ಹರಿಹರ: ಕೇಳಿದ್ದನ್ನು ಕೊಡುವ ಕಲ್ಪವೃಕ್ಷವೀಗ ಬರಡು ಪಾತ್ರೆಯಾಗಿದೆ. ತೆಂಗಿನಕಾಯಿ ಬೆಲೆ ಪಾತಾಳಕ್ಕೆ ಇಳಿದು ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ತೆಂಗಿನ ಕಾಯಿಯನ್ನು ಖರೀದಿ ಮಾಡುವ ಬಹುತೇಕ ವ್ಯಾಪಾರಿಗಳು ತೂಕ ಮಾಡಿ ಖರೀದಿಸುವ ಬದಲು ಎಣಿಕೆ ಲೆಕ್ಕದಲ್ಲಿ ಖರೀದಿ ಮಾಡುತ್ತಿದ್ದಾರೆ. ಕೆ.ಜಿ.ಗೆ ₹30ಕ್ಕಿಂತ ಹೆಚ್ಚಿನ ದರ ಪಡೆಯುತ್ತಿದ್ದ ರೈತರು ದಶಕಗಳ ಹಿಂದಿನ ಲೆಕ್ಕದಂತೆ ಎಣಿಕೆಯ ಮೂಲಕ ಕಡಿಮೆ ದರಕ್ಕೆ ಮಾರಾಟ ಮಾಡುವ ಸ್ಥಿತಿ ಎದುರಾಗಿದೆ.
ಭತ್ತ, ಮೆಕ್ಕೆಜೋಳ, ಅಡಿಕೆಯ ಭರಾಟೆ ಇದ್ದರೂ ತಾಲ್ಲೂಕಿನಲ್ಲಿ 4,787 ಎಕರೆ ಪ್ರದೇಶದಲ್ಲಿ ತೆಂಗಿನ ಬೆಳೆ ಇದೆ. ತೆಂಗಿನ ಕಾಯಿಗೆಂದು ಬೆಳೆ ಬಿಟ್ಟುಕೊಂಡು ಕೊಯ್ಲು ಮಾಡಿದ ರೈತರು ದರ ಇಳಿಕೆಯಿಂದಾಗಿ ಕೈ ಸುಟ್ಟು ಕೊಳ್ಳುತ್ತಿದ್ದಾರೆ.
ಮೇ ಮತ್ತು ಜೂನ್‌ನಲ್ಲಿ ₹35 ದರ ಇತ್ತು. ಆದರೆ ಜುಲೈ ಕೊನೆ ವಾರ ಹಾಗೂ ಆಗಸ್ಟ್ ತಿಂಗಳ ಆರಂಭದ ದಿನಗಳಲ್ಲಿ ತೆಂಗಿನಕಾಯಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ದೊಡ್ಡ ಕಾಯಿಗಳನ್ನು ಒಂದಕ್ಕೆ ₹10ರಂತೆ, ಮಧ್ಯಮ ಗಾತ್ರದ ಕಾಯಿಯನ್ನು ಒಂದಕ್ಕೆ ₹5ರಂತೆ ರೈತರು ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ.
ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ದಾಖಲೆಯ ಬಿಸಿಲಿನಿಂದಾಗಿ ಆಗ ಎಳನೀರನ್ನು ಮಾರಾಟ ಮಾಡಿದ ರೈತರು ಉತ್ತಮ ಬೆಲೆ ಪಡೆದಿದ್ದರು. ಆದರೆ ಕಾಯಿಗೆಂದು ಬಿಟ್ಟುಕೊಂಡ ರೈತರು ಈಗ ಬೆಲೆ ಇಳಿಕೆಯಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ.
ಕಪ್ಪು ನುಸಿ ಪೀಡೆ, ಮಳೆ ಕೊರತೆಯಿಂದ ಇಳುವರಿಯಲ್ಲಿ ಗಣನೀಯ ಇಳಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ತೆಂಗು ಬೆಳೆದ ರೈತರು, ಈಗ ದರ ಇಳಿಕೆಯಿಂದಾಗಿ ಮತ್ತೆ ಸಂಕಷ್ಟಕ್ಕೀಡಾಗಿದ್ದಾರೆ.
ಹೊಳೆಸಿರಿಗೆರೆ ಭಾಗದಲ್ಲಿ ತೆಂಗನ್ನು ಸಾಕಷ್ಟು ರೈತರು ಬೆಳೆಯುತ್ತಾರೆ. ಬೆಲೆ ಇಳಿಕೆಯಿಂದ ಸಂಕಷ್ಟ ಎದುರಾಗಿದೆ. ಸರ್ಕಾರ ತೆಂಗಿಗೆ ತಕ್ಷಣ ಬೆಂಬಲ ಬೆಲೆ ಘೋಷಿಸಬೇಕು ಎಂದು ಹೊಳೆಸಿರಿಗೆರೆಯ ಪ್ರಗತಿಪರ ರೈತ ಕುಂದೂರು ಮಂಜಪ್ಪ ಆಗ್ರಹಿಸಿದ್ದಾರೆ.
ಕಾಯಿ ಕೀಳಲು ಪ್ರತೀ ಮರಕ್ಕೆ ₹30 ಕೂಲಿ ಕೊಡಬೇಕು. ಸುಲಿಸಿ ದಾವಣಗೆರೆ ಮಾರುಕಟ್ಟೆಗೆ ಸಾಗಣೆ ಮಾಡಬೇಕು. ಈ ಖರ್ಚು–ವೆಚ್ಚಗಳಿಂದಾಗಿ ರೈತರ ಕೈಗೆ ಲಾಭವೇ ಸಿಗದಂತಾಗಿದೆ. ಕಾಯಿಗೆ ಒಳ್ಳೆ ಬೆಲೆ ಬರಲಿದೆ ಎಂದು ಎಳನೀರನ್ನು ಮಾರಾಟ ಮಾಡಿರಲಿಲ್ಲ. ಈಗ ದರ ಕುಸಿದಿದೆ
-ಆನ್ವೇರಿ ಬಸವನಗೌಡ ಯಲವಟ್ಟಿ ಗ್ರಾಮದ ತೆಂಗು ಬೆಳೆಗಾರ
ಈ ಮೊದಲಿನಂತೆ ಉತ್ತರ ಭಾರತಕ್ಕೆ ಸಾಗಣೆಯಾಗದಿರುವುದು ಆಷಾಢ ಮಾಸದಿಂದಾಗಿ ತೆಂಗಿನ ಕಾಯಿ ದರ ಇಳಿದಿದೆ. ಈಗ ಶ್ರಾವಣ ಆರಂಭವಾಗುತ್ತಿದ್ದು ಬೆಲೆ ಏರಿಕೆಯಾಗುವ ಸಂಭವವಿದೆ
-ರಾಘವೇಂದ್ರ ಪ್ರಸಾದ್ ಜಿ.ಸಿ. ತೋಟಗಾರಿಕೆ ಉಪ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.