ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದವರಿಗೆ ಭೂಹಕ್ಕು ಕಲ್ಪಿಸಿದ್ದು ಕಾಂಗ್ರೆಸ್

ಉಪನ್ಯಾಸ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿಕೆ
Last Updated 25 ಅಕ್ಟೋಬರ್ 2021, 4:18 IST
ಅಕ್ಷರ ಗಾತ್ರ

ಸಾಗರ‌: ಹಿಂದುಳಿದ ಜನರಿಗೆ ಭೂಮಿಹಕ್ಕು ಕಲ್ಪಿಸುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಅಮೂಲ್ಯ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ತಾಲ್ಲೂಕಿನ ತುಮರಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ಹಾಗೂ ಕರೂರು ಹೋಬಳಿ ಕಾಂಗ್ರೆಸ್ ಘಟಕದಿಂದ 75ನೇ ಸ್ವಾತಂತ್ರ್ಯೋತ್ಸವ ಹಾಗೂ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಿದ್ದ ‘ಗಾಂಧೀಜಿ ಚಿಂತನೆ’ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿರುವ ಲೋಪ ದೋಷಗಳ ನಿವಾರಣೆಗೆ ಗಾಂಧೀಜಿಯವರ ತತ್ವಗಳು ಸಾರ್ವಕಾಲಿಕ. ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಇರುವ ಅಂತಿಮ ಅಸ್ತ್ರ ಸತ್ಯಾಗ್ರಹ. ಕಾಂಗ್ರೆಸ್ ಸ್ವಾತಂತ್ರ್ಯಾ ನಂತರ ದೇಶದ ದಲಿತರು, ದಮನಿತರ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದೆ. ಗಾಂಧೀಜಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುವಂತಹ ಮನೋವೇದಿಕೆ ಸಿದ್ಧಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಮಾತನಾಡಿ, ‘ಇಂದು ರಾಷ್ಟ್ರ ಹಾಗೂ ರಾಜ್ಯದ ಬಹುತೇಕ ತೀರ್ಮಾನಗಳನ್ನು ಸಂಘ ಪರಿವಾರದ ಕಚೇರಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಇದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾದದ್ದು. ಗಾಂಧೀಜಿಯವರ ಮೌಲ್ಯಗಳು ವಿಶ್ವಕ್ಕೆ ಆದರ್ಶ.
ಕಾಗೋಡು ಚಳವಳಿ ರಾಜ್ಯದಲ್ಲಿನ ಭೂಹೀನರಿಗೆ ಭೂಹಕ್ಕು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ದೇಶದಲ್ಲಿ ನಿಜವಾದ ಗಣತಂತ್ರ ಉಳಿಯಲು ಕಾಂಗ್ರೆಸ್ ಕಾರಣ’ ಎಂದು
ಹೇಳಿದರು.

ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಮಾತನಾಡಿ, ‘ದೇಶದ ಮಹಾನ್ ಚೇತನ ಮಹಾತ್ಮ ಗಾಂಧೀಜಿ. ಗಾಂಧೀಜಿಯವರ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುವ ಕೆಲಸ ನಡೆಯುತ್ತಿದ್ದು, ಇದು ಗಣತಂತ್ರ ವ್ಯವಸ್ಥೆಗೆ ಮಾಡುವ ಅಪಮಾನ. ಪ್ರಧಾನಿ ವಿದೇಶ ಸುತ್ತುವುದನ್ನು ಬಿಟ್ಟು ದೇಶದ ರೈತರ, ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ತುರ್ತು ಅಗತ್ಯವಿದೆ’ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಹರೀಶ್ ಗಂಟೆ, ಪ್ರಮುಖರಾದ ನಾಗರಾಜ್ ಸಸಿಗೊಳಿ, ಜಿ.ಟಿ. ಸತ್ಯನಾರಾಯಣ, ಓಂಕಾರ್ ಮುರಕ್ಕಿ, ವಿಜಯ ಅಡಗಳಲೆ, ರವಿ ಅಳೂರು, ಓಂಕಾರ್ ಜೈನ್, ದೇವರಾಜ ಕಪ್ಪದೂರು, ಗಣೇಶ್, ಸವಿತಾ ದೇವರಾಜ್, ಸೋಮಶೇಖರ್ ಲ್ಯಾವಿಗೆರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT