ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ₹ 20 ಲಕ್ಷ ಕೋಟಿಯಿಂದ ಬಡವ, ನಿರುದ್ಯೋಗಿಗೆ ಪ್ರಯೋಜನವಿಲ್ಲ: ಕಾಂಗ್ರೆಸ್

Last Updated 14 ಮೇ 2020, 11:12 IST
ಅಕ್ಷರ ಗಾತ್ರ

ಶಿವಮೊಗ್ಗ: ಕೊರೊನಾ ಲಾಕ್‌ಡೌನ್‌ ಪರಿಣಾಮ ದೇಶದ ಶೇ 70ರಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಎಲ್ಲ ನಿರುದ್ಯೋಗಿಗಳಿಗೂ ಕೇಂದ್ರ ಸರ್ಕಾರ ಪ್ರತಿ ತಿಂಗಳು ₹10 ಸಾವಿರ ನೀಡುವ ಮೂಲಕ ಜೀವನ ಭದ್ರತೆ ಒದಗಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್.ಸುಂದರೇಶ್ ಆಗ್ರಹಿಸಿದರು.

ಲಾಕ್‌ಡೌನ್‌ನಿಂದ ಎಲ್ಲ ವಲಯ, ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಸಂಕಷ್ಟ ತಗ್ಗಿಸಲು ಕೇಂದ್ರ ಸರ್ಕಾರ ₹20 ಲಕ್ಷ ಕೋಟಿ ಘೋಷಿಸಿದೆ. ಈ ವಿಶೇಷ ಪ್ಯಾಕೇಜ್‌ ಜನರ ಮೂಗಿಗೆ ತುಪ್ಪ ಸವರುವ ನಡೆ ಅಷ್ಟೆ. ದೊಡ್ಡದೊಡ್ಡ ಕೈಗಾರಿಕೆಗಳಿಗೆ, ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತದೆ. ಬಡವರು, ಶ್ರಮಿಕ ವರ್ಗ, ರೈತರು, ನಿರುದ್ಯೋಗಿಗಳಿಗೆ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ, ಇಂತಹ ವರ್ಗಗಳಿಗೇ ವಿಶೇಷ ಪ್ಯಾಕೇಜ್ ಘೋಷಿಸಬೇಕು. ರೈತರು ಮಾಡಿದ ಎಲ್ಲ ಬ್ಯಾಂಕ್‌ಗಳಸಾಲ ಸಂಪೂರ್ಣ ಮನ್ನಾ ಮಾಡಬೇಕು. ಶ್ರಮಿಕ ವರ್ಗದವರಿಗೆ ಎರಡು ತಿಂಗಳಿಗಾಗುವಷ್ಟು ಆಹಾರ ಧಾನ್ಯ ವಿತರಿಸಬೇಕು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಕೇಂದ್ರ, ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಹಲವು ಸಾಂಕ್ರಾಮಿಕ ರೋಗಗಳನ್ನು ಎದುರಿಸಲಾಗಿತ್ತು. ಹೊಸ ರೀತಿಯ ವೈರಸ್‌ ಚೀನದಲ್ಲಿ ಕಾಣಿಸಿಕೊಂಡಾಗಲೇ ಮುಂಜಾಗ್ರತೆ ವಹಿಸಬೇಕಿತ್ತು. ಭಾರತದಲ್ಲಿ ಮಾರ್ಚ್‌ 2ರಂದು ಕೊರೊನಾ ಸೋಂಕು ಇರುವುದು ಪತ್ತೆಯಾದ ಎಚ್ಚೆತ್ತುಕೊಳ್ಳಬೇಕಿತ್ತು. ಅಂತರಾಷ್ಟ್ರೀಯ ವಿಮಾನಗಳ ಸಂಚಾರದ ಮೇಲೆ ನಿಷೇಧ ವಿಧಿಸಬೇಕಿತ್ತು. ವಿದೇಶದಿಂದ ಬಂದವರಿಗೆ ಒಂದು ತಿಂಗಳು ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಿಸಬೇಕಿತ್ತು. ಇಂತಹ ಯಾವ ಕ್ರಮಗಳನ್ನೂ ಕೈಗೊಳ್ಳದೆ ಏಕಾಏಕಿ ಲಾಕ್‌ಡೌನ್‌ ಘೋಷಿಸುವ ಮೂಲಕ ದೇಶ ಜನರನ್ನು ಬೀದಿಗಳಲ್ಲಿ ಬದುಕುವಂತೆ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗ ಲಾಕ್‌ಡೌನ್‌ ಮೂರನೇ ಹಂತ ಮುಕ್ತಾಯಗೊಳ್ಳುತ್ತಿದೆ. 4ನೇ ಹಂತಕ್ಕೆ ಸಾಗುತ್ತಿದ್ದೇವೆ. ಇಂತಹ ಸಂಕೀರ್ಣ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಚರ್ಚಿಸದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ. ಮೊದಲ ಹಂತದ ಲಾಕ್‌ಡೌನ್‌ ಸಮಯದಲ್ಲಿ ಘೋಷಿಸಿದ ₹1.70 ಕೋಟಿ ಪ್ಯಾಕೇಜ್‌ ನೆರವು ಯಾರಿಗೆ ತಲುಪಿದೆ ಎಂಬ ಮಾಹಿತಿ ಇಲ್ಲ. ಬೇಕಾಬಿಟ್ಟಿ ಘೋಷಣೆ ಮೂಲಕ ದೇಶದ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಬ್ಲಾಕ್ ಅಧ್ಯಕ್ಷರಾದ ಪಂಡಿತ್ ವಿ.ವಿಶ್ವನಾಥ್ (ಕಾಶಿ), ನಾಗರಾಜ್, ಪ್ರಧಾನ ಕಾರ್ಯದರ್ಶಿ ಸಿ.ಎಸ್.ಚಂದ್ರಭೂಪಾಲ್, ದೀಪಕ್ ಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT