ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ‘ಪತ್ರಿಕೋದ್ಯಮದ ಘನತೆ ಕುಸಿತ ಕಳವಳಕಾರಿ’

ನಾಗೇಶ ಹೆಗಡೆ ಅವರಿಗೆ ‘ಮಿಂಚು ಶ್ರೀನಿವಾಸ’ ಪತ್ರಿಕಾ ಪ್ರಶಸ್ತಿ ಪ್ರದಾನ
Last Updated 13 ಫೆಬ್ರುವರಿ 2023, 6:09 IST
ಅಕ್ಷರ ಗಾತ್ರ

ಶಿವಮೊಗ್ಗ: ಜಾಗತಿಕ ಸೂಚ್ಯಂಕದಲ್ಲಿ ಭಾರತದ ಪತ್ರಿಕೋದ್ಯಮ 2009ರಲ್ಲಿ 106ನೇ ಸ್ಥಾನದಲ್ಲಿತ್ತು. ಎರಡು ವರ್ಷಗಳ ಹಿಂದೆ 132ನೇ ಸ್ಥಾನ ಹೊಂದಿತ್ತು. ಈಗ 150ನೇ ಸ್ಥಾನಕ್ಕೆ ಕುಸಿದಿದೆ. ಇದು ಕಳವಳಕಾರಿ ಸಂಗತಿ ಎಂದು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಅವರು ಹೇಳಿದರು.

ನಗರದಲ್ಲಿ ಭಾನುವಾರ ಧಾರವಾಡದ 'ಸಾಕಾರ' ಸಾಂಸ್ಕೃತಿಕ ಮತ್ತು ಮಾಧ್ಯಮ ಪ್ರತಿಷ್ಠಾನದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ‘ಮಿಂಚು ಶ್ರೀನಿವಾಸ‘ ಪತ್ರಿಕಾ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಪತ್ರಿಕೋದ್ಯಮ ಈಗ ನ್ಯಾಯದ ಹಾದಿಯಲ್ಲಿ ಸಾಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಅವರು, ಜಾಗತಿಕ ಸೂಚ್ಯಂಕದಲ್ಲಿ 151ರಲ್ಲಿ ಪಾಕಿಸ್ತಾನ, 152ರ ಸ್ಥಾನದಲ್ಲಿ ಬಾಂಗ್ಲಾದೇಶ ಹೊಂದಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಪತ್ರಿಕೋದ್ಯಮ ಮುಂದಿನ ದಿನಗಳಲ್ಲಿ ಸೂಚ್ಯಂಕ ಪಟ್ಟಿಯಲ್ಲಿ ಇನ್ನೂ ಕೆಳಗೆ ಕುಸಿಯುವುದರಲ್ಲಿ ಅನುಮಾನ ಇಲ್ಲ ಎಂದರು.

ಇಡೀ ಪತ್ರಿಕೋದ್ಯಮ ರಂಗ ಕಾರ್ಪೋರೇಟ್ ಕಂಪನಿಗಳ ಕೈ ಗೊಂಬೆಯಾಗಿ ನಡೆದು ಕೊಳ್ಳುತ್ತಿದೆ. ಕೆಲ ಪತ್ರಕರ್ತರು ಜೈಲು ಸೇರುತ್ತಿದ್ದಾರೆ. ಉಳಿದ ಪತ್ರಕರ್ತರ ಬಾಯಿಗೆ ಬೀಗ ಹಾಕಲಾಗುತ್ತಿದೆ. ಇಲ್ಲವೇ ವೃತ್ತಿಯಿಂದ ವಜಾ ಮಾಡಲಾಗುತ್ತಿದೆ ಎಂದರು.

ಮಾಜಿ ಶಾಸಕ ವೈ.ಎಸ್.ವಿ ದತ್ತಾ ಮಾತನಾಡಿ, ಹಿಂದೆ ಕಿಡಿ ಶೇಷಪ್ಪ ಅವರು ತಮ್ಮ ‘ಕಿಡಿ‘ ಪತ್ರಿಕೆಯಲ್ಲಿ ವಿಧಾನ ಸೌಧ ನಿರ್ಮಾಣ ಕಾಮಗಾರಿಯಲ್ಲಿ ಭ್ರಷ್ಟಾಚಾರದ ವಾಸನೆ ಇದೆ ಎಂದು ಲೇಖನ ಬರೆದಿದ್ದರು. ಅದನ್ನು ಗಮನಿಸಿದ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು, ಛೇ.. ನಾನು ಆ ರೀತಿ ಇಲ್ಲ. ಯಾಕೆ ಈ ರೀತಿ ಬರೆದರು ಎಂದು ಗಾಬರಿಯಿಂದ ಕಿಡಿ ಶೇಷಪ್ಪ ಅವರ ಮನೆಗೆ ತೆರಳಿ, ಅವರಿಗೆ ಮನವರಿಕೆ ಮಾಡಿದ್ದರು ಎಂದರು.

ಆದರೆ ಈಗ ಆ ರೀತಿಯ ಪತ್ರಿಕೋದ್ಯಮ ಇಲ್ಲ. ರಾಜಕೀಯದ ಜೊತೆ ಸೇರಿ ಪತ್ರಿಕೋದ್ಯಮ ಕೂಡ ಹೊಲಸೆದ್ದು ಹೋಗಿದೆ ಎಂದ ಅವರು, ಪತ್ರಿಕೋದ್ಯಮ ಜಾಹೀರಾತು ನೀಡಿದವರಿಗೆ ಹೆಚ್ಚಿನ ಮಣೆ ಹಾಕುತ್ತಿದೆ. ಇದರಿಂದ ರಾಜಕೀಯಕ್ಕೂ ಕೂಡ ಭಯವಿಲ್ಲದೆ ಸುಗ್ಗಿ ಶಿವರಾತ್ರಿ ಆದಂತೆ ಆಗಿದೆ ಎಂದರು‌.

ಹಿರಿಯ ಸಾಹಿತಿ ನಾ.ಡಿಸೋಜ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ದಿ. ದತ್ತಾತ್ರೇಯ ಕುಲಕರ್ಣಿ ಅವರ ನೆನಪಿನಲ್ಲಿ ಕುವೆಂಪು ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಎನ್.ಆರ್. ಉಮೇಶ್ ಅವರಿಗೆ ಶಿಕ್ಷಣ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾಜವಾದಿ ಕೋಣಂದೂರು ಲಿಂಗಪ್ಪ, ಮಾಧ್ಯಮ ಪ್ರತಿಷ್ಠಾನದ ಕಾರ್ಯದರ್ಶಿ
ಡಾ. ಶುಭದಾ ಸಿ, ಪತ್ರಕರ್ತರಾದ ವೈದ್ಯ ನಾಥ, ಮಂಜುನಾಥ್ ಎನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT