ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ದಶಕಗಳ ಕಾಂಗ್ರೆಸ್‌ ಮಂತ್ರ ‘ಗರೀಬಿ ಹಠಾವೊ’

ಜನಸೇವಕ್‌ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೇವಡಿ
Last Updated 13 ಜನವರಿ 2021, 11:48 IST
ಅಕ್ಷರ ಗಾತ್ರ

ಶಿವಮೊಗ್ಗ: ಒಂದೇ ಕುಟುಂಬದ ನಾಲ್ಕು ತಲೆಮಾರು ‘ಗರೀಬಿ ಹಠಾವೊ’ ಮಂತ್ರ ಜಪಿಸುತ್ತಲೇ ಐದು ದಶಕಗಳು ದೇಶ ಆಳಿದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ಹೆಸರು ಹೇಳದೇ ಪರೋಕ್ಷ ವಾಗ್ದಾಳಿ ನಡೆಸಿದರು.

ನಗರದ ಪೆಸಿಟ್‌ ಕಾಲೇಜು ಸಭಾಂಗಣದಲ್ಲಿ ಬುಧವಾರ ಬಿಜೆಪಿ ಹಮ್ಮಿಕೊಂಡಿದ್ದ ಜನಸೇವಕ್‌ ಸಮಾವೇಶದಲ್ಲಿ ಅವರು ಮಾತನಾಡಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗ್ರಾಮ ವಿಕಾಸದ ಪಕಲ್ಪನೆ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಹಿಂದೆ ಇದ್ದವರು ಗರೀಬಿ ಹಠಾವೊ ಜಪಿಸುತ್ತಲೇ ಕಾಲ ಕಳೆದರು. ಅಜ್ಜ, ಅಜ್ಜಿ, ಮಗ, ಸೊಸೆ, ಮಕ್ಕಳು, ಮೊಮ್ಮಕ್ಕಳು ಎಲ್ಲರದೂ ಅದೊಂದೆ ಮಂತ್ರ ಎಂದು ಕುಟುಕಿದರು.

ಹಿಂದೆ ವಿರೋಧ ಪಕ್ಷಗಳುಬಿಜೆಪಿಯನ್ನು ‘ದೋ ನಂಬರ್ ಪಾರ್ಟಿ’ ಎಂದು ಹೀಯಾಳಿಸುತ್ತಿದ್ದವು. ಅಂತಹ ಟೀಕೆಗಳನ್ನು ಸಹಿಸಿಕೊಂಡು ಸೈದ್ಧಾಂತಿಕ ಹೋರಾಟದ ಮೂಲಕ ಪಕ್ಷವನ್ನು ಸದೃಢವಾಗಿ ಕಟ್ಟಲಾಗಿದೆ. ಸರ್ಕಾರಕ್ಕೆ ಬೇಕಾದ ಬಹುಮತ ಲೋಕಸಭೆಯಲ್ಲಿ ಇದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಗ್ರಾಮಮಟ್ಟದಲ್ಲೂ ಬಿಜೆಪಿ ಸಂಘಟನೆ ಬಲಿಷ್ಠವಾಗುತ್ತಿದೆ ಎಂದರು.

ಕಾಂಗ್ರೆಸ್‌ನಲ್ಲಿ ನಾಯಕತ್ವವೇ ಇಲ್ಲ. ವೋಟಿಗಾಗಿ ರಾಮಮಂದಿರವೇ ಎಂದು ಹಿಂದೆ ಕಾಂಗ್ರೆಸ್‌ ಕೇಳುತ್ತಿತ್ತು. ಇಂದು ರಾಮಮಂದಿರ ನಿರ್ಮಾಣವಾಗುತ್ತಿದೆ. ಇದು ಬಿಜೆಪಿ ಸಂಕಲ್ಪ. ನುಡಿದಂತೆ ನಡೆದಿದ್ದೇವೆ. ಸಿಎಎ, ಕಾಶ್ಮೀರದ ವಿಚಾರ, ಕೃಷಿ ನೀತಿ ಸೇರಿದಂತೆ ಎಲ್ಲ ವಿಷಯಗಳಲ್ಲೂ ಹೇಳಿದಂತೆ ನಡೆದುಕೊಂಡಿದ್ದೇವೆ ಎಂದರು.

ಕೇಂದ್ರದ ಕೃಷಿ ನೀತಿ ವಿರುದ್ಧ ವಿರೋಧ ಪಕ್ಷಗಳು ಅಪಪ್ರಚಾರ ನಡೆಸಿವೆ. ರೈತರ ಪ್ರಗತಿಗೆ ಇಂತಹ ಕಾಯ್ದೆಗಳು ಪೂರಕವಾಗಿವೆ ಎಂದು ಮನವರಿಕೆ ಮಾಡಿಕೊಡುವ ಕೆಲಸವನ್ನು ಪಕ್ಷದ ಕಾರ್ಯಕರ್ತರು, ಜನ ಪ್ರತಿನಿಧಿಗಳು ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ‘ನಾನು ಜನ ಸೇವಕ’ ಎಂದು ಕರೆದುಕೊಂಡಿದ್ದಾರೆ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳೂ ಜನಸೇವಕರಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಿಗೆ ಸರ್ಕಾರದ ಯೋಜನೆ ಮತ್ತು ಆಡಳಿತ ವ್ಯವಸ್ಥೆ ಕುರಿತು ತರಬೇತಿ ನೀಡುತ್ತಿದ್ದೇವೆ. ಅದಕ್ಕಾಗಿ 285 ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ಚುನಾವಣೆಯಲ್ಲಿ ಗೆಲುವು ಪಡೆದ ಸದಸ್ಯರು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅವರ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಬೇಕು. ಊರಿಗೆ ಆಗಬೇಕಿರುವ ಕೆಲಸಗಳ ಕುರಿತು ಚರ್ಚಿಸಿ, ಕಾರ್ಯಗತಗೊಳಿಸಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿಗಳ ಜನಸಂಖ್ಯೆಗೆ ಅನುಗುಣವಾಗಿ ಸ್ವಚ್ಛ ಭಾರತ್ ಯೋಜನೆಯಡಿ ಅನುದಾನ ನೀಡಲಾಗುತ್ತಿದೆ. ಗ್ರಾಮಗಳ ಅಂಗನವಾಡಿ ದುರಸ್ತಿ, ನೂತನ ಕಟ್ಟಡದ ಬಗ್ಗೆ ಗಮನಹರಿಸಬೇಕು. ಹೊಸ ಕಟ್ಟಡ ನಿರ್ಮಾಣಕ್ಕೆ ₹ 5 ಲಕ್ಷ ನೀಡಲಾಗುತ್ತದೆ. ಶಾಸಕರ ಮೂಲಕ ಅಂಗನವಾಡಿ ದುರಸ್ತಿ, ಅಗತ್ಯವಿರುವ ಹೊಸ ಕಟ್ಟಡಗಳ ಪಟ್ಟಿ ಕಳುಹಿಸಬೇಕು ಎಂದು ಸೂಚಿಸಿದರು.

ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸೋಲಾರ್ ವ್ಯವಸ್ಥೆ ಕಲ್ಪಿಸಲಾಗುವುದು. ಇದರಿಂದ ವಿದ್ಯುತ್ ಸಮಸ್ಯೆ ಬಗೆಹರಿಯುತ್ತದೆ. ರೈತರು, ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಬಿ.ವೈ.ರಾಘವೇಂದ್ರ, ಎಂಎಸ್‌ಐಎಲ್ ಅಧ್ಯಕ್ಷ ಹಾಲಪ್ಪ ಎಚ್‌.ಹರತಾಳು, ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ, ಶಾಸಕರಾದ ಕುಮಾರ್‌ ಬಂಗಾರಪ್ಪ, ಅರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಮಾಜಿ ಶಾಸಕ ಕೆ.ಜಿ.ಕುಮಾರ್ ಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ ಮೇಘರಾಜ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT