ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆ ಹಾಸಿಗೆಗಳಿಗೂ ಸರ್ಕಾರಿ ಕೋಟಾ

ಸರ್ಕಾರ ನಿಗದಿಪಡಿಸಿದ ಶುಲ್ಕಗಳನ್ನೇ ಪಡೆಯಲು ಜಿಲ್ಲಾಧಿಕಾರಿ ಶಿವಕುಮಾರ್ ತಾಕೀತು
Last Updated 19 ಏಪ್ರಿಲ್ 2021, 11:58 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಶೇ 50ರಷ್ಟು ಹಾಸಿಗೆಗಳನ್ನು ಸರ್ಕಾರಿ ಕೋಟಾದ ಅಡಿ ಮೀಸಲಿಡಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ನಗರದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್ ಎರಡನೇ ಅಲೆ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡುತ್ತಿದೆ. ಕೋವಿಡ್ ರೋಗಿಗಳ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದೆ. ಹಾಗಾಗಿ, ಸರ್ಕಾರಿ ಆಸ್ಪತ್ರೆಗಳ ಜತೆ ಖಾಸಗಿ ಆಸ್ಪತ್ರೆಗಳ ಸೌಲಭ್ಯ ಬಳಸಿಕೊಳ್ಳಲು ಸರ್ಕಾರ ಆದೇಶಿಸಿದೆ. ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಆಸ್ಪತ್ರೆಗಳು ಸಹಕಾರ ನೀಡಬೇಕು. ಹಾಸಿಗೆ, ಆಮ್ಲಜನಕ ಪೂರೈಕೆ ಸೌಲಭ್ಯ, ಐಸಿಯು, ವೆಂಟಿಲೇಟರ್ ಸೌಲಭ್ಯ ಇರುವ ಹಾಸಿಗಳನ್ನು ನೀಡಬೇಕು. ಮೀಸಲಿಟ್ಟ ಹಾಸಿಗೆಳನ್ನು ತುರ್ತು ಸಮಯದಲ್ಲಿ ಬಳಕೆ ಮಾಡಲು ಜಿಲ್ಲಾಡಳಿತದ ಅನುಮತಿ ಪಡೆಯಬೇಕು. ಆದೇಶ ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಮೊದಲೇ ನಿಗದಿಪಡಿಸಿದೆ. ಹಿಂದೆ ನಿಗದಿಪಡಿಸಿದ ಶುಲ್ಕಗಳನ್ನೇ ಪಡೆಯಬೇಕು. ಹೆಚ್ಚುವರಿ ಶುಲ್ಕ ವಿಧಿಸುವ ಕುರಿತು ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಲ್ಲೂಕು ಅಧಿಕಾರಿಗಳ ಜತೆ ವೀಡಿಯೊ ಸಂವಾದ: ಇದೇ ಸಮಯದಲ್ಲಿ ಜಿಲ್ಲಾಧಿಕಾರಿ ಅವರು ಎಲ್ಲಾ ತಾಲೂಕು ಅಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿದರು. ಕೋವಿಡ್ ನಿರ್ವಹಣೆ ಕುರಿತು ಸೂಚನೆಗಳನ್ನು ನೀಡಿದರು.

ಪ್ರಸ್ತುತ ಗಾಜನೂರಿನಲ್ಲಿ ಕೋವಿಡ್ ಕೇರ್‌ ಸೆಂಟರ್ ಸಜ್ಜುಗೊಳಿಸಲಾಗಿದೆ. ಎಲ್ಲಾ ತಾಲೂಕುಗಳಲ್ಲೂ ಕೇರ್ ಸೆಂಟರ್ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಮನೆ ಆರೈಕೆಯಲ್ಲಿ ಇರುವ ಕೋವಿಡ್ ರೋಗಿಗಳ ಮಾಹಿತಿ ಪ್ರತಿದಿನ ಪಡೆಯಬೇಕು. ಅದಕ್ಕಾಗಿ ತಾಲ್ಲೂಕುಮಟ್ಟದಲ್ಲಿ ತಂಡಗಳನ್ನು ರಚಿಸಬೇಕು. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ತಾಲ್ಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ಆರಂಭಿಸಬೇಕು. ಪ್ರತಿ ತಾಲೂಕಿನಲ್ಲಿ ಕನಿಷ್ಠ 50 ಆಮ್ಲಜನಕ ಹಾಸಿಗೆಗಳ ಸೌಲಭ್ಯ ದೊರಕಿಸಬೇಕು. ಲಸಿಕೆ ಲಭ್ಯತೆ ಕುರಿತು ಪ್ರತಿ ದಿನ ಮಾಹಿತಿ ನೀಡಬೇಕು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಮುಂಜಾಗರೂಕತಾ ಕ್ರಮಗಳ ಮೇಲುಸ್ತುವಾರಿಗೆ ಪೊಲೀಸ್ ಇಲಾಖೆ ನೇತೃತ್ವದಲ್ಲಿ ನೋಡಲ್ ಅಧಿಕಾರಿ ನೇಮಕ ಮಾಡಲಾಗುವುದು. ಆಂಬುಲೆನ್ಸ್‌ಗಳ ನಿರ್ವಹಣೆಗೆ ನೋಡಲ್ ಅಧಿಕಾರಿ ನೇಮಕ ಮಾಡಬೇಕು ಎಂದರು.

ರೂಪಾಂತರಿ ಕೊರೊನಾ ವೈರಸ್‌ ಅತ್ಯಂತ ವೇಗವಾಗಿ ಹರಡುತ್ತಿದೆ. ಪ್ರಾಥಮಿಕ ಸೋಂಕಿತರಲ್ಲಿ ಶೇ 30ರಷ್ಟು ಮಂದಿಗೆ ಪಾಸಿಟಿವ್ ಕಂಡು ಬರುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಸಿಇಒ ಎಂ.ಎಲ್‌.ವೈಶಾಲಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಚ್‌.ಟಿ.ಶೇಖರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾದಾ, ಶಿವಮೊಗ್ಗ ವಯದ್ಯಕೀಯ ಕಾಲೇಜು ನಿರ್ದೇಶಕ ಡಾ.ಸಿದ್ದಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT