ಗುರುವಾರ , ಡಿಸೆಂಬರ್ 1, 2022
20 °C
ಆಹಾರ ದಸರಾ ಸಂಭ್ರಮಕ್ಕೆ ಸಾಥ್ ನೀಡಿದ ಸ್ಪರ್ಧೆ: ಎರಡು ನಿಮಿಷಕ್ಕೆ ಎರಡೂವರೆ ಸೇಬು ಖಾಲಿ

ನಿಮಿಷದಲ್ಲಿ ನಾಲ್ಕು ಮುದ್ದೆ ಗುಳುಂ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸಿಹಿಮೊಗ್ಗೆಯ ಹೃದಯಭಾಗ ಶಿವಪ್ಪ ನಾಯಕ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ಮುದ್ದೆ, ಬಸ್ಸಾರಿನ ಘಮಲು ಹರಡಿತ್ತು. ಆಹಾರ ದಸರಾ ನಿಮಿತ್ತ ಮಹಾನಗರ ಪಾಲಿಕೆಯಿಂದ ಶಿಕ್ಷಕಿಯರಿಗೆ ಎರಡು ನಿಮಿಷಗಳಲ್ಲಿ ಸೇಬು ಹಣ್ಣು ತಿನ್ನುವ ಸ್ಪರ್ಧೆ ನಡೆಯಿತು. ಜೊತೆಗೆ ಸಾರ್ವಜನಿಕರಿಗೆ ಒಂದು ನಿಮಿಷದಲ್ಲಿ ಮುದ್ದೆ, ಬಸ್ಸಾರು ಉಣ್ಣುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಹೀಗಾಗಿ ತುಪ್ಪ ಬೆರೆಸಿ ಮಾಡಿದ್ದ ರಾಗಿ ಮುದ್ದೆ, ಅದಕ್ಕೆ ಸಾಥ್ ನೀಡಿದ ಬಸ್ಸಾರಿನ ಘಮ ಅಲ್ಲಿ ಬಸ್‌, ವಾಹನಗಳಲ್ಲಿ ಓಡಾಡುವವರು, ಪಾದಚಾರಿಗಳ ಮೂಗು ಅರಳಿಸಿತ್ತು. ಎಲ್ಲರ ಕುತೂಹಲ ಹೆಚ್ಚಿಸಿತು.

ಎರಡು ನಿಮಿಷಕ್ಕೆ ವಿಸ್ತರಣೆ: ಸೇಬು ತಿನ್ನಲು ಶಿಕ್ಷಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಸೇಬು ಹಣ್ಣು ಗಟ್ಟಿ ಇದ್ದ ಕಾರಣ ನಿಮಿಷಾರ್ಧದಲ್ಲಿ ತಿನ್ನಲು ಆಗುವುದಿಲ್ಲ ಎಂದು ಅಳಲು ಮುಂದಿಟ್ಟ ಇಟ್ಟ ಕಾರಣ ಸ್ಪರ್ಧೆ ಅವಧಿ ಸಂಘಟಕರು ಎರಡು ನಿಮಿಷಕ್ಕೆ ಹೆಚ್ಚಿಸಿದ್ದರು.

ಸ್ಪರ್ಧೆಯಲ್ಲಿ ತಾಲ್ಲೂಕಿನ ಗೋವಿಂದಪುರ ಶಾಲೆಯ ಶಿಕ್ಷಕಿ ಡಿ.ಅರ್.ರತ್ನಮ್ಮ ಎರಡೂ ಕಾಲು ಸೇಬು ತಿಂದು ಮೊದಲ ಸ್ಥಾನದ ಶ್ರೇಯ ತಮ್ಮದಾಗಿಸಿಕೊಂಡರು. ಬಹುಮಾನದ ರೂಪದಲ್ಲಿ ಮಿಕ್ಸಿ ಮನೆಗೆ ಒಯ್ದರು. ನವುಲೆಯ ದೀಪಾ ಮಾಳಗಿ ಎರಡನೇ ಸ್ಥಾನ ಪಡೆದು ಕುಕ್ಕರ್ ಗೆದ್ದರೆ, ಸೀಗೆಹಟ್ಟಿ ಶಾಲೆಯ ಸುರೇಖಾ ಹಾಗೂ ಆಜಾದ್ ಬಾಲಿಕಾ ಪ್ರೌಢಶಾಲೆ ಸಲ್ಮಾ ಯಾಸ್ಮೀನ್ ಮೂರನೇ ಸ್ಥಾನ ಹಂಚಿಕೊಂಡು ಐರನ್ ಬಾಕ್ಸ್ ಪಡೆದರು.

ಮುದ್ದೆ ಬಸ್ಸಾರ್ ಊಟ: ಮುದ್ದೆ ಹಾಗೂ ಬಸ್ಸಾರು ಊಟ ಸ್ಪರ್ಧೆಯ ಆಕರ್ಷಣೆಯಾಗಿತ್ತು. ಅಡಿಕೆ ಹಾಳೆಯ ತಟ್ಟೆಯಲ್ಲಿ ಬಿಸಿ ಬಿಸಿ ಮುದ್ದೆ, ಸಾರು ಬಡಿಸುತ್ತಿದ್ದಂತೆಯೇ ಸ್ಪರ್ಧಿಗಳು ಊಟಕ್ಕೆ ತಯಾರಿ ನಡೆಸಿದರು. ಸಂಘಟಕರು ಸೂಚನೆ ಕೊಡುತ್ತಿದ್ದಂತೆಯೇ ಮುದ್ದೆ ಗುಳುಂ ಮಾಡುವ ಕಾರ್ಯ ಬಿರುಸು ಪಡೆಯಿತು. ಸುತ್ತಲೂ ನೆರೆದಿದ್ದ ಸಾರ್ವಜನಿಕರು ಮುದ್ದೆ ತಿನ್ನುವವರನ್ನು ಚಪ್ಪಾಳೆ ತಟ್ಟಿ ಉತ್ತೇಜಿಸಿದರು. ನೀರಿಳಿಯದ ಗಂಟಲಿಗೆ ಕಡುಬು ತುರುಕಿದಂತೆ ಎಂಬಂತೆ ಕೆಲವರು ಗಬ ಗಬನೆ ತಿನ್ನುವ ಭರದಲ್ಲಿ ಗಂಟಲ ಹಾದಿಯಲ್ಲಿ ಮುದ್ದೆ ನುಂಗುವುದು ಕಷ್ಟವಾಗಿ ಕಣ್ಣಲ್ಲಿ ನೀರು ತರಿಸಿಕೊಂಡರು. ಮೊದಲಿಗೆ ತಲಾ ಎರಡು ಮುದ್ದೆಗಳನ್ನು ಬಡಿಸಲಾಗಿತ್ತು. ತಟ್ಟೆ ಖಾಲಿಯಾಗುತ್ತಿದ್ದಂತೆಯೇ ಮತ್ತೆ ಬಡಿಸಲಾಯಿತು. ನಿಮಿಷದ ಸಮಯದ ಮುಳ್ಳಿನೊಂದಿಗೆ ಸ್ಪರ್ಧೆಗೆ ಬಿದ್ದವರಿಗೆ ಮುದ್ದೆಗಳು ಖಾಲಿಯಾಗಿದ್ದೇ ಗೊತ್ತಾಗಲಿಲ್ಲ.

ಮಹಿಳೆಯರ ವಿಭಾಗದಲ್ಲಿ ಅಣ್ಣಾ ನಗರ ಐದನೇ ಕ್ರಾಸ್‌ನ ನಿವಾಸಿ ಶಿವಮ್ಮ ಮೂರು ಮುದ್ದೆ ಊಟ ಮಾಡಿ ಮೊದಲ ಬಹುಮಾನ ಮಿಕ್ಸಿ ಗೆದ್ದರು. ಎರಡನೇ ಬಹುಮಾನ ಪಡೆದ ಧನಲಕ್ಷ್ಮಿ ಮೂರನೇ ಮುದ್ದೆಯಲ್ಲಿ ಎರಡು ತುತ್ತಿನಷ್ಟು ತಟ್ಟೆಯಲ್ಲಿ ಉಳಿಸಿದ್ದರು. ಮೂರನೇ ಬಹುಮಾನ ಪಡೆದ ಮಂಜಮ್ಮ ಎರಡೂ ಮುಕ್ಕಾಲು ಮುದ್ದೆ ಊಟ ಮಾಡಿದರು.

ಪುರುಷರ ವಿಭಾಗದಲ್ಲಿ
ಮೊದಲ ಸ್ಥಾನ ಪಡೆದ ಮಹಾನಗರ ಪಾಲಿಕೆ ಮೇಸ್ತ್ರಿ ರವಿಕಿರಣ್, 60 ಸೆಕೆಂಡ್‌ಗಳಲ್ಲಿ ಬರೋಬ್ಬರಿ ನಾಲ್ಕು ಮುದ್ದೆ ಗುಳುಂ ಮಾಡಿದರು. ಅನೂಪ್ ಮೂರನೇ ಸ್ಥಾನ ಪಡೆದರು.

ನಂಜಪ್ಪ ಆಸ್ಪತ್ರೆಯ ವೈದ್ಯ ಡಾ.ನರೇಂದ ನಿಶಾನಿಮಠ, ಡಾ.ಪ್ರಶಾಂತ್ ಹಾಗೂ ಆಹಾರ ಸುರಕ್ಷತಾ ಅಧಿಕಾರಿ ಸೋಮೇಶ್ವರ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಪಾಲಿಕೆ ಸದಸ್ಯ ಎಚ್.ಸಿ.ಯೋಗೀಶ್ ಸ್ಪರ್ಧೆ ಸಂಘಟನೆ ನೇತೃತ್ವ ವಹಿಸಿದ್ದರು. ಮೇಯರ್
ಸುನಿತಾ ಅಣ್ಣಪ್ಪ, ಆಹಾರ ದಸರಾ ಸಮಿತಿ ಅಧ್ಯಕ್ಷೆ ಆಶಾ ಚಂದ್ರಪ್ಪ ಪಾಲ್ಗೊಂಡಿದ್ದರು.

***

59 ವರ್ಷದ ಮಂಜಣ್ಣನ ಸಾಹಸ

ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಮೂರು ಮಕ್ಕಾಲು ಮುದ್ದೆ ಊಟ ಮಾಡಿ ಗಮನ ಸೆಳೆದ ಡಿ.ಮಂಜುನಾಥ ಅವರಿಗೆ ಈಗ 59 ವರ್ಷ. ಇಳಿ ವಯಸ್ಸಿನಲ್ಲೂ ಅವರು ಮುದ್ದೆ ತಿನ್ನುವ ಪರಿ ಕಂಡು ಸ್ಥಳದಲ್ಲಿದ್ದವರು ಮೂಗಿನ ಮೇಲೆ ಬೆರಳಿಟ್ಟರು.

ಮಂಜಣ್ಣನ ಸಾಹಸಕ್ಕೆ ಚಪ್ಪಾಳೆಯ ಸುರಿಮಳೆ ಸುರಿಯಿತು. ಇನ್ನು ಯೌವ್ವನದಲ್ಲಿ ಎಷ್ಟು ಮುದ್ದೆ ಊಟ ಮಾಡುತ್ತಿದ್ದಿರಿ ಎಂಬ ಪ್ರಶ್ನೆ ಬಹಳಷ್ಟು ಮಂದಿ ಆ ಹಿರಿಯನನ್ನು ಕೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು