ಶನಿವಾರ, ಜುಲೈ 31, 2021
27 °C

ಭದ್ರಾವತಿ ಎಂಪಿಎಂ ಪುನರಾರಂಭಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಎಂಪಿಎಂ ಆರಂಭಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಭದ್ರಾವತಿಯ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ಆಗ್ರಹಿಸಿದರು.

ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ ರಾಜ್ಯದಲ್ಲಿಯೇ ಪ್ರತಿಷ್ಠಿತ ಕಾರ್ಖಾನೆ. ಸಾವಿರಾರು ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳಿಂದ ಸ್ಥಗಿತವಾಗಿರುವ ಪರಿಣಾಮ ಹಲವು ಕಾರ್ಮಿಕ ಕುಟುಂಬಗಳು ಬೀದಿಪಾಲಾಗಿವೆ. ಬ್ಯಾಕ್ ಲಾಗ್‌ನಲ್ಲಿ ಆಯ್ಕೆಯಾದ 112 ಕಾರ್ಮಿಕರಿಗೆ ವಿಆರ್‌ಎಸ್‌ ಪಡೆಯಲು ಸೇವಾ ಅವಧಿ ಬಾಕಿ ಇದೆ. ಸಂಬಳವೂ ಕಡಿಮೆ ಇದೆ. ಇದುವರೆಗೂ ಅವರಿಗೆ ಯಾವುದೇ ಬಡ್ತಿ ನೀಡಿಲ್ಲ. ಅವರಿಗೆ ಬಡ್ತಿ ನೀಡಿ ಸೇವಾ ಭದ್ರತೆ ಒದಗಿಸಬೇಕು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಈ ಹಿಂದಿನ ಹೋರಾಟಗಳ ಫಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಖಾನೆಯ ಅಭಿವೃದ್ಧಿಗೆ ₨ 420 ಕೋಟಿ ಅನುದಾನ ನೀಡಿದ್ದರು. ಆ ಹಣವನ್ನೂ ವಿಆರ್‌ಎಸ್‌ಗೆ ಸೀಮಿತ ಮಾಡಲಾಗಿದೆ. ಕಾರ್ಖಾನೆಯ ಅಭಿವೃದ್ಧಿಯೂ ಆಗಿಲ್ಲ. ಅಂದು ವಿರೋಧ ಪಕ್ಷದ ನಾಯಕರಾಗಿದ್ದ  ಬಿ.ಎಸ್.ಯಡಿಯೂರಪ್ಪ ಅವರು ಕಾರ್ಖಾನೆಯ ಉಳಿವಿಕೆ ಆಗ್ರಹಿಸಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಆದರೂ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ಆರೋಪಿಸಿದರು.

ಕಾರ್ಖಾನೆಯ ಅಧೀನದಲ್ಲಿರುವ ಅರಣ್ಯ ಭೂಮಿ, ಕಚ್ಚಾವಸ್ತು, ನೀರು, ಕಾರ್ಮಿಕರನ್ನು ಬಳಸಿಕೊಂಡು ಅಭಿವೃದ್ಧಿಪಡಿಸಬೇಕು.  ಕಾರ್ಮಿಕರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.

ಎಂಪಿಎಂ ಬ್ಯಾಕ್ ಲಾಗ್ ಉದ್ಯೋಗಿಗಳ ಹೋರಾಟ ಸಮಿತಿ ಅಧ್ಯಕ್ಷ ವಿ.ಎನ್.ದೊಡ್ಡಯ್ಯ ಮಾತನಾಡಿ, 2008ರಲ್ಲಿ ನೇಮಕಗೊಂಡ ಬ್ಯಾಕ್‌ಲಾಗ್ ಉದ್ಯೋಗಿಗಳಿಗೆ ವೇತನ ಪರಿಷ್ಕರಿಸಬೇಕು. ಅವರನ್ನು ವಿವಿಧ ನಿಗಮ ಮಂಡಳಿಗಳಿಗೆ ನಿಯೋಜಿಸಬೇಕು. ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಎಂ.ವಿ.ಚಂದ್ರಶೇಖರ್, ಎಂಪಿಎಂ ಬ್ಯಾಕ್‌ಲಾಗ್ ಉದ್ಯೋಗಿಗಳ ಹೋರಾಟ ಸಮಿತಿ ಮುಖಂಡ ಅರ್ಜುನ್‌, ರಾಥೋಡ್, ಆರ್.ನಾಗರಾಜ್, ಶಿವರಾಜ್, ಲತಾ, ಮಂಜುಳಾ, ತಿಪ್ಪೇಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.