ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ ವಿವಾದ: ಬೂದಿ ಮುಚ್ಚಿದ ಕೆಂಡದಂತಾದ ಹಣಗೆರೆ

ಗ್ರಾಮಸ್ಥರು, ವ್ಯಾಪಾರಸ್ಥರ ನಡುವಿನ ತಿಕ್ಕಾಟ
Last Updated 10 ಸೆಪ್ಟೆಂಬರ್ 2020, 2:42 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಹಣಗೆರೆಯ ಪ್ರಸಿದ್ಧ ಸೌಹಾರ್ದ ಧಾರ್ಮಿಕ ಕೇಂದ್ರದ ಸ್ವಚ್ಛತೆಯ ವಿಚಾರ ಗ್ರಾಮಸ್ಥರು ಹಾಗೂ ವ್ಯಾಪಾರಸ್ಥರ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.

ಪ್ರಾಣಿ ಬಲಿ ನಿಷೇಧದ ನಡುವೆ ಪರಂಪರೆಯಲ್ಲಿ ಉಳಿದುಕೊಂಡು ಬಂದ ಸಂಪ್ರದಾಯದ ಕಟ್ಟುಪಾಡುಗಳಿಗೆ ಕಡಿವಾಣ ಹಾಕಬೇಕು ಎಂಬ ಕುರಿತು ಹಣಗೆರೆ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಸಮಾಲೋಚನಾ ಸಭೆ ನಡೆಯಿತು. ಸಭೆಯ ತೀರ್ಮಾನ ಸ್ಥಳೀಯರು ಹಾಗೂ ವಸತಿ ಗೃಹ, ವ್ಯಾಪಾರ ನಡೆಸಿಕೊಂಡು ಬಂದವರ ನಡುವೆ ವೈಮನಸ್ಸು ಬೆಳೆಯಲು ಅವಕಾಶ ಕಲ್ಪಿಸಿದೆ.

ಇಲ್ಲಿನ ಹಜರತ್ ಸೈಯದ್ ಸಾದತ್ ದರ್ಗಾ ಹಾಗೂ ಭೂತರಾಯ ಚೌಡೇಶ್ವರಿ ದೇವಸ್ಥಾನಕ್ಕೆ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹುಣ್ಣಿಮೆ, ಅಮಾವಾಸ್ಯೆಯ ದಿನ 70 ಸಾವಿರಕ್ಕೂ ಹೆಚ್ಚು ಭಕ್ತರು ಪೂಜೆ ಸಲ್ಲಿಸುತ್ತಾರೆ. ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ಹಣಗೆರೆ ಸುತ್ತ ಸ್ವಚ್ಛತೆಗೆ ಧಕ್ಕೆಯಾಗಿದೆ. ಭಕ್ತರು, ಪ್ರವಾಸಿಗರು ಹರಕೆ ನೆಪದಲ್ಲಿ ಇಲ್ಲಿ ತಂಗುವುದರಿಂದ ಸುತ್ತಲಿನ ಪರಿಸರ ಹಾಳಾಗುತ್ತಿದೆ. ಕುರಿ, ಕೋಳಿ ಬಲಿ ನೀಡಿ ಇಲ್ಲಿಯೇ ಅಡುಗೆ ಮಾಡುವುದನ್ನು ತಡೆದರೆ ಭಕ್ತರು ಪೂಜೆ ಸಲ್ಲಿಸಿ ತೆರಳಲು ಅವಕಾಶವಾಗುತ್ತದೆ. ಇದರಿಂದ ಹಣಗೆರೆಯ ಸ್ವಚ್ಛತೆ ಕಾಪಾಡಲು ಸಾಧ್ಯ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.

ಲಾಕ್‌ಡೌನ್ ಸಮಯದಲ್ಲಿ ಪ್ರವಾಸಿಗರ ನಿಷೇಧದಿಂದ ಹಣಗೆರೆ ಸಂಪೂರ್ಣ ಸ್ವಚ್ಛತೆಯಿಂದ ಕೂಡಿದೆ. ಪ್ರಾಣಿಬಲಿಗೆ ಅವಕಾಶ ನೀಡಿದರೆ ಸ್ವಚ್ಛತೆ ಕಾಪಾಡಿಕೊಂಡು ಹೋಗಲು ಸಾಧ್ಯವಿಲ್ಲ ಎಂಬ ವಿಚಾರಇಬ್ಬರ ನಡುವಿನ ಸಂಘರ್ಷಕ್ಕೆ ದಾರಿ ಮಾಡಿದೆ.

‘ಹಣಗೆರೆ ಧಾರ್ಮಿಕ ಕೇಂದ್ರದ ಸುತ್ತಅನೇಕ ವಸತಿ ಗೃಹಗಳಿವೆ. ಕೆಲ ವಸತಿ ಗೃಹಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ. ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುತ್ತಿಲ್ಲ. ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅನೇಕ ವಸತಿ ಗೃಹ ಕಟ್ಟಗಳು ಅನಧಿಕೃತವಾಗಿ ನಿರ್ಮಾಣಗೊಂಡಿವೆ. ಕಳೆದ ಮೂರು ವರ್ಷಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ತಲೆಎತ್ತಿವೆ. ವನ್ಯಜೀವಿ ಅಭಯಾರಣ್ಯ ನಿಯಮ ಕಠಿಣವಾಗಿರುವ ಸಂದರ್ಭದಲ್ಲಿ ವಸತಿ ಗೃಹಗಳ ಕಟ್ಟಡ ನಿರ್ಮಾಣಕ್ಕೆ ಅವಕಾಶ ದೊರೆತಿರುವುದು ಹೇಗೆ’ ಎಂಬುದು ಗ್ರಾಮಸ್ಥರ ಪ್ರಶ್ನೆ.

‘ಹಲವು ವರ್ಷಗಳಿಂದ ಪ್ರಾಣಿಬಲಿ ಪರಂಪರೆ ಮುಂದುವರಿದಿದೆ.
ಹಲವರು ಇಲ್ಲಿ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಯಾರದ್ದೋ ತಪ್ಪಿಗೆ ಎಲ್ಲರನ್ನೂ ಗುರಿ ಮಾಡುವುದು ಸರಿಯಲ್ಲ’ ಎಂದು ವ್ಯಾಪಾರಿ ಚನ್ನವೀರಪ್ಪ ಹೇಳಿದರು.

‘ಹಣಗೆರೆ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಅಪರಾಧ ಕೃತ್ಯಗಳು ನಡೆಯುತ್ತಿವೆ. ಇಲ್ಲಿನ ಕಾಡಿನಲ್ಲಿ ಆಗಾಗ್ಗೆ ಮೃತದೇಹಗಳು ಪತ್ತೆಯಾಗುತ್ತಿವೆ. ಆಯನೂರು ಮಾರ್ಗವಾಗಿ ತೀರ್ಥಹಳ್ಳಿ ಕಡೆಗೆ ಬರುವ ವಾಹನಗಳನ್ನು ಅಡ್ಡಗಟ್ಟಿ ಪ್ರಯಾಣಿಕರನ್ನು ಬೆದರಿಸಲಾಗುತ್ತಿದೆ. ಅಪರಾಧ ಕೃತ್ಯಗಳನ್ನು ತಡೆಯಲು ಇಲ್ಲಿ ಪೊಲೀಸ್ ಉಪ ಠಾಣೆ ಅಗತ್ಯವಿದೆ’ ಎಂದು ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರೊಬ್ಬರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT