ಭಾನುವಾರ, ಜನವರಿ 24, 2021
19 °C

ಸ್ಥಿಮಿತ ಕಳೆದುಕೊಂಡ ಕಾಂಗ್ರೆಸ್ ಮುಖಂಡರು: ಕಟೀಲ್‌ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನಡೆಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಛೇಡಿಸಿದರು.

ಶಿವಮೊಗ್ಗದಲ್ಲಿ ಎರಡು ದಿನಗಳು ನಡೆಯುತ್ತಿರುವ ರಾಜ್ಯ ಬಿಜೆಪಿ ವಿಶೇಷ ಸಭೆಯಲ್ಲಿ ಭಾಗವಹಿಸಲು ಶನಿವಾರ ಬಂದಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ರಾಜ್ಯದಲ್ಲಿ ಸುಮಾರು 42 ಸಾವಿರ ಬಿಜೆಪಿ ಕಾರ್ಯಕರ್ತರು, ಬೆಂಬಲಿತರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. ಈ ಬೆಳವಣಿಗೆಗಳ ನಂತರ ಇನ್ನೂ 10 ವರ್ಷಗಳು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸಿಗುವುದಿಲ್ಲ ಎನ್ನುವುದು ಖಾತ್ರಿಯಾಗಿದೆ. ಹಾಗಾಗಿ, ಆ ಪಕ್ಷದ ನಾಯಕರು ಹತಾಶರಾಗಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಪಕ್ಷದ ಒಳಗೆ ನಡೆಯುವ ಚರ್ಚೆ. ಮೂರನೇ ವ್ಯಕ್ತಿ ಹೇಳಿದ ತಕ್ಷಣ ಕೇಳುವ ಅಗತ್ಯವಿಲ್ಲ’ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸಂಪುಟ ವಿಸ್ತರಣೆ ಕುರಿತು ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಚರ್ಚಿಸಿ ನಿರ್ಧರಿಸುತ್ತಾರೆ. ಮುಂದಿನ ಅಧಿವೇಶನದಲ್ಲಿ ಲವ್‌ ಜಿಹಾದ್‌ ನಿಷೇಧ ಕಾನೂನು ಮಂಡಿಸುವುದು ಖಚಿತ. ಕಾಯ್ದೆ ಜಾರಿಗೆ ಬಿಜೆಪಿ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.

ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಪೆಟ್ರೋಲ್ ದರ ಏರಿಕೆ ವಿರುದ್ಧ ಬಿಜೆಪಿ ಧ್ವನಿ ಎತ್ತಿತ್ತು. ಈಗ ಮಾರುಕಟ್ಟೆಗೆ ತಕ್ಕಂತೆ ಪ್ರತಿದಿನ ತೈಲದರಗಳಲ್ಲಿ ಏರಿಳಿಕೆಯಾಗುತ್ತಿದೆ ಎಂದು ಸಮರ್ಥಿಸಿಕೊಂಡರು.

ಶಿವಮೊಗ್ಗ ಸಂಘಟನಾತ್ಮಕವಾಗಿ ಪ್ರಮುಖ ಕೇಂದ್ರ. ರಾಜ್ಯದಲ್ಲೇ ಮಾದರಿ ಜಿಲ್ಲೆ. ರಾಜಕೀಯದ ಪ್ರಯೋಗ ಶಾಲೆ. ಹೀಗಾಗಿ ಶಿವಮೊಗ್ಗದಲ್ಲೇ ಎರಡು ದಿನ ಸಭೆ ಆಯೋಜಿಸಲಾಗಿದೆ ಎಂದರು.

ಗಣ್ಯರ ದಂಡು: ಬಿಜೆಪಿ ಪ್ರಮುಖ ಪದಾಧಿಕಾರಿಗಳು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಸರ್ಕಾರದ ಹಲವು ಸಚಿವರು ಸೇರಿ ಗಣ್ಯರ ದಂಡೇ ಶಿವಮೊಗ್ಗದಲ್ಲಿ ಬೀಡು ಬಿಟ್ಟಿದೆ. ಅವರು ಉಳಿದುಕೊಂಡಿರುವ ವಸತಿಗೃಹಗಳ ಸುತ್ತ ಭಾರಿ ಭದ್ರತೆ ಕಲ್ಪಿಸಲಾಗಿದೆ. ಭಾನುವಾರ ಸಂಜೆ 4ಕ್ಕೆ ಸಭೆ ಮುಕ್ತಾಯವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು