ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಸೇವೆಗೆ ಸಂಪೂರ್ಣ ಬದುಕು ಮುಡಿಪು

‘ನಮ್ಮೊಲುಮೆ’ಯ ಅಭಿನಂದನೆ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ
Last Updated 1 ಮಾರ್ಚ್ 2021, 5:07 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಬದುಕಿನ‌ ಕೊನೆಯ ಉಸಿರು ಇರುವವರೆಗೂ ಜನರ ಸೇವೆಗೆ ಬದುಕು ಮೀಸಲಿಡುವೆ. ಸಾಮಾನ್ಯ ವ್ಯಕ್ತಿಯಾದ ತಮ್ಮನ್ನು ಉನ್ನತ ಹುದ್ದೆಗೇರಲು ಸಹಕರಿಸಿದ ಸಮಾಜದ ಋಣ ತೀರಿಸುವೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದ ಹಳೇ ಜೈಲು ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಮಂಡ್ಯದಲ್ಲಿರಸ್ತೆ ಬದಿ ಕುಳಿತು ಮಾವ, ತಾತನ ಜತೆ ತರಕಾರಿ, ಲಿಂಬೆಹಣ್ಣು ಮಾರಾಟ ಮಾಡುತ್ತಿದ್ದ ಸಾಮಾನ್ಯ ಹುಡುಗನಿಗೆ ಸಮಾಜ ಮುಖ್ಯಮಂತ್ರಿ ಸ್ಥಾನ ನೀಡಿದೆ. ನನ್ನೊಳಗಿನ ಶಕ್ತಿ ಗುರುತಿಸಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಹೋರಾಟವನ್ನೇ ಉಸಿರು ಮಾಡಿಕೊಂಡು ಬದುಕಿದವನು ನಾನು. ಮೂರು ದಶಕಗಳು ವಿರೋಧ ಪಕ್ಷದಲ್ಲೇ ಕಳೆದಿದ್ದೆ. 2006ರ ನಂತರ ಉಪಮುಖ್ಯಮಂತ್ರಿ, ಮಂತ್ರಿ ಪದವಿ ದೊರೆತಿದೆ. ಅಂದಿನಿಂದ ಇಲ್ಲಿಯವರೆಗೂ ಸಾಧನೆ ಮಾತನಾಡುವಂತೆ ಮಾಡಿರುವೆ’ ಎಂದರು.

‘ಮುಂದಿನ ಎರಡು ವರ್ಷ ಇನ್ನಷ್ಟು ಒಳ್ಳೆಯ ಕೆಲಸ ಮಾಡುವೆ. ಶಿವಮೊಗ್ಗದ ಜನರು ರಾಜಕೀಯ ಶಕ್ತಿ ತುಂಬಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿರುವೆ. ಮುಂದೆ ಬಂದವರಿಗೆ ಅಭಿವೃದ್ಧಿ ಕೆಲಸ ಮಾಡಲು ಏನೂ ಉಳಿಯಬಾರದು ಹಾಗೆ ಮಾಡಿ ತೋರಿಸುವೆ. ಯಾರು ಏನೇ ಟೀಕೆ ಮಾಡಲಿ ನಾವು ಹೋಗುತ್ತಿರುವ ದಾರಿ ಸರಿ ಇದ್ದರೆ ಸಾಕು. ಅಧಿಕಾರ‌‌ ಶಾಶ್ವತ ಅಲ್ಲ. ಇದ್ದಾಗ ಒಳ್ಳೆಯ ಕೆಲಸ ಮಾಡಬೇಕು. ಋಣ ಹೇಗೆ ತೀರಿಸಬೇಕು’ ಎಂದು ಭಾವೋದ್ವೇಗಕ್ಕೆ ಒಳಗಾದರು.

ಅಭಿನಂದನಾ ನುಡಿಗಳನ್ನಾಡಿದ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಪುರಸಭೆ ಅದ್ಯಕ್ಷರಾಗಿದ್ದಾಗ ಯಡಿಯೂರಪ್ಪ ಅವರ ಮೇಲೆ ಹಲ್ಲೆ ನಡೆದಿತ್ತು. ಎಂತಹ ಸಂಕಷ್ಟ ಎದುರಾದರೂ ಅವರು ನಂಬಿಕೆ ಕಳೆದುಕೊಳ್ಳಲಿಲ್ಲ. ಇಲ್ಲಿಯವರೆಗೂ ಉಳಿಸಿಕೊಂಡು‌ ಬಂದಿದ್ದಾರೆ. ಅಂದುಕೊಂಡಿದ್ದನ್ನು‌ ಸಾಧಿಸಿದ್ದಾರೆ. ಅಯೋಧ್ಯೆ ಹೋರಾಟ, ಕಾಶ್ಮೀರ ಭೇಟಿ, ಜೈಲುವಾಸ, ಅಲ್ಲೂ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ವಿಚಾರಗಳನ್ನು ಸ್ಮರಿಸಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ‘ಸ್ಕೂಟರ್‌ನಲ್ಲಿ ನಗರದ ಬೀದಿ ಬೀದಿ‌ ಸುತ್ತಿದ್ದೆವು. ಅಂದು ಹೋರಾಟ ಸಂಘಟಿಸಲು ಹಣವೂ ಇರಲಿಲ್ಲ. ಜನ ಅಂದು ₹ 1 ಲಕ್ಷ ದೇಣಿಗೆ ನೀಡಿದ್ದರು. ಯಡಿಯೂರಪ್ಪ ರೈತರ ಸಂಕಷ್ಟಗಳಿಗೆ ಸದಾ ಧ್ಚನಿ ಎತ್ತುತ್ತಿದ್ದರು. ರಾಜ್ಯದ ರೈತರ ಸಮಸ್ಯೆಗಳು ದೇಶದ ಗಮನ ಸೆಳೆಯುವಂತೆ ಮಾಡಿದರು. ಗೋಹತ್ಯೆ ನಿಷೇಧ ಜಾರಿಗೆ ತಂದರು’ ಎಂದ ಶ್ಲಾಘಿಸಿದರು.

ಸಂಸದ ಬಿ.ವೈ. ರಾಘವೇಂದ್ರ, ‘ಬಾಲ್ಯದಿಂದಲೂ ತಂದೆಯ ಹೋರಾಟ ನೋಡಿಕೊಂಡು ಬರುತ್ತಿದ್ದೇವೆ. ನೊಂದವರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತ ಬಂದಿದ್ದಾರೆ’ ಎಂದು ತಂದೆ ಜತೆ ಕಳೆದ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಆರ್‌ಎಸ್‌ಎಸ್‌ ಮುಖಂಡ ಪಟ್ಟಾಭಿರಾಮ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಎಸ್‌. ರುದ್ರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

‘ರಾಜಕಾರಣದ ತ್ರಿವಿಕ್ರಮ ಬಿ.ಎಸ್. ಯಡಿಯೂರಪ್ಪ’ ಪುಸ್ತಕ ಬಿಡುಗಡೆ
‘ರಾಜಕಾರಣದ ತ್ರಿವಿಕ್ರಮ ಬಿ.ಎಸ್. ಯಡಿಯೂರಪ್ಪ’ ಕುರಿತ ಸಂಶೋಧನಾ ಕೃತಿ ಬಿಡುಗಡೆ ಮಾಡಲಾಯಿತು. ಅಭಿನಂದನಾ ಕಾರ್ಯಕ್ರಮದ ನಂತರ ಸಂಗೀತ ನಿರ್ದೇಶಕರಾದ ವಿಜಯ್‌ ಪ್ರಕಾಶ್ ಹಾಗೂ ರಾಜೇಶ್‌ ಕೃಷ್ಣನ್ ವಿಶೇಷ ಸಂಯೋಜನೆಯ ಭಾವಾಭಿನಂದನೆ ಕಾರ್ಯಕ್ರಮ ನಡೆಸಿಕೊಟ್ಟರು. ಕಲಾವಿದೆ ಅನುಶ್ರೀ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT