ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊರಬ ಕ್ಷೇತ್ರದಲ್ಲೇ ಸ್ಪರ್ಧೆ: ಮಧು ಬಂಗಾರಪ್ಪ

Last Updated 15 ಡಿಸೆಂಬರ್ 2022, 5:53 IST
ಅಕ್ಷರ ಗಾತ್ರ

ಆನವಟ್ಟಿ: ‘ತಂದೆ ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಆಗಲು ಶಕ್ತಿ ನೀಡಿರುವ ಸೊರಬ ತಾಲ್ಲೂಕಿನ ಪುಣ್ಯಾತ್ಮರಿಗಾಗಿ, ನಾನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೊರಬದಲ್ಲೇ ಸ್ಪರ್ಧೆ ಮಾಡುತ್ತೇನೆ. ನನ್ನ ರಾಜಕೀಯ ಹುಟ್ಟು–ಸಾವು ಇಲ್ಲಿಯೇ ನಿರ್ಧಾರ ಆಗಬೇಕು’ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ಗುಡುಗಿನಕೊಪ್ಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೂತ್‌ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಗ್ರಾಮೀಣ ಕೃಪಾಂಕ, ಆಶ್ರಯ ಮನೆ, ಅಕ್ಷಯ, ಆರಾಧನಾ ಸೇರಿ ಹಲವಾರು ಯೋಜನೆಗಳನ್ನು ರೂಪಿಸಲು ಬಂಗಾರಪ್ಪ ಅವರಿಗೆ ಶಕ್ತಿ ನೀಡಿದ್ದು ಸೊರಬ ತಾಲ್ಲೂಕಿನ ಮತದಾರರು. ಬಂಗಾರಪ್ಪ ಅವರನ್ನು ಸತತವಾಗಿ ಗೆಲ್ಲಿಸಿದ್ದರಿಂದ ಮುಖ್ಯಮಂತ್ರಿ ಸ್ಥಾನ ಲಭಿಸಿತು. ರಾಜ್ಯದಲ್ಲಿ ಬಂಗಾರಪ್ಪ ಅವರನ್ನು ಸ್ಮರಿಸುತ್ತಾರೆ ಎಂದರೆ ಅದು ಸೊರಬ ಮತದಾರರ ಕೊಡುಗೆ ಎಂದು ಹೇಳಿದರು.

‘ರೈತರ ಹಾಗೂ ಬಡವರ ಪರ ಕಾಂಗ್ರೆಸ್ ಕೊಡುಗೆ ಅಪಾರ. ಈಚೆಗೆ ನಡೆದ ಮಲೆನಾಡು ಜನಾಕ್ರೋಶ ಸಮಾವೇಶದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಮಲೆನಾಡು ಜನರ ಸಮಸ್ಯೆಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸ್ಪ‍ಂದಿಸಲು ಸಿದ್ಧ ಎಂದು ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಲೆ ರಾಜ್ಯದಲ್ಲಿ ಬಿರುಗಾಳಿಯಂತೆ ಎದ್ದಿದೆ’ ಎಂದರು.

ಜನಸಾಮಾನ್ಯರಿಗೆ ಅನುಕೂಲವಾದ ಯೋಜನೆಗಳನ್ನು ನೀಡದ ಬಿಜೆಪಿ, ಮಾತು ಮಾತಿಗೆ ಹಿಂದುತ್ವ ಬಳಸುವ ಮೂಲಕ, ಜನರಲ್ಲಿ ಒಡಕು ಭಾವನೆ ಮೂಡಿಸುತ್ತಿದೆ. ಭಾರತ ಜಾತ್ಯತೀತ ರಾಷ್ಟ್ರ. ಜಾತಿ ಧರ್ಮದ ಹೆಸರಲ್ಲಿ ಮನಸ್ತಾಪ ಸರಿಯಲ್ಲ ಎಂದು ಸಲಹೆ ನೀಡಿದರು.

‘ಮಧು ಬಂಗಾರಪ್ಪ ಅವರು ಶಾಸಕರಾಗಿದ್ದಾಗ ಅತಿ ಹೆಚ್ಚು ಅಂದರೆ 6,200 ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿದ್ದರು. ಈಗಿನ ಶಾಸಕರು ತಾಲ್ಲೂಕಿನಲ್ಲಿ 2,900 ಅರ್ಜಿಗಳನ್ನು ವಜಾ ಮಾಡಿದ್ದಾರೆ’ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಜೈಶೀಲಪ್ಪ ದೂರಿದರು.

ಮುಖಂಡರಾದ ನೀಲಕಂಠಪ್ಪ, ವೆಂಕಟೇಶ್ ಕೆ.ಬಿ., ಶಿವಕುಮಾರ, ರಾಮಚಂದ್ರಪ್ಪ, ಕೆ.ಪಿ. ರುದ್ರಗೌಡ, ಕಡ್ಲೇರ್ ರುದ್ರಪ್ಪ, ಟೀಕಪ್ಪ, ರಘುಪತಿ ಚಿಕ್ಕಕಬ್ಬೂರು, ಯಲ್ಲಪ್ಪ, ಸಂಜೀವ ತರಕಾರಿ, ಹಬಿಬುಲ್ಲಾ ಹವಾಲ್ದಾರ್, ವಿಜೇಂದ್ರಸ್ವಾಮಿ ಕಮನವಳ್ಳಿ, ಪರಮೇಶ ನೆಗವಾಡಿ, ನಾಗೇಂದ್ರಪ್ಪ, ಸೋಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT