ಮಂಗಳವಾರ, ಅಕ್ಟೋಬರ್ 26, 2021
20 °C
ಆಲಂಕೃತ ಎತ್ತಿನ ಗಾಡಿಗಳು, ಟಿಲ್ಲರ್, ಕಲಾತಂಡಗಳೊಂದಿಗೆ ಮೆರವಣಿಗೆ

ರೈತ ದಸರಾ; ಎಲ್ಲೆಡೆ ಕಂಗೊಳಿಸಿದ ಹಸಿರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ದಸರಾ ಪ್ರಯುಕ್ತ ನಗರದಲ್ಲಿ ಸೋಮವಾರ ಆಯೋಜಿಸಿದ್ದ ರೈತ ದಸರಾ ಗಮನ ಸೆಳೆಯಿತು.

ನಗರದ ಖಾಸಗಿ ಬಸ್‌ ನಿಲ್ದಾಣದಿಂದ ಕುವೆಂಪು ರಂಗಮಂದಿರದವರೆಗೆ ಅಲಂಕೃತ ಎತ್ತಿನ ಗಾಡಿಗಳು, ಟಿಲ್ಲರ್, ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಹಸಿರು ಮೇಳೈಸಿತ್ತು. ಸುತ್ತಮುತ್ತಲಿನ ರೈತರು ಭಾಗಿಯಾಗಿ ಸಂಭ್ರಮಿಸಿದರು.

ರೈತ ನಾಯಕರಾದ ಕೆ.ಟಿ. ಗಂಗಾಧರ್, ಎಚ್.ಆರ್. ಬಸವರಾಜಪ್ಪ, ಮೇಯರ್ ಸುನಿತಾ ಅಣ್ಣಪ್ಪ ಸೇರಿ ಪಾಲಿಕೆ ಸದಸ್ಯರು ಎತ್ತಿನ ಗಾಡಿಯಲ್ಲಿ ಬಂದಿದ್ದು ವಿಶೇಷವಾಗಿತ್ತು.

ರೈತ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವ ಸಂಶೋಧಕ ತೀರ್ಥಹಳ್ಳಿಯ ಕುಂಟುವಳ್ಳಿ ವಿಶ್ವನಾಥ್, ‘ರೈತರು ದಲ್ಲಾಳಿಗಳ ಮೇಲೆ ಅವಲಂಬಿತ ಆಗಿರಬಾರದು. 2007ರಿಂದ ಕೃಷಿ ಕ್ಷೇತ್ರಕ್ಕೆ, ಅದರಲ್ಲೂ ಅಡಿಕೆ ಬೆಳೆಗಾರರಿಗೆ ಏನಾದರೂ ಸಹಾಯ ಮಾಡಬೇಕೆಂಬ ಕಲ್ಪನೆ ಇರಿಸಿಕೊಂಡು ಸಂಶೋಧನೆ ಮಾಡುತ್ತಾ ಬಂದಿದ್ದೇನೆ. ಪರಿಶ್ರಮದ ಫಲವಾಗಿ ಅಡಿಕೆ ಸುಲಿಯುವ ಯಂತ್ರ ಸಂಶೋಧನೆ ಮಾಡಲು ಸಾಧ್ಯವಾಯಿತು. ಡಿಪ್ಲೊಮಾ ಶಿಕ್ಷಣ ಮುಗಿಸಿದ ತಕ್ಷಣ ಹತ್ತಾರು ಕಂಪನಿಗಳು ಉದ್ಯೋಗ ನೀಡುವ ಬಗ್ಗೆ ಆಹ್ವಾನ ನೀಡಿದ್ದವು. ಆದರೂ, ಸಂಶೋಧನೆ ಮಾಡಬೇಕೆಂಬ ಆಲೋಚನೆಯಿಂದ ಹೋಗಲಿಲ್ಲ’ ಎಂದು ತಿಳಿಸಿದರು.

ರೈತ ಮುಖಂಡ ಕೆ.ಟಿ. ಗಂಗಾಧರ ಮಾತನಾಡಿ, ‘ದೇಶದಲ್ಲಿ ಸಾಕಷ್ಟು ವಿಶ್ವವಿದ್ಯಾಲಯಗಳು, ಸಾವಿರಾರು ಮಂದಿ ವಿಜ್ಞಾನಿಗಳು ಇದ್ದಾರೆ. ಸಂಶೋಧನೆಗೆಂದೇ ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತಿದೆ. ಆದರೆ, ಎಲ್ಲಾ ಸೌಲಭ್ಯ ಇದ್ದರೂ ಅವರಿಂದ ಸಾಧ್ಯವಾಗದ ಸಾಧನೆಯನ್ನು ಕುಂಟುವಳ್ಳಿ ವಿಶ್ವನಾಥ್ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.

ರೈತ ದಸರಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ಎಸ್‌.ಎನ್‌.ಚನ್ನಬಸಪ್ಪ, ಸುರೇಖಾ ಮುರುಳೀಧರ, ಸುವರ್ಣಾ ಶಂಕರ್, ನಾಗರಾಜ ಕಂಕಾರಿ,  ವಿಶ್ವನಾಥ, ಎಚ್.ಸಿ. ಯೋಗೀಶ್ ಇದ್ದರು.

‘ಮ್ಯೂಸಿಯಂನಲ್ಲಿ ಎತ್ತಿನಗಾಡಿ, ನೇಗಿಲು ನೋಡಬೇಕಾಗುತ್ತದೆ’

ಹಿಂದೆ ರೈತರು ಯಾರಮೇಲೂ ಅವಲಂಬಿತ ಆಗಿರಲಿಲ್ಲ. ಯಂತ್ರಗಳೂ ಇರಲಿಲ್ಲ. ಸಾಲ ಮಾಡಿಕೊಂಡಿರಲಿಲ್ಲ. ಕೊಟ್ಟಿಗೆ ಗೊಬ್ಬರ ಇತ್ತು. ಮನೆಯಲ್ಲೇ ಎಲ್ಲಾ ಧಾನ್ಯಗಳ ಬೀಜ ಸಂಗ್ರಹ ಇತ್ತು. ಈಗ ಅದೆಲ್ಲವೂ ಮರೆಯಾಗಿದೆ. ಎತ್ತಿನ ಗಾಡಿ, ನೇಗಿಲು, ಕುಂಟೆ ಯಾವುದೂ ಕಾಣುತ್ತಿಲ್ಲ. ಮುಂದೊಂದು ದಿನ ಇವನ್ನೆಲ್ಲಾ ಮಕ್ಕಳಿಗೆ ಮ್ಯೂಸಿಯಂನಲ್ಲಿ ತೋರಿಸಬೇಕಾದ ಸ್ಥಿತಿ ಬರಲಿದೆ. ಹಾಲು ಕೂಡ ಡೇರಿಯಿಂದ ಬರುತ್ತದೆ ಎಂದು ಎಷ್ಟೋ ಮಕ್ಕಳು ಭಾವಿಸಿದ್ದಾರೆ. ಹಾಗಾಗಿ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಂದಿನ ಪೀಳಿಗೆಗೆ ನೀಡಬೇಕಿದೆ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.