ಸೋಮವಾರ, ನವೆಂಬರ್ 30, 2020
21 °C

ಯಡಿಯೂರಪ್ಪ ಕಾರ್ಪೊರೇಟ್ ಕಂಪನಿಗಳ ಸಾಕುಮಗ: ಬಡಗಲಪುರ ನಾಗೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಪೊರೇಟ್ ಕಂಪನಿಗಳ ಸಾಕುಮಗ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಟೀಕಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾಯ್ದೆ ಮೂಲಕ ರೈತರ ಕುಲಕ್ಕೆ ವಿಷ ಹಾಕುತ್ತಿವೆ. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರನ್ನು ಇನ್ನು ಮುಂದೆ ರೈತರ ಮಗ ಎಂದು ಯಾರೂ ಕರೆಯಬಾರದು. ಅವರು ಕಾರ್ಪೋರೇಟ್ ಕಂಪನಿಗಳ ಸಾಕುಮಗ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಒಂದು ಕಾಲದಲ್ಲಿ ರೈತರ ಪರವಾಗಿ ಹೋರಾಟ ಆರಂಭಿಸಿದ್ದ ಯಡಿಯೂರಪ್ಪ ಈಗ ತಮ್ಮ ನಿಲುವುಗಳನ್ನೇ ಬದಲಾಯಿಸಿದ್ದಾರೆ. ರೈತ, ದಲಿತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿದ್ದಾರೆ. ಇಂತಹ ಧೋರಣೆಯನ್ನು  ರೈತ ಸಂಘ ಖಂಡಿಸುತ್ತದೆ. ಹೋರಾಟ ಮುಂದುವರಿಸುತ್ತದೆ. ನ.೧೧ರಂದು ಧಾರವಾಡದಲ್ಲಿ ರಾಜ್ಯಕಾರ್ಯಕಾರಿಣಿ ಕರೆಯಲಾಗಿದೆ. ಅಲ್ಲಿ ಹೋರಾಟದ ರೂಪುರೇಷೆ ಅಂತಿಮಗೊಳಿಸಲಾಗುವುದು ಎಂದರು.

ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಬರಬೇಕು. ಅತಿವೃಷ್ಟಿ, ಅನಾವೃಷ್ಟಿಗೆ ಸಿಲುಕಿದ ರೈತರ ನೆರವಿಗೆ ಬರಬೇಕು. ಸಾಮಾನ್ಯರು ಮತ್ತೆ ಬದುಕು ಕಟ್ಟಿಕೊಳ್ಳುವಂತೆ ₹ ೧ ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಇತರೆ ರಾಜ್ಯಗಳಿಗೆ ಕೇಳದಿದ್ದರೂ  ಪ್ರಧಾನಿ ನರೇಂದ್ರ ಮೋದಿ ನೆರವು ನೀಡುತ್ತಿದ್ದಾರೆ. ಕರ್ನಾಟಕದ ಕಡೆ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಮೆಕ್ಕೆಜೋಳ, ಭತ್ತದ ಖರೀದಿ ಕೇಂದ್ರ ತೆರೆಯಬೇಕು. ಕಬ್ಬು ಬಾಕಿ ಹಣ ತಕ್ಷಣ ಪಾವತಿಸಬೇಕು. ಈ ಸಾಲಿನ ಎಫ್‌ಆರ್‌ಪಿ ಘೋಷಣೆ ಮಾಡಬೇಕು. ಕಬ್ಬಿಗೆ ಟನ್ ಒಂದಕ್ಕೆ ₹ 4,500 ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಕಸ್ತೂರಿ ರಂಗನ್ ವರದಿ  ಜಾರಿ ಮಾಡಬಾರದು. ಇದರಿಂದ ಮಲೆನಾಡಿನ ಬುಡಕಟ್ಟು ಜನರ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಸಣ್ಣ ರೈತರು ಬದುಕುವುದೇ ಕಷ್ಟವಾಗಿದೆ. ಎಂಪಿಎಂ ನೆಡುತೋಪುಗಳಲ್ಲಿ  ಅಕೇಶಿಯಾ ಬೆಳೆಯಬಾರದು. ಸರ್ಕಾರ ಭೂಮಿ ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ, ಪ್ರಧಾನ ಕಾರ್ಯದರ್ಶಿ ನುಲೇನೂರು ಶಂಕರಪ್ಪ, ರೈತ ಮುಖಂಡರಾದ ಶಿವಾನಂದ ಕುಗ್ವೆ ರವಿಕಿರಣ್, ಕರಿಬಸಪ್ಪಗೌಡ, ರವಿಕುಮಾರ್ ಬಲ್ಲೂರು, ಪ್ರೇಮಾ, ಎನ್.ಡಿ.ವಸಂತ ಕುಮಾರ್ ಮಂಜಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು