ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮ್ಯಾನ್‍ಹೋಲ್ ದುರಂತವಾದರೆ ಅಧಿಕಾರಿಗಳ ವಿರುದ್ಧ ಕೇಸ್'

ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಖಡಕ್ ಎಚ್ಚರಿಕೆ
Last Updated 4 ಫೆಬ್ರುವರಿ 2021, 6:23 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಮ್ಯಾನ್‍ಹೋಲ್ ದುರಸ್ತಿಗೆ ಕಡ್ಡಾಯವಾಗಿ ಯಂತ್ರವನ್ನು ಬಳಸಬೇಕು. ಯಾವುದೇ ಕಾರಣಕ್ಕೂ ಸಫಾಯಿ ಕರ್ಮಚಾರಿಗಳನ್ನು ಇಳಿಸಬಾರದು. ಒಂದು ವೇಳೆ ಮ್ಯಾನ್‍ಹೋಲ್ ಅವಘಡ ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆಯ ಯಂತ್ರಗಳು ಲಭ್ಯವಿವೆ. ಮ್ಯಾನ್‍ಹೋಲ್ ಸರಿಪಡಿಸಲು ಕಡ್ಡಾಯ
ವಾಗಿ ಯಂತ್ರಗಳನ್ನೇ ಬಳಸಬೇಕು. ಕಾರ್ಮಿಕರಿಗೆ ಕೈವಗಸು, ಗಮ್‍ಬೂಟ್‍ ನೀಡುವುದು ಹಾಗೂ ಅವುಗಳ ಬಳಕೆ ಬಗ್ಗೆ ಖಾತ್ರಿ ಪಡಿಸಬೇಕು. ಸಾರ್ವಜನಿಕರ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಬೇಕು’ ಎಂದು ಸೂಚನೆ ನೀಡಿದರು.

ಶೇ 27 ರಷ್ಟು ಕಸ ವಿಲೇವಾರಿ: ಪ್ರತಿ ಮನೆಯಿಂದ ಮೂಲದಿಂದಲೇ ಕಸವನ್ನು ವಿಂಗಡಿಸಿ ಸಂಗ್ರಹಿಸಲು ಈಗಾಗಲೇ ಹಲವು ಬಾರಿ ಸೂಚನೆ ನೀಡಲಾಗಿದ್ದರೂ, ಇನ್ನೂ ಸರಿಯಾಗಿ ಅನುಷ್ಠಾನ ಆಗಿಲ್ಲ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೇವಲ ಶೇ 27ರಷ್ಟು ಮಾತ್ರ ಮೂಲದಲ್ಲಿಯೇ ಕಸವನ್ನು ವಿಂಗಡಿಸಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಎಲ್ಲಾ ಕಡೆ ಕಡ್ಡಾಯವಾಗಿ ಶೇ 100ರಷ್ಟು ಕಸವನ್ನು ಮೂಲದಲ್ಲಿಯೇ ವಿಂಗಡಿಸಿ ವಿಲೇವಾರಿ ಮಾಡಬೇಕು ಎಂದು ತಾಕೀತು ಮಾಡಿದರು.

ಮನೆಯಿಂದ ತ್ಯಾಜ್ಯ ಸಂಗ್ರಹಿಸುವ ವೇಳೆ ಒಣ ಕಸ ಮತ್ತು ಹಸಿಕಸವನ್ನು ಕಡ್ಡಾಯವಾಗಿ ವಿಂಗಡಿಸಿಯೇ ಪಡೆದು
ಕೊಳ್ಳಬೇಕು. ವಿಂಗಡಿಸಿದ ಕಸವನ್ನು ಗಾಡಿಯವರು ಒಂದೇ ಕಡೆ ರಾಶಿ ಹಾಕುವ ಬಗ್ಗೆಯೂ ದೂರುಗಳು ಬಂದಿವೆ. ಕಸದ ಗಾಡಿಯಲ್ಲಿ ಒಣಕಸ ಮತ್ತು ಹಸಿಕಸಕ್ಕೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸೂಚನೆ ನೀಡಿದರು.

ನಗರ ಪ್ರದೇಶದಲ್ಲಿ ಪೈಪ್ ಕಾಂಪೋಸ್ಟ್ ಪದ್ಧತಿಯನ್ನು ಎಲ್ಲಡೆ ಜಾರಿಗೊಳಿಸಬೇಕು. ಪ್ರಥಮ ಹಂತದಲ್ಲಿ ಸರ್ಕಾರಿ ವಸತಿಗೃಹಗಳಲ್ಲಿ ಪೈಪ್ ಕಾಂಪೋಸ್ಟ್ ಅಳವಡಿಕೆ ಮಾಡಬೇಕು. ಪೈಪ್ ಕಾಂಪೋಸ್ಟ್ ಅಳವಡಿಕೆ ಮಾಡಿದ ಪ್ರದೇಶಗಳಲ್ಲಿ ಒಣಕಸ ಸಂಗ್ರಹಿಸಲು ವಾರಕ್ಕೆ ಎರಡು ಬಾರಿ ಮಾತ್ರ ಕಸದ ಗಾಡಿ ತೆರಳಬೇಕು
ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್. ವೈಶಾಲಿ, ಯೋಜನಾ ನಿರ್ದೇಶಕ ಡಾ.ನಾಗೇಂದ್ರ ಹೊನ್ನಳ್ಳಿ ಇದ್ದರು.

ಆರ್ಥಿಕ ಗಣತಿ ಸರಿಪಡಿಸಲು ಸೂಚನೆ

ಏಳನೇ ಆರ್ಥಿಕ ಗಣತಿಯಲ್ಲಿ ವಾಣಿಜ್ಯ ಉದ್ಯಮಗಳ ಕುರಿತಾದ ಮಾಹಿತಿ ತಪ್ಪಾಗಿದ್ದು, ಪುನಃ ಗಣತಿ ಮಾಡಿ ಸರಿಪಡಿಸುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಸೂಚನೆ ನೀಡಿದರು.

7ನೇ ಆರ್ಥಿಕ ಗಣತಿಯಲ್ಲಿ ಕಳೆದ ಆರ್ಥಿಕ ಗಣತಿಗಿಂತ ವಾಣಿಜ್ಯ ಉದ್ಯಮಗಳು ಜಿಲ್ಲೆಯಲ್ಲಿ ಶೇ 1ರಷ್ಟು ಹೆಚ್ಚಾಗಿರುವುದನ್ನು ತೋರಿಸಿದ್ದರೂ, ವಾಣಿಜ್ಯ ಉದ್ಯಮಗಳಲ್ಲಿ ಇಳಿಕೆ ಕಂಡು ಬಂದಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಆರ್ಥಿಕ ಗಣತಿಯಲ್ಲಿ ಕುಟುಂಬಗಳ ಸಂಖ್ಯೆಯಲ್ಲಿ ಕಳೆದ ಆರ್ಥಿಕ ಗಣತಿಗಿಂತ ಶೇ 23ರಷ್ಟು ಹೆಚ್ಚಳವಾಗಿದೆ. ತೀರ್ಥಹಳ್ಳಿ, ಭದ್ರಾವತಿ, ಶಿಕಾರಿಪುರ, ಹೊಸನಗರಗಳಲ್ಲಿ ಕಳೆದ ಬಾರಿಗಿಂತ ಈ ಗಣತಿಯಲ್ಲಿ ಕಡಿಮೆ ವಾಣಿಜ್ಯ ಉದ್ಯಮಗಳನ್ನು ತೋರಿಸಲಾಗಿದ್ದು, ಇದನ್ನು ಮರುಗಣತಿ ಮಾಡುವಂತೆ ತಿಳಿಸಿದರು.

ಹಾಲು ಮಾರಾಟ ಸೇರಿದಂತೆ ಹೈನುಗಾರಿಕೆ, ಅಡಿಕೆ ಸುಲಿಯುವಿಕೆ, ಟೈಲರಿಂಗ್, ಕಂಟ್ರಾಕ್ಟರ್ ಕೆಲಸ, ಗೂಡಂಗಡಿ ಸೇರಿದಂತೆ ಸಣ್ಣಪುಟ್ಟ ಕಸುಬುಗಳನ್ನು ಸಹ ಆರ್ಥಿಕ ಗಣತಿಯಲ್ಲಿ ವಾಣಿಜ್ಯ ಉದ್ಯಮವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT