ಶುಕ್ರವಾರ, ಡಿಸೆಂಬರ್ 4, 2020
22 °C

ವಿದ್ಯುತ್ ದರ ಏರಿಕೆಗೆ ಕಾಂಗ್ರೆಸ್ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ವಿದ್ಯುತ್ ದರ ಏರಿಕೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಒಂದು ವರ್ಷದಿಂದ ಕೊರೊನಾ ಹೊಡೆತಕ್ಕೆ ಸಿಲುಕಿ ದೇಶದ ಜನರು ತಲ್ಲಣಗೊಂಡಿದ್ದಾರೆ. ತೀವ್ರ ಆರ್ಥಿಕ ಕುಸಿತ, ವ್ಯಾಪಕ ನಿರುದ್ಯೋಗ, ರೈತರ ಬವಣೆ, ಮುಚ್ಚುತ್ತಿರುವ ಸಣ್ಣ ಕೈಗಾರಿಕೆಗಳು, ದುಡಿಮೆ ಇಲ್ಲದೇ ಕಂಗಾಲಾಗಿರುವ ಯುವ ಸಮೂಹ. ಶ್ರಮಿಕ ವರ್ಗ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ರಿಯಾಯಿತಿ ನೀಡಬೇಕಾದ ಸರ್ಕಾರವೇ ವಿದ್ಯುತ್ ದರ ಪರಿಷ್ಕರಿಸಿ, ಪ್ರತಿ ಯೂನಿಟ್‌ಗೆ 40 ಪೈಸೆಯಂತೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಜನರು ನಿತ್ಯವೂ ಸಂಕಷ್ಟ ಅನುಭವಿಸುತ್ತಿರುವ ಈ ಸಮಯದಲ್ಲಿ ವಿದ್ಯುತ್ ದರ ಏರಿಕೆ ಅಕ್ಷಮ್ಯ, ಜನವಿರೋಧಿ ಮತ್ತು ಅಮಾನವೀಯ ಕ್ರಮ ಎಂದು ದೂರಿದರು.

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಜನಪರವಾಗಿತ್ತು. ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿತ್ತು. ಅಂತಹ ಯೋಜನೆಗಳನ್ನು ಜಾರಿಗೊಳಿಸಿತ್ತು. ಸಂಕಷ್ಟದ ಸ್ಥಿತಿಗಳಲ್ಲಿ ಜನರಿಗೆ ಪರಿಹಾರ ನೀಡಿತ್ತು. ಈಗ ವಿರೋಧ ಪಕ್ಷವಾಗಿ ಜನ ವಿರೋಧಿ ಕೃತ್ಯ ಸಹಿಸಲು ಸಾಧ್ಯವಿಲ್ಲ. ತಕ್ಷಣ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಆದೇಶ ಹಿಂಪಡೆಯಬೇಕು. ರಾಜ್ಯಪಾಲರು ಮಧ್ಯ ಪ್ರವೇಶಿಸಿ, ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್‌, ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ, ಎಚ್.ಸಿ.ಯೋಗೀಶ್, ಯಮುನಾ ರಂಗೇಗೌಡ, ಮೆಹಕ್ ಷರೀಫ್, ಪಕ್ಷದ ಮುಖಂಡರಾದ ಇಸ್ಮಾಯಿಲ್ ಖಾನ್, ಎನ್.ರಮೇಶ್, ಎಸ್.ಪಿ.ಶೇಷಾದ್ರಿ, ಎಲ್.ರಾಮೇಗೌಡ, ಸಿ.ಎಸ್.ಚಂದ್ರಭೂಪಾಲ್, ಚಂದನ್, ಪಂಡಿತ್ ವಿಶ್ವನಾಥ್‌, ಯು.ಶಿವಾನಂದ್, ಸಿ.ಜೆ.ಮಧುಸೂದನ್, ಎಚ್.ಪಿ.ಗಿರೀಶ್, ಕೆ.ರಂಗನಾಥ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು