ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಜಾಗ್ರತೆ ಮರೆತ ಸರ್ಕಾರಗಳ ಫಲ ಕೊರೊನಾ ಅಲೆ

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್.ಸುಂದರೇಶ್‌ ಆರೋಪ
Last Updated 23 ಏಪ್ರಿಲ್ 2021, 13:59 IST
ಅಕ್ಷರ ಗಾತ್ರ

ಶಿವಮೊಗ್ಗ: ಡಿಸೆಂಬರ್‌ನಲ್ಲೇ ಕೊರೊನಾ ಎರಡನೇ ಹಂತದ ಅಲೆ ಹರಡುವ ಸುಳಿವು ಇದ್ದರೂ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೆ ಜಾಹೀರಾತು ಪ್ರಚಾರದಲ್ಲೇ ಕಾಲ ಕಳೆದವು ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್.ಸುಂದರೇಶ್‌ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಹರಿಹಾಯ್ದರು.

ಚುನಾವಣೆಗಳು, ಪ್ರಚಾರಗಳು, ಸ್ವಾರ್ಥದ ರಾಜಕಾರಣ, ಭ್ರಷ್ಟಾಚಾರದ ಚಟುವಟಿಕೆಗಳಲ್ಲಿಯೇ ಪ್ರಧಾನಿ, ಮುಖ್ಯಮಂತ್ರಿ, ಸಚಿವರು ಕಾಲ ಕಳೆದರು. ಅವರ ನಿರ್ಲಕ್ಷ್ಯದಿಂದಲೇ ಕೊರೊನಾ ವೇಗವಾಗಿ ಹಬ್ಬುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಯಾವ ಪೂರ್ವ ಸಿದ್ಧತೆಯನ್ನೂ ಮಾಡಿಕೊಳ್ಳಲಿಲ್ಲ. ಪರಿಣಾಮ ಸಾವಿರಾರು ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಅಧಿಕಾರ ನಡೆಸುವ ಯೋಗ್ಯತೆಯಿಲ್ಲ. ಕೊರೋನಾ ನಿಯಂತ್ರಿಸಬೇಕು ಇಲ್ಲವೆ ಅಧಿಕಾರ ಬಿಟ್ಟು ತೊಲಗಬೇಕು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಆಮ್ಲಜನಕ ಪೂರೈಕೆ ಇಲ್ಲದೆ ಪ್ರತಿದಿನ ರಾಜ್ಯ, ದೇಶದಲ್ಲಿ ಹೆಚ್ಚಿನ ಜನರು ಜೀವ ತೆರುತ್ತಿದ್ದಾರೆ. ರಾಜ್ಯದಲ್ಲಿ 7 ಕಡೆ ಆಮ್ಲಜನಕ ಉತ್ಪಾದನಾ ಘಟಕಗಳಿವೆ. ಅದರಲ್ಲಿ ನಾಲ್ಕು ಕಡೆ ಬಳ್ಳಾರಿಯಲ್ಲೇ ಇವೆ. 800 ಮೆಗಾಟನ್ ಆಮ್ಲಜನಕ ಉತ್ಪಾದನೆಯಾದರೂ ಸಾಲುತ್ತಿಲ್ಲ. ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಪೂರೈಕೆಗೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳುತ್ತಿಲ್ಲ. ಯಾವಸರ್ಕಾರಿ ಆಸ್ಪತ್ರೆಗಳಲ್ಲೂ ಅಗತ್ಯ ವೆಂಟಿಲೇಟರ್‌ಗಳು ಇಲ್ಲ. ಸಾಮಾನ್ಯ ರೋಗಿಗಳಿಗೂ ಹಾಸಿಗೆ ಸಿಗುತ್ತಿಲ್ಲ ಎಂದು ದೂರಿದರು.

ಲಸಿಕೆಯ ಗುಣಮಟ್ಟವೂ ಅನುಮಾನಾಸ್ಪದವಾಗಿದೆ. ಮೊದಲ ಹಂತದ ಲಸಿಕೆ ಹಾಕಿಸಿಕೊಂಡ 1 ಕೋಟಿ ಜನರಲ್ಲಿ 21 ಸಾವಿರ ಜನರು ಕೋವಿಡ್‌ಗೆ ಒಳಗಾಗಿದ್ದಾರೆ. 2ನೇ ಬಾರಿ ಹಾಕಿಸಿಕೊಂಡ 6 ಸಾವಿರ ಜನರಿಗೆ ಸೋಂಕು ತಗುಲಿದೆ. ತಜ್ಞರಲ್ಲೂ ಗೊಂದಲಗಳಿವೆ. ಇಂತಹ ಸಮಯದಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ನಗರದಲ್ಲಿ ಕೊರೊನಾ ಹರಡುತ್ತಿದ್ದರೂ ಜವಾಬ್ದಾರಿ ನಿಭಾಯಿಸದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸಿದ್ಧರಾಮಯ್ಯ ಅವರನ್ನು ನಿಂದಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಒತ್ತಡ ಹೆಚ್ಚಾಗಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಸೌಲಭ್ಯಗಳು ಇಲ್ಲ. ಖಾಸಗಿ ಆಸ್ಪತ್ರೆಗಳ ಮೇಲೆ ಹಿಡಿತ ಇಟ್ಟುಕೊಂಡಿಲ್ಲ ಎಂದು ದೂರಿದರು.

ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌, ಜಿಲ್ಲೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗಲು ಜಿಲ್ಲಾಡಳಿತ ಕಾರಣ. ಜಿಲ್ಲಾಧಿಕಾರಿ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಸರ್ಕಾರದ ನಿಯಮದಂತೆ ಶೇ 50 ಹಾಸಿಗೆಗಳನ್ನು ಮೀಸಲಿಟ್ಟಿರುವ ಕುರಿತು ಖಾತ್ರಿಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಸಿ.ಎಸ್.ಚಂದ್ರಭೂಪಾಲ, ಸೌಗಂಧಿಕಾ ರಘುನಾಥ್, ಚಂದನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT