ಶನಿವಾರ, ಮೇ 21, 2022
27 °C
ಒಂದು ವಾರ ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಗೆಲುವಿನ ದಡ ಸೇರಿಸಿದ ಮಾಜಿ ಮುಖ್ಯಮಂತ್ರಿ

ಶಿವಮೊಗ್ಗ: ಬಿಜೆಪಿ ಗೆಲುವಿನ ಹಿಂದೆ ಯಡಿಯೂರಪ್ಪ ಯೋಜನೆ!

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಅವಿಭಜಿತ ಶಿವಮೊಗ್ಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಯೋಜನೆ ಕೆಲಸ ಮಾಡಿದೆ.

ವಿಧಾನ ಪರಿಷತ್‌ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಕಣಕ್ಕೆ ಇಳಿಯಲು ಪಕ್ಷದ ಮುಖಂಡರಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಪ್ರಮುಖವಾಗಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಆರ್.ಕೆ. ಸಿದ್ದರಾಮಣ್ಣ, ಎಂ.ಬಿ. ಭಾನುಪ್ರಕಾಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್, ರಾಜ್ಯ ಕ್ರೀಡಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಗಿರೀಶ್ ಪಟೇಲ್‌, ‘ಸೂಡಾ’ ಅಧ್ಯಕ್ಷ ಎಸ್‌.ಎಸ್‌. ಜ್ಯೋತಿಪ್ರಕಾಶ್ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ.ಇ. ಕಾಂತೇಶ್ ಹೆಸರು ಮಂಚೂಣಿಯಲ್ಲಿ ಇತ್ತು.

ಆದರೆ, ಯಡಿಯೂರಪ್ಪ ಅವರು ಸೂಚಿಸಿದ್ದು ಮಾತ್ರ ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಅವರ ಹೆಸರು. ದೆಹಲಿ ವರಿಷ್ಠರೂ ಅವರ ಹೆಸರನ್ನೇ ಅಂತಿಮಗೊಳಿಸಿದ್ದರು. ನಾಮಪತ್ರ ಸಲ್ಲಿಕೆ ಆರಂಭವಾದ ನಂತರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿತ್ತು. ಪ್ರಚಾರಕ್ಕೆ ಇದ್ದ ಸಮಯವೂ ಅತ್ಯಲ್ಪ. ಇಂತಹ ಸಮಯದಲ್ಲಿ ಯಡಿಯೂರಪ್ಪ ಅವರು ರಾಜ್ಯದ ಬೇರೆಬೇರೆ ಕ್ಷೇತ್ರಗಳಿಗೆ ಪ್ರಚಾರಕ್ಕೆ ತೆರಳಬೇಕಿದ್ದರೂ, ಒಂದು ವಾರ ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಕ್ಷೇತ್ರ ವ್ಯಾಪ್ತಿಯ ಎಲ್ಲ 10 ವಿಧಾನಸಭಾ ಕ್ಷೇತ್ರಗಳನ್ನೂ ಸುತ್ತಿದ್ದರು.

ಯಡಿಯೂರಪ್ಪ ಅವರಿಗೆ ಪ್ರತಿಷ್ಠೆಯಾಗಿದ್ದ ಕಣ: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಪಕ್ಷದ ವರಿಷ್ಠರು ಅವರನ್ನು ನಡೆಸಿಕೊಂಡ ರೀತಿಗೆ ಅವರ ಅಭಿಮಾನಿಗಳು ಬೇಸರಗೊಂಡಿದ್ದರು. ಅವರ ಪುತ್ರ ವಿಜಯೇಂದ್ರ ಅವರಿಗೂ ಸಂಪುಟದಲ್ಲಿ ಸ್ಥಾನ ಕೊಡದೇ ಇದ್ದದ್ದು ಪಕ್ಷದ ವಿರುದ್ಧ ಒಂದು ಸಮುದಾಯ ಸಿಟ್ಟಿಗೇಳಲು ಕಾರಣವಾಗಿತ್ತು. ಹಾನಗಲ್‌ ಉಪ ಚುನಾವಣೆಯ ನಂತರ ಈ ಮಾತು ನಿಜ ಎನಿಸತೊಡಗಿತ್ತು. ಇಂತಹ ಊಹಾಪೋಹಗಳಿಗೆ ತೆರೆ ಎಳೆಯಲು ತಮ್ಮ ಸ್ವಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪಣತೊಟ್ಟರು. ಅದರಂತೆ ಕಾರ್ಯನಿರ್ವಹಿಸಿದರು. ಅವರ ಯೋಜನೆಯಂತೆಯೇ ಅರುಣ್‌ ಅವರಿಗೆ ಗೆಲುವು ದೊರೆತಿದೆ.

ಮತ್ತೊಂದು ಕಡೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಎಲ್ಲ 9 ವಿಧಾನಸಭಾ ಕ್ಷೇತ್ರಗಳ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಗೆಲುವಿಗಾಗಿ ಹಗಲು, ಇರುಳು ಶ್ರಮಿಸಿದ್ದರು.

ಸೋಲಿನಲ್ಲೂ ಕಾಂಗ್ರೆಸ್‌ಗೆ ಸಮಾಧಾನ: ಕ್ಷೇತ್ರ ವ್ಯಾಪ್ತಿಯ 10 ವಿಧಾನಸಭಾ ಕ್ಷೇತ್ರಗಳಲ್ಲಿ 9ರಲ್ಲಿ ಬಿಜೆಪಿ ಶಾಸಕರು ಇದ್ದು, ಕೇಂದ್ರ, ರಾಜ್ಯದಲ್ಲಿ ಪಕ್ಷದ ಸರ್ಕಾರ, ಯಡಿಯೂರಪ್ಪ, ಈಶ್ವರಪ್ಪ ಅವತಂತಹ ಘಟನಾನುಘಟಿಗಳು ಇದ್ದರೂ, ಪಕ್ಷದ ಅಭ್ಯರ್ಥಿ ಗೆಲುವಿನ ಅಂತರ 344 ಮತಗಳು. ಕ್ಷೇತ್ರದಲ್ಲಿ ಕೇವಲ ಒಬ್ಬರು ಶಾಸಕರು ಇದ್ದರೂ ಕಾಂಗ್ರೆಸ್ ಅಭ್ಯರ್ಥಿ ಪ್ರಸನ್ನಕುಮಾರ್ ಅವರು ಪಡೆದ ಮೊದಲ ಪ್ರಾಶಸ್ತ್ಯದ ಮತಗಳು 1,848.

ಪಕ್ಷದ ಮುಖಂಡರು, ಕಾರ್ಯಕರ್ತರ ಶ್ರಮ, ಕೆಲವು ಕಡೆ ಜೆಡಿಎಸ್‌ ಅಭ್ಯರ್ಥಿಗಳ ಸಹಕಾರ ನೇರ ಪೈಪೋಟಿಗೆ ಕಾರಣವಾಗಿತ್ತು. ಅಲ್ಲದೇ ಆರು ವರ್ಷಗಳು ವಿಧಾನ ಪರಿಷತ್‌ ಸದಸ್ಯರಾಗಿದ್ದರೂ, ಅವರ ವಿರುದ್ಧ ಆರೋಪಗಳು ಇರಲಿಲ್ಲ. ಮತದಾರರು ಅವರ ಮೇಲೆ ವಿಶ್ವಾಸ
ಇಟ್ಟಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು