ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈತುಂಬ ಆದಾಯಕ್ಕೆ ದಾರಿಯಾದ ಮೆಣಸಿನಕಾಳು

ಹೊಸಗೊದ್ದನಕೊಪ್ಪ ಗ್ರಾಮದ ರವಿ ಗೌಡ ಪ್ರಯೋಗಶೀಲತೆ
Last Updated 30 ನವೆಂಬರ್ 2022, 5:39 IST
ಅಕ್ಷರ ಗಾತ್ರ

ಶಿಕಾರಿಪುರ: ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಕೃಷಿ ಭೂಮಿಯಲ್ಲಿ ಮೆಣಸಿನಕಾಳು ಸೇರಿ ವಿವಿಧ ವಾಣಿಜ್ಯ ಬೆಳೆ ಬೆಳೆದು ತಾಲ್ಲೂಕಿನ ಹೊಸಗೊದ್ದನಕೊಪ್ಪ ಗ್ರಾಮದ ರೈತ ಜಿ.ರವಿ ಗೌಡ ಇತರರಿಗೆ ಮಾದರಿಯಾಗಿದ್ದಾರೆ.

ಎಸ್ಸೆಸ್ಸೆಲ್ಸಿ ಓದಿರುವ ಇವರು ಗ್ರಾಮದಲ್ಲಿರುವ ತಮ್ಮ 3 ಎಕರೆ ಜಮೀನಿನಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಮೆಣಸಿನಕಾಳು, ಕಾಫಿ, ಏಲಕ್ಕಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ.

ಒಂದೂ ಕಾಲು ಎಕರೆ ಭೂಮಿಯಲ್ಲಿ ಅಡಿಕೆ ನಡುವೆ ಮೆಣಸಿನಕಾಳು ಬೆಳೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಡಿಕೆಯಲ್ಲಿ ₹ 4.50 ಲಕ್ಷ ಆದಾಯ ದೊರೆತಿದ್ದರೆ, ಮೆಣಸಿನ ಕಾಳಿನಲ್ಲಿ ₹ 1.50 ಲಕ್ಷ ಪಡೆದಿದ್ದಾರೆ. ಅಂದರೆ ಒಂದು ಕಾಲು ಎಕರೆಯಲ್ಲಿ ವರ್ಷಕ್ಕೆ ₹ 6 ಲಕ್ಷ ಆದಾಯ ಪಡೆಯುತ್ತಿದ್ದಾರೆ.

ಮೂರು ವರ್ಷಗಳಿಂದ ಮೆಣಸಿನಕಾಳು ಬೆಳೆಯಲು ಆರಂಭಿಸಿದ ಇವರು, ಮೆಣಸಿನಕಾಳನ್ನು ಶಿರಸಿ, ಶಿವಮೊಗ್ಗ ಸೇರಿದಂತೆ ವಿವಿಧ ಪಟ್ಟಣಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

ಸಾವಯವ ಕೃಷಿಗೆ ಆದ್ಯತೆ ನೀಡಿರುವ ಇವರು, ತೋಟದಲ್ಲಿ ಎರೆ ಹುಳು ತೊಟ್ಟಿ ನಿರ್ಮಿಸಿಕೊಂಡಿದ್ದಾರೆ. ಕಳೆ ನಾಶಪಡಿಸಲು ಕಳೆನಾಶಕ ಉಪಯೋಗಿಸದೇ, ಯಂತ್ರದ ಸಹಾಯದಿಂದಲೇ ಕಳೆ ತೆಗೆಯುತ್ತಿದ್ದಾರೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ನಿಯಮಿತವಾಗಿ ರಾಸಾಯನಿಕ ಗೊಬ್ಬರ ಬಳಸುತ್ತಾರೆ. ಮೆಣಸಿನಕಾಳು ಉತ್ತಮ ಇಳುವರಿ ಬಂದಿದೆ.

ಹೆಚ್ಚಾದ ಮಳೆ; ಆತಂಕಗೊಂಡ ಕೃಷಿಕ: ಮೆಣಸಿನಕಾಳು ಬೆಳೆದು ಮೂರು ವರ್ಷ ಉತ್ತಮ ಆದಾಯ ಗಳಿಸಿದ್ದ ರವಿ ಗೌಡ, ಈ ಬಾರಿ ಆದಾಯ ದ್ವಿಗುಣಗೊಳ್ಳುವ ನಿರೀಕ್ಷೆಯಲ್ಲಿದ್ದರು. ಆದರೆ, ಪ್ರಸಕ್ತ ವರ್ಷ ಸುರಿದ ಭಾರಿ ಮಳೆಯಿಂದ ಸ್ವಲ್ಪ ಆತಂಕಗೊಂಡಿದ್ದಾರೆ. ಮಳೆ ಸುರಿದ ಸಂದರ್ಭದಲ್ಲಿ ತೋಟದಲ್ಲಿ ಹೆಚ್ಚು ನೀರು ಸಂಗ್ರಹವಾಗಿದ್ದರಿಂದ ಮೆಣಸಿನಕಾಳಿನ ಕೆಲವು ಬಳ್ಳಿಗಳು ಒಣಗಿವೆ. ಅದನ್ನು ಹೊರತುಪಡಿಸಿ ಉತ್ತಮ ಇಳುವರಿ ಪಡೆಯುವ ನಿರೀಕ್ಷೆ ಹೊಂದಿದ್ದಾರೆ. ಮೆಣಸಿನಕಾಳಿನ ಬಳ್ಳಿ ಒಣಗದಂತೆ ತಡೆಯಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT