ಸೊರಬ: ಒಳಮೀಸಲಾತಿ ವರ್ಗೀಕರಣ ಕುರಿತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ತಾಲ್ಲೂಕಿನ ಭೋವಿ, ಕೊರಮ, ಕೊರಚ ಹಾಗೂ ಬಂಜಾರ ಸಮುದಾಯದವರು ಬುಧವಾರ ಪಟ್ಟಣದಲ್ಲಿ ಪ್ರತಿಭಟಿಸಿದರು.
‘ಭೋವಿ, ಬಂಜಾರ, ಕೊರಚ, ಕೊರಮ ಸೇರಿದಂತೆ ಪರಿಶಿಷ್ಟ ಜಾತಿ, ಪಂಗಡದಲ್ಲಿ ಒಟ್ಟು 109 ಜಾತಿಗಳು ಸಹೋದರರಂತೆ ಮೀಸಲಾತಿ ಹಂಚಿಕೊಂಡು ಸಹಜೀವನ ನಡೆಸುತ್ತಿವೆ. ಒಳಮೀಸಲಾತಿ ವರ್ಗೀಕರಣದ ಹೆಸರಿನಲ್ಲಿ ಈ ಸಮುದಾಯಗಳನ್ನು ಶೋಷಣೆ ಮಾಡಲು ಹೊರಟಿದೆ’ ಎಂದು ಭೋವಿ ಸಮಾಜದ ತಾಲ್ಲೂಕು ಅಧ್ಯಕ್ಷ ಎಚ್.ಜಯಪ್ಪ ಆಕ್ರೋಶ ವ್ಯಕ್ತಪಡಿಸಿದರು.
‘ಭೋವಿ, ಕೊರಚ, ಕೊರಮ ಹಾಗೂ ಬಂಜಾರ ಜಾತಿಗಳ ಜನರು ಹಾಡಿ, ಹಟ್ಟಿ ಮತ್ತು ತಾಂಡಾಗಳಲ್ಲಿ ನಿಕೃಷ್ಟವಾದ ಜೀವನ ಸಾಗಿಸುತ್ತಿದ್ದಾರೆ. ಈ ಜಾತಿಗಳಲ್ಲಿ ಬಹಳಷ್ಟು ಜನರು ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಈ ಸ್ಥಿತಿಯಲ್ಲಿದ್ದಾಗಲೂ ಶೇ 13ರಷ್ಟು ಇರುವ ಮೀಸಲಾತಿಯಲ್ಲಿ ಒಳಮೀಸಲಾತಿ ವರ್ಗೀಕರಣದಲ್ಲಿ ಶೇ 4.5 ಕೊಡುವುದರಿಂದ ಅವರ ಜೀವನ ಮಟ್ಟ ಇನ್ನೂ ನಿಕೃಷ್ಟವಾಗುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್ ದೂರಿದರು.
ಹಳೆಯ ಮೀಸಲಾತಿ ಮುಂದುವರಿಸಬೇಕು. ಶಿಕಾರಿಪುರದ ಪ್ರತಿಭಟನೆಯಲ್ಲಿ ಬಂಧಿಸಿದ ಮುಖಂಡರನ್ನು ಬಿಡುಗಡೆ ಮಾಡಬೇಕು.
ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾ ಗುವುದು ಎಂದು ಎಚ್ಚರಿಸಿದರು.
ತಾಲ್ಲೂಕು ಬಂಜಾರ ಸಮಾಜದ ಅಧ್ಯಕ್ಷ ಯಂಕ್ಯಾನಾಯಕ್, ಕೊರಮ ಸಮಾಜದ ಅಧ್ಯಕ್ಷ ರವಿ ತಿಮ್ಮಾಪುರ, ಶ್ರೀನಿವಾಸ, ಶಿವಕುಮಾರ್, ಅಭಿಷೇಕ್, ಸುರೇಶ್ ಬಿಳವಾಣಿ, ಜೈಶೀಲಪ್ಪ, ಓಂಕಾರನಾಯಕ್, ಧರ್ಮನಾಯಕ್, ಸುರೇಶ್ ಉದ್ರಿ, ಮನಸ್ವಿನಿ
ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.