್ಷದ ಗೌರವ ಕಾಪಾಡಿಕೋಳ್ಳಬೇಕು. ಸಿಎಂ ಸ್ಥಾನದಲ್ಲಿ ಕೂರುವ ಅರ್ಹತೆ ನಿಮಗಿಲ್ಲ. ಆರೋಪದಿಂದ ಮುಕ್ತರಾಗುವರೆಗೆ ರಾಜೀನಾಮೆ ನೀಡಲಿ. ಮುಕ್ತರಾದ ಬಳಿಕ ಅವರೆ ಬೇಕಾದರೆ ಸಿಎಂ ಆಗಲಿ ನಮ್ಮದೇನು ಅಭ್ಯಂತರವಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಮೊಂಡುತನ ರಾಜಕಾರಣ ಸಿಎಂ ಮಾಡಬಾರದು. ಸಂವಿಧಾನದಲ್ಲಿ ಎಲ್ಲರಿಗೂ ಒಂದೇ ಕಾನೂನು ಅದನ್ನು ಗೌರವಿಸಬೇಕು. ರಾಜೀನಾಮೆ ನೀಡುವರೆಗೂ ನಮ್ಮ ಹೋರಾಟ ನಡೆಯುತ್ತದೆ. ಮುಡಾ ಹಗರಣದಲ್ಲಿ ಕೆವಲ ರಾಜೀನಾಮೆ ಸಾಲದು. ಸಮಗ್ರವಾಗಿ ತನಿಖೆ ಆಗಬೇಕಿದೆ ಎಂದು ಪ್ರತಿಭಟನೆ ಬಳಿಕ ಸುದ್ದಿಗಾರರೊಂದಿಗೆ ಮಂಗಳವಾರ ತಿಳಿಸಿದರು. ಕಳೆದ 2–3 ತಿಂಗಳಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಕರ್ನಾಟಕದ ಮಣ್ಣಿನ ಸಂಸ್ಕೃತಿ ಇದೆ ಆಪಾಧನೆ ಬಂದಾಗ ರಾಜೀನಾಮೆ ಕೊಡಬೇಕು. ಎಸ್ಐಟಿ ತನಿಖೆ ಮಾಡಿಸುವ ಮೂಲಕ ತಮ್ಮ ಶಾಸಕರಿಗೆ ಕ್ಲಿನ್ ಚಿಟ್ ಕೊಡಿಸುತ್ತಾ ಬಂದಿದ್ದಾರೆ. ಕಾಂಗ್ರೆಸ್‌ನವರು ಈಗಲೂ ರಾಜ್ಯಪಾಲರ ಘನತೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.