ಶುಕ್ರವಾರ, ಆಗಸ್ಟ್ 12, 2022
22 °C

ವಿಮಾನನಿಲ್ದಾಣ ವಿನ್ಯಾಸ ಬದಲಿಸದಿದ್ದರೆ ಕೋರ್ಟ್ ಮೊರೆ: ಕಾಂಗ್ರೆಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸೋಗಾನೆ ವಿಮಾನನಿಲ್ದಾಣ ಕಟ್ಟದ ವಿನ್ಯಾಸ (ಬ್ಲೂಪ್ರಿಂಟ್) ಬದಲಾಯಿಸದಿದ್ದರೆ ಕೋರ್ಟ್‌ ಮೆಟ್ಟಿಲೇರಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.

ಬಿಜೆಪಿಯ ಕಮಲದ ಚಿಹ್ನೆಯನ್ನೇ ಬಳಸಿ ಕಟ್ಟಡದ ರೂಪುರೇಷೆ ವಿನ್ಯಾಸಗೊಳಿಸಲಾಗಿದೆ. ವಿಮಾನನಿಲ್ದಾಣದ ಕಟ್ಟಡದಲ್ಲಿಯೂ ಪಕ್ಷದ ಚಿಹ್ನೆ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲು ಬಿಜೆಪಿಯವರು ಯತ್ನಿಸುತ್ತಿದೆ. ಅವರ ಈ ಪ್ರಯತ್ನಕ್ಕೆ ಜಿಲ್ಲಾಡಳಿತ ಸಹಮತ ನೀಡುತ್ತಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಬಿಜೆಪಿ ಆಡಳಿತದಲ್ಲಿ ಇದ್ದ ತಕ್ಷಣ ಕಮಲದ ಚಿಹ್ನೆ ರೀತಿಯ ಕಟ್ಟಡ ವಿನ್ಯಾಸಗೊಳಿಸುವುದು ತರವಲ್ಲ. ಪಕ್ಷದ ಹಣದಿಂದ ವಿಮಾನನಿಲ್ದಾಣ ಮಾಡುತ್ತಿಲ್ಲ. ಜನರ ತೆರಿಗೆ ಹಣ ಬಳಸಲಾಗಿದೆ. ಅಲ್ಲದೇ, ₹  100 ಕೋಟಿ ವೆಚ್ಚದಲ್ಲಿ ಪೂರ್ಣಗೊಳ್ಳಬೇಕಿದ್ದ ನಿಲ್ದಾಣಕ್ಕೆ ₹ 400 ಕೋಟಿ ನಿಗದಿ ಮಾಡಲಾಗಿದೆ. ಆ ಮೂಲಕ ಕಿಕ್‌ಬ್ಯಾಕ್‌ ಪಡೆದಿರುವ ಅನುಮಾನ ವ್ಯಕ್ತವಾಗುತ್ತಿದೆ. ವಿನ್ಯಾಸ ತಕ್ಷಣ ಬದಲಾಯಿಸಬೇಕು. ಜಿಲ್ಲೆಯ ಸಾಹಿತಿಗಳು ಅಥವಾ ಹೋರಾಟಗಾರರ ಹೆಸರು ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

ರಾಮ ಮಂದಿರ ಹೆಸರಲ್ಲಿ ಭ್ರಷ್ಟಾಚಾರ:

ರಾಮನ ಹೆಸರಲ್ಲಿ ಧಾರ್ಮಿಕ ಭಾವನೆ ಕೆರಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಮಂದಿರದ ಹೆಸರಲ್ಲೂ ಹಣ ದೋಚುತ್ತಿದೆ. ರಾಮನ ಹೆಸರಲ್ಲೇ ಪಕ್ಷ ಬೆಳೆಸಿದರು. ರಾಮ ಮಂದಿರಕ್ಕೆ ಹಣ, ಸಾಮಗ್ರಿ ಸಂಗ್ರಹಿಸಿದ್ದರು. ಹೀಗೆ ಸಂಗ್ರಹಿಸಿದ ಲಕ್ಷಾಂತರ ಕೋಟಿ ಹಣ ಅವರ ಬಳಿ ಇದೆ. ಮಂದಿರದ ಬಳಿ 70 ಎಕರೆ ಜಾಗ ₹ 2 ಕೋಟಿಗೆ ಖರೀದಿಸುತ್ತಾರೆ. ಅದನ್ನೇ ರಾಮಮಂದಿರ ಟ್ರಸ್ಟ್‌ ₹ 18.5 ಕೋಟಿಗೆ ಖರೀದಿಸಿದೆ. ಅದರಲ್ಲೂ 16.5 ಕೋಟಿ ಲೂಟಿ ಮಾಡಲಾಗಿದೆ. ಹೀಗೆ ಜನರ ಹಣ ದುರ್ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಬೇಕು. ಮಂದಿರ ನಿರ್ಮಾಣದ ಸಂಪೂರ್ಣ ತನಿಖೆ ನಡೆಸಬೇಕು. ಚುನಾವಣೆಗೆ ಖರ್ಚು ಮಾಡಿದ ಹಣದ ಮಾಹಿತಿ ಪಡೆಯಬೇಕು. ಶ್ರೀಮಂತರ ಹಣದ ಬಳಕೆ ಮೂಲ ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಪಕ್ಷದ ಮುಖಂಡರಾದ ಪಂಡಿತ್ ವಿ. ವಿಶ್ವನಾಥ (ಕಾಶಿ), ಚಂದ್ರಶೇಖರ್, ನಾಗರಾಜ್, ರಘು, ಶಮೀರ್ ಖಾನ್, ಚಂದನ್, ರಂಗೇಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು