ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ಉದ್ಯೋಗ ಸೃಷ್ಟಿ; ಚರಕದ ಪಾತ್ರ ಪ್ರಮುಖ

ಚರಕ ಸಂಸ್ಥೆ ಮಾರಾಟ ಮಳಿಗೆಯನ್ನು ಉದ್ಘಾಟಿಸಿದ ಸಂಗಂ
Last Updated 26 ಜುಲೈ 2021, 4:03 IST
ಅಕ್ಷರ ಗಾತ್ರ

ಸಾಗರ: ಮಲೆನಾಡು ಭಾಗದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಚರಕ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ನಿವೃತ್ತ ವೈದ್ಯಾಧಿಕಾರಿ ಡಾ.ಬಿ.ಜಿ.ಸಂಗಂ ಹೇಳಿದರು.

ತಾಲ್ಲೂಕಿನ ಭೀಮನಕೋಣೆ ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನವೀಕರಣಗೊಂಡ ಚರಕ ಸಂಸ್ಥೆಯ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಒಂದು ಸಂಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಸವಾಲಿನ ಕೆಲಸ. ಆ ಸವಾಲನ್ನು ಚರಕ ಸಮರ್ಥವಾಗಿ ನಿಭಾಯಿಸಿದೆ’ ಎಂದರು.

‘ಜಗತ್ತಿನ ವಿವಿಧ ದೇಶಗಳಲ್ಲಿ ಕೋವಿಡ್‌ನಿಂದಾಗಿ ವ್ಯಾಪಾರ ವಹಿವಾಟುಗಳಿಗೆ ಹಿನ್ನಡೆ ಉಂಟಾಗಿದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಗ್ರಾಮೀಣ ಉದ್ದಿಮೆಯಲ್ಲಿ ಕೆಲಸ ಮಾಡುವವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನ ನೀಡಬೇಕು. ಕೋವಿಡ್ ಮೂರನೇ ಅಲೆ ಬರುತ್ತದೆ ಎಂದು ಗಾಬರಿ ಬೀಳುವ ಅಗತ್ಯವಿಲ್ಲ. ಆದರೆ, ಮುಂಜಾಗ್ರತೆ ವಹಿಸಬೇಕು’ ಎಂದು ಅವರು ಕಿವಿಮಾತು ಹೇಳಿದರು.

ಭೀಮನಕೋಣೆ ಗ್ರಾಮ ಪಂಚಾಯಿತಿ ಸದಸ್ಯೆ ಮಮತಾ, ‘ಗ್ರಾಮೀಣ ಮಹಿಳೆಯರಿಗೆ ಅವರ ಊರಿನಲ್ಲೇ ಕೆಲಸ ನೀಡುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ಚರಕ ಸಹಕಾರಿಯಾಗಿದೆ. ಈ ಸಂಸ್ಥೆ ಮತ್ತಷ್ಟು ಉದ್ಯೋಗ ಸೃಷ್ಟಿಸುವತ್ತ ಯಶಸ್ಸು ಕಾಣಬೇಕು’ ಎಂದು ಆಶಿಸಿದರು.

ಚರಕ ಸಂಸ್ಥೆಯ ಪ್ರಸನ್ನ, ‘ಲಾಕ್‌ಡೌನ್ ಸಂದರ್ಭದಲ್ಲಿ ಚರಕ ಸಂಸ್ಥೆಯ ಉದ್ಯೋಗಿಗಳಿಗೆ ಅವರು ಈ ಹಿಂದೆ ಮಾಡುತ್ತಿದ್ದ ಕೆಲಸವನ್ನೇ ನೀಡಲು ಸಾಧ್ಯವಾಗಿಲ್ಲ. ಆದರೆ, ಸಂಸ್ಥೆಗೆ ಸಂಬಂಧಪಟ್ಟ ಕಟ್ಟಡಗಳ ದುರಸ್ತಿ, ನಿರ್ವಹಣೆ, ಉತ್ಪನ್ನಗಳ ಕುರಿತ ತರಬೇತಿ, ಆವಿಷ್ಕಾರ ಮೊದಲಾದ ಕೆಲಸಗಳನ್ನು ಮಾಡುವ ಮೂಲಕ ಎರಡನೆ ಅಲೆಯ ಲಾಕ್‌ಡೌನ್‌ ಸಮಯವನ್ನು ಸಮರ್ಥವಾಗಿ ಬಳಸಿಕೊಳ್ಳಲಾಯಿತು’ ಎಂದರು.

ಭೀಮನಕೋಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಅಧ್ಯಕ್ಷತೆ ವಹಿಸಿದ್ದರು. ವಿಲಿಯಂ, ಮಹಾಲಕ್ಷ್ಮಿ, ರುದ್ರಪ್ಪ, ಪದ್ಮಶ್ರೀ, ಸತ್ಯವತಿ, ಮಧುರಾ, ರಮೇಶ್, ಹುಚ್ಚೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT