ಶನಿವಾರ, ಜೂನ್ 25, 2022
28 °C

ಶಿವಮೊಗ್ಗ: ದಿನಕ್ಕೆ 9 ಸಾವಿರ ಜನರಿಗೆ ಕೋವಿಡ್‌ ಲಸಿಕೆ; ಜಿಲ್ಲಾ ಆರೋಗ್ಯಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಪ್ರತಿ ದಿನ ಜಿಲ್ಲೆಯ 9 ಸಾವಿರ ಜನರಿಗೆ ಕೊರೊನಾ ಲಸಿಕೆ ಹಾಕಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ ಮಾನ್ಸೂನ್ ಪೂರ್ವಸಿದ್ಧತೆ, ಕೋವಿಡ್ ನಿರ್ವಹಣೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ 12,700 ಡೋಸ್‌ ಲಸಿಕೆ ನೀಡಿದೆ. ಕೇಂದ್ರ ಸರ್ಕಾರ 2,910 ವೈಯಲ್ ನೀಡಿದೆ. ಪ್ರಸ್ತುತ 10 ಸಾವಿರ ವೈಯಲ್ ಸಂಗ್ರಹಿಸಿ ಇಟ್ಟುಕೊಳ್ಳಲಾಗಿದೆ. ಪ್ರತಿ ದಿನ 4ದಿಂದ 5 ಸಾವಿರ ಲಸಿಕೆ ನೀಡಲಾಗುತ್ತಿದೆ. ಇನ್ನು ಮುಂದೆ ಪ್ರತಿದಿನ 9 ಸಾವಿರ ಲಸಿಕೆ ನೀಡಲು ಸಿದ್ಧತೆ ನಡೆದಿದೆ ಎಂದರು.

ಕೊರೊನಾ ಸೋಂಕಿನ ಲಕ್ಷಣವಿಲ್ಲದೇ ಸೋಂಕು ದೃಢಪಟ್ಟವರನ್ನು ಆರೈಕೆ ಮಾಡಲು ಜಿಲ್ಲೆಯಲ್ಲಿ 17 ಕೋವಿಡ್ ಆರೈಕೆ ಕೇಂದ್ರ ಆರಂಭಿಸಲಾಗಿದೆ. ಎಲ್ಲ  ಹಾಸ್ಟೆಲ್‌ಗಳನ್ನೂ ಕೋವಿಡ್‌ ಆರೈಕೆ ಕೇಮದ್ರಗಳಾಗಿ ಪರಿವರ್ತಿಸಲಾಗುತ್ತದೆ. ನಗರದಲ್ಲಿ ಪ್ರಸ್ತುತ 7 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಭದ್ರಾವತಿಯಲ್ಲಿ  ಮೂರು ಕೇಂದ್ರಗಳನ್ನು ತೆರೆಯಲಾಗಿದೆ. ನಗರದಲ್ಲಿ ಪಾಸಿಟಿವಿಟಿ ಹಾಗೂ ಗುಣಮುಖರ ಸಂಖ್ಯೆ ಸಮಬಲವಾಗುತ್ತಿದೆ. 1,604 ಕೋವಿಡ್ ಸೋಂಕಿತರು ಕೇಂದ್ರಗಳಲ್ಲಿ ನೆರವು ಪಡೆಯುತ್ತಿದ್ದಾರೆ ಎಂದು ವಿವರ ನೀಡಿದರು.

ಸಾಗರದ ಉಪ ವಿಭಾಗಧಿಕಾರಿ ನಾಗರಾಜ್ ಮಾತನಾಡಿ, ಸಾಗರದ ವೈದ್ಯರು ಕೋವಿಡ್ ಪತ್ತೆಹಚ್ಚಲು ಸಿಟಿಸ್ಕ್ಯಾನ್ ಮೊರೆ ಹೋಗಿದ್ದಾರೆ. ಆದರೆ, ಸಾಗರದಲ್ಲಿ ಸಿಟಿಸ್ಕ್ಯಾನ್‌ಗೆ ಅನುಕೂಲವಿಲ್ಲ. ಎಲ್ಲರೂ ಶಿವಮೊಗ್ಗದ ಕಡೆ ಮುಖ ಮಾಡಿದ್ದಾರೆ ಎಂದರು.

ಕೃಷಿ ಚಟುವಟಿಕೆಗೆ ಅದ್ಯತೆ ನೀಡಿ: ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ದಾಸ್ತಾನು ಖಾತ್ರಿಪಡಿಸಿಕೊಂಡು, ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್‌ ಸೂಚಿಸಿದರು.

ಸೋಂಕು ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬರುತ್ತಿದ್ದೆ. ಕೃಷಿ ಚಟುವಟಿಕೆಗೆ ಹಂತ ಹಂತವಾಗಿ ಆರಂಭಿಸಲು ಅನುಕೂಲ ಮಾಡಿಕೊಡಬೇಕು. ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಾಕಷ್ಟು ದಾಸ್ತಾನು ಖಾತ್ರಿಪಡಿಸಬೇಕು. ನೆರೆ ಪರಿಸ್ಥಿತಿಯನ್ನು ಎದುರಿಸಲು ಸಹಾಯವಾಣಿ ಆರಂಭ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನೆರೆ ಹಾವಳಿಗೆ ತುತ್ತಾಗಬಹುದಾದ ಪ್ರದೇಶಗಳನ್ನು ಗುರುತಿಸಿ ಸಂಭಾವ್ಯ ಹಾನಿ ತಪ್ಪಿಸಲು ಮುನ್ನಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌, ಈಗಾಗಲೇ ಮಾನ್ಸೂನ್ ಪೂರ್ವಸಿದ್ಧತೆ ಕೈಗೊಳ್ಳಲು ಸೂಚಿಸಲಾಗಿದೆ. ತುರ್ತು ಪರಿಸ್ಥಿತಿ ಎದುರಿಸಲು ಇಂಜಿನಿಯರ್‌ಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ. ತುರ್ತು ರಕ್ಷಣಾ ಕಾರ್ಯಗಳಿಗಾಗಿ 5 ಬೋಟ್‍ಗಳು ಲಭ್ಯವಿದೆ. ಖಾಸಗಿ ಸಂಸ್ಥೆಗಳ ಬೋಟ್‍ಗಳನ್ನು ಅಗತ್ಯ ಬಿದ್ದರೆ ಪಡೆಯಲು ಸೂಚಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ ಎಂದರು.

ನಿಗದಿತ ಅವಧಿ ಒಳಗೆ ಕಾಮಗಾರಿ ಪೂರ್ಣ: ವಿಮಾನನಿಲ್ದಾಣ, ರೈಲ್ವೆ ಮೇಲು ಸೇತುವೆ ಕಾಮಗಾರಿ, ತುಮಕೂರು ಶಿವಮೊಗ್ಗ ಮತ್ತು ಚಿತ್ರದುರ್ಗ ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಸ್ಮಾರ್ಟ್ ಸಿಟಿ ಕಾಮಗಾರಿ, ಸಿಗಂದೂರು ಸೇತುವೆ ನಿರ್ಮಾಣ ಸೇರಿದಂತೆ ಎಲ್ಲಾ ಪ್ರಮುಖ ಯೋಜನೆಗಳನ್ನು ನಿಗದಿತ ಅವಧಿ ಒಳಗೆ ಪೂರ್ಣಗೊಳಿಸುವಂತೆ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು