ಮಂಗಳವಾರ, ಮೇ 11, 2021
27 °C
ಸೋಂಕು ತಡೆಗಟ್ಟಲು ವಿವಿಧ ಇಲಾಖೆ ಅಧಿಕಾರಿಗಳ ಸಭೆ

ಕೊರೊನಾ ನಿಯಂತ್ರಣಕ್ಕೆ ಜನಾಂದೋಲನ: ಶಾಸಕ ಆರಗ ಜ್ಞಾನೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ತಾಲ್ಲೂಕಿನಲ್ಲಿ ಕೊರೊನಾ ಸೋಂಕಿನ ಸರಪಳಿಯನ್ನು ತುಂಡರಿಸಲು ಸಾರ್ವಜನಿಕರ ನೆರವಿನೊಂದಿಗೆ ತಾಲ್ಲೂಕು ಆಡಳಿತ ಜನಾಂದೋಲನ ರೂಪಿಸುವ ಮೂಲಕ ತಡೆಗಟ್ಟಲು ಪ್ರಯತ್ನಿಸುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಶನಿವಾರ ನಡೆದ ಕೊರೊನಾ ನಿಯಂತ್ರಣ ಕುರಿತ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಸೋಂಕಿತರು ಸಹಕಾರ ನೀಡುತ್ತಿಲ್ಲ. ಆಸ್ಪತ್ರೆಗೆ ಬರುವುದರಿಂದ ಸಾವನ್ನು ತಪ್ಪಿಸಲು ಸಾಧ್ಯ. ರೋಗ ಉಲ್ಬಣಿಸಿದರೆ ಬದುಕಿಸುವುದು ಕಷ್ಟ’ ಎಂದು ಹೇಳಿದರು.

‘ತಾಲ್ಲೂಕಿನಲ್ಲಿ ಸೋಂಕು ಉಲ್ಬಣಿಸುತ್ತಿದ್ದು, ಪಟ್ಟಣದ ಜೆಸಿ ಆಸ್ಪತ್ರೆಯಲ್ಲಿ 50 ಹಾಸಿಗೆಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ. 8 ವೆಂಟಿಲೇಟರ್ ಮಂಜೂರಾಗಿದ್ದು, ಇದರಲ್ಲಿ ಐದನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ನೀಡಲಾಗಿದೆ. ಆಸ್ಪತ್ರೆಯಲ್ಲಿ 15 ಜಂಬೋ ಸಿಲಿಂಡರ್, 12 ಮಿನಿ ಸಿಲಿಂಡರ್‌ಗಳು ಇದ್ದು, ಆಕ್ಸಿಜನ್ ಕೊರತೆ ಇಲ್ಲ. ವಾಟಗಾರಿನಲ್ಲಿನ ಮೊರಾರ್ಜಿ ವಸತಿ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. 500 ಹಾಸಿಗೆಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ 50 ಬೆಡ್ ಬಂದಿದ್ದು, 100 ಹಾಸಿಗೆಗಳ ಸಾಮರ್ಥ್ಯದ ಕೋವಿಡ್‌ ಕೇರ್ ಸೆಂಟರ್ ತೆರೆಯಲಾಗುವುದು’ ಎಂದು ಆರಗ ಹೇಳಿದರು.

‘ತಾಲ್ಲೂಕಿನಲ್ಲಿ ಸೋಂಕಿತರನ್ನು ಪತ್ತೆಹಚ್ಚುವ ಕೆಲಸವನ್ನು ಈಗಾಗಲೇ ಆರಂಭಿಸಲಾಗಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸದಸ್ಯರು, ಸೇವಾ ಮನೋಭಾವದ ಯುವಕರ ಪಡೆ ಕಾರ್ಯನಿರ್ವಹಿಸುತ್ತಿದೆ. ಹಳ್ಳಿಗಳಲ್ಲಿ ಜನರು ಜ್ವರದಿಂದ ಬಳಲುತ್ತಿದ್ದಾರೆ. ರೋಗದ ಲಕ್ಷಣ ಇದ್ದವರು ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. ತಾಲ್ಲೂಕಿನ ಎಲ್ಲಾ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದ್ದು, ಶ್ವಾಸಕೋಶಕ್ಕೆ ಹಾನಿಯಾಗುವ ಮೊದಲು ಚಿಕಿತ್ಸೆ ಪಡೆಯಬೇಕು’ ಎಂದು ಆರಗ ಜ್ಞಾನೇಂದ್ರ ಸಲಹೆ ನೀಡಿದರು.

ತಹಶೀಲ್ದಾರ್ ಡಾ.ಎಸ್.ಬಿ.ಶ್ರೀಪಾದ್, ‘ಲಾಕ್‌ಡೌನ್‌ ನಿಮಿತ್ತ ಬೆಂಗಳೂರಿನಿಂದ ಸಾಕಷ್ಟು ಮಂದಿ ಬಂದಿದ್ದಾರೆ. ಅವರೆಲ್ಲರೂ 14 ದಿನ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು. ಅನಗತ್ಯವಾಗಿ ಸಂಚರಿಸಿ ರೋಗ ಹರಡಲು ಕಾರಣರಾಗಬಾರದು. ಸ್ಥಳೀಯ ಗ್ರಾಮ ಪಂಚಾಯಿತಿಗೆ ಬೇರೆ ಊರುಗಳಿಂದ ಬಂದವರು ಮಾಹಿತಿ ನೀಡಿ ಸಹಕರಿಸಬೇಕು. ಕೋವಿಡ್ ಸಹಾಯವಾಣಿ 08181–295940 ಸಂಪರ್ಕಿಸಬಹುದು ಎಂದು ಹೇಳಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಕೇತನ್ ಮಾತನಾಡಿ, ‘ತಾಲ್ಲೂಕಿನಲ್ಲಿ 45 ವರ್ಷ ಮೇಲ್ಪಟ್ಟವರು ಶೇ 54ರಷ್ಟು ಕೋವಿಡ್ ಲಸಿಕೆ ಪಡೆದಿದ್ದಾರೆ. ಲಸಿಕೆ ಸಂಗ್ರಹ ಇಲ್ಲದ ಕಾರಣ ನಿಯಮಿತವಾಗಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿ ಹಾಜರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು