ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಜಾರಿಗೊಳಿಸಿದರೆ ಮುಖ್ಯಮಂತ್ರಿ ಜೈಲಿಗೆ: ಬೇಳೂರು ಆರೋಪ

Last Updated 11 ಡಿಸೆಂಬರ್ 2020, 13:35 IST
ಅಕ್ಷರ ಗಾತ್ರ

ಸೊರಬ: ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಲೋಕಾಯುಕ್ತ ಸಂಸ್ಥೆ ಅನುಷ್ಠಾನಗೊಳಿಸಿದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರರು ಜೈಲಿಗೆ ಹೋಗುತ್ತಾರೆ ಎಂಬ ಭಯದಿಂದ ಗೋಹತ್ಯೆ ನಿಷೇಧ ಮಸೂದೆ ಜಾರಿ ಮಾಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆ ಕಾರಣ ಶುಕ್ರವಾರ ನಡೆದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಗೋ ಮಾಂಸ ರಫ್ತಿನಲ್ಲಿ ವಿಶ್ವದಲ್ಲಿಯೇ ದೇಶ ಎರಡನೇ ಸ್ಥಾನದಲ್ಲಿದೆ. ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದು ಜನರ ಭಾವನೆಗಳಿಗೆ ಧಕ್ಕೆ ತರುವ ಮೂಲಕ ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ಎಪಿಎಂಸಿ, ಭೂ ಸುಧಾರಣಾ ಕಾಯ್ದೆ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಜನಪರ ಯೋಜನೆಗಳನ್ನು ರದ್ದುಗೊಳಿಸಿ ಹಿಂದುಳಿದವರಿಗೆ ಹಾಗೂ ಬಡವರಿಗೆ ಅನ್ಯಾಯ ಎಸುಗುತ್ತಿದೆ ಎಂದು ದೂರಿದರು.

ಕಾರ್ಯಕರ್ತರು ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗ್ರಾಮ ಪಂಚಾಯಿತಿ ಅಧಿಕಾರ ಹಿಡಿಯಲು ಒಗ್ಗಟ್ಟಿನಿಂದ ಕಾರ್ಯತಂತ್ರ ರೂಪಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಅಧಿಕಾರ ಹಿಡಿಯುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.

ಕೊರೊನಾದಂತಹ ಸಂಕಷ್ಟದಲ್ಲಿ ಜನ ಸಾಮಾನ್ಯರ ಬದುಕಿಗೆ ಯೋಜನೆಗಳನ್ನು ರೂಪಿಸದೇ, ನಿಗಮ ಮಂಡಳಿ ರಚಿಸಿ ಕೋಟ್ಯಂತರ ರೂಪಾಯಿ ಅನುದಾನ ನೀಡಿರುವುದು ಓಲೈಕೆ ರಾಜಕಾರಣದ ಉದ್ದೇಶವಾಗಿದೆ. ಸರ್ಕಾರಕ್ಕೆ ನಿಗಮ ಮಂಡಳಿಗಳನ್ನು ಸ್ಥಾಪಿಸುವ ಇಚ್ಚಾಶಕ್ತಿ ಇದ್ದರೆ ಎಲ್ಲಾ ಸಮುದಾಯಗಳಿಗೂ ಸ್ಥಾಪಿಸಲಿ ಎಂದು ಆಗ್ರಹಿಸಿದರು.

ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಪಕ್ಷ ಸಂಘಟನೆಯಲ್ಲಿ ಹೊಸ ಚೈತನ್ಯ ಮೂಡಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ತಾಲ್ಲೂಕಿನಲ್ಲಿ ಬಿಜೆಪಿ ಹೊರತುಪಡಿಸಿ ಮಧು ಬಂಗಾರಪ್ಪ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆಯನ್ನು ಎದುರಿಸಲಾಗುವುದು. ಈ ಕುರಿತು ಸ್ಥಳೀಯ ಮುಖಂಡರು ಅಭ್ಯರ್ಥಿಗಳ ಆಯ್ಕೆಯ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಮಾತನಾಡಿದರು. ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಸಿ. ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಶ್ರೀಧರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಆಫ್ರಿನ್, ಸುಲ್ತಾನ ಬೇಗಂ, ಕೆ. ಮಂಜುನಾಥ್, ಚೌಟಿ ಚಂದ್ರಶೇಖರ್ ಪಾಟೀಲ್, ಸುಜಾತ ಜೋತಾಡಿ, ಹಬಿಬುಲ್ಲಾ, ಸಾಜೀದ್ ಅಹಮದ್, ಶಿವಪ್ಪ ನಡಹಳ್ಳಿ, ರೇವಣಪ್ಪ, ಲಕ್ಷ್ಮಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT