ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗರ್‌ಹುಕುಂ ಹಕ್ಕುಪತ್ರ ವಿತರಿಸಿ: ಬಂಗಾರಪ್ಪ ಸೂಚನೆ

ಅಧಿಕಾರಿಗಳಿಗೆ ಶಾಸಕ ಕುಮಾರ್ ಬಂಗಾರಪ್ಪ ಸೂಚನೆ
Last Updated 29 ಜನವರಿ 2023, 5:33 IST
ಅಕ್ಷರ ಗಾತ್ರ

ಸೊರಬ: ರೈತರಿಗೆ ತ್ವರಿತವಾಗಿ ಬಗರ್‌ಹುಕುಂ ಹಕ್ಕಪತ್ರ ವಿತರಣೆ ಮಾಡಬೇಕಾಗಿದ್ದು, ವಿಲೇವಾರಿ ಮಾಡದಿರುವ ಅರ್ಜಿಗಳನ್ನು ಕೂಡಲೇ ಪರಿಶೀಲಿಸಬೇಕು ಎಂದು ಶಾಸಕ ಕುಮಾರ್‌ ಬಂಗಾರಪ್ಪ ಅವರು ಸಾಗರದ ಪ್ರಭಾರ ತಹಶೀಲ್ದಾರ್ ಮಲ್ಲೇಶಪ್ಪ ಪೂಜಾರ ಅವರಿಗೆ
ಸೂಚಿಸಿದರು.

ತಾಲ್ಲೂಕು ಕಚೇರಿಯಲ್ಲಿ ಶನಿವಾರ ನಡೆದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ರೈತರಿಗೆ ಭೂಮಿ ಹಕ್ಕು ಕೊಡಿಸುವುದು ನಮ್ಮ ಮೊದಲ ಆದ್ಯತೆ. ಈ ಸಂಬಂಧ ಬಗರ್‌ಹುಕುಂ ಸಮಿತಿ ಸಭೆಯಲ್ಲಿ ಭೂ ಮಂಜೂರಾತಿಗೆ ಸಲ್ಲಿಸಿದ ಅರ್ಹ ರೈತರ ಅರ್ಜಿಗಳನ್ನು ಗುರುತಿಸಲಾಗಿದೆ. ಅಧಿಕಾರಿಗಳು ಮಂಜೂರಾತಿಗೆ ಒಪ್ಪಿಗೆ ಸೂಚಿಸಿ ಹಕ್ಕುಪತ್ರ ನೀಡಲು ಮುಂದಾಗಬೇಕು’ ಎಂದು ತಿಳಿಸಿದರು.

ಅಂಚೆ ಕಚೇರಿಗೆ ಹೊಂದಿಕೊಂಡಿರುವ ಪುರಸಭೆಗೆ ಸೇರಿದ ಜಾಗದಲ್ಲಿ ಈಗಾಗಲೇ ಖಾಸಗಿ ವ್ಯಕ್ತಿಯೊಬ್ಬರು ಮಳಿಗೆ ನಿರ್ಮಾಣ ಮಾಡಿ ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ. ಸಣ್ಣಪುಟ್ಟ ಕಾನೂನು ತೊಡಕಿದ್ದರೆ ಸರಿಪಡಿಸಿ ತೆರವುಗೊಳಿಸಲು‌ ಮುಂದಾಗಬೇಕು. ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಇನಾಂ ಜಮೀನಿನಲ್ಲಿ ರೈತರು ಉಳುಮೆ ಮಾಡುತ್ತಿದ್ದು, ಇದನ್ನು ಇತ್ಯರ್ಥಪಡಿಸಬೇಕು ಎಂದು ತಿಳಿಸಿದರು.

ಚಂದ್ರಗುತ್ತಿ ಕ್ಷೇತ್ರಕ್ಕೆ ಬರುವ ಭಕ್ತರು ಹರಕೆ ರೂಪದಲ್ಲಿ ಜೋಳದಗುಡ್ಡೆ ಬಳಿಯಿರುವ ಬಲಿಪೀಠದಲ್ಲಿ ಹೋಮ ಹವನ ನಡೆಸಿ ಕುರಿ, ಕೋಳಿ ಬಲಿ ಕೊಡುತ್ತಿದ್ದು, ನದಿ ಹಾಗೂ ಸುತ್ತಮುತ್ತಲಿನ ಪ್ರದೇಶ ಮಲೀನಗೊಳ್ಳುತ್ತಿದೆ. ಬಲಿಪೀಠವನ್ನು ಬೇರೆಡೆಗೆ ಸ್ಥಳಾಂತರಿಸಲು ಜಾಗ ಗುರುತಿಸಬೇಕು ಎಂದು ಸೂಚಿಸಿದರು.

ಇದಕ್ಕೂ‌‌ ಮೊದಲು ತಹಶೀಲ್ದಾರ್ ವರ್ಗಾವಣೆಯನ್ನು ಪ್ರಸ್ತಾಪಿಸಿದ ಶಾಸಕ ಕುಮಾರ್ ಬಂಗಾರಪ್ಪ, ‘ವರ್ಗಾವಣೆ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಜಿಲ್ಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ನಡೆಸಿದ ಪ್ರತಿಭಟನೆಯಲ್ಲಿ ಇಲ್ಲಿನ ನೌಕರರು ಭಾಗವಹಿಸದಿರುವ ಮೂಲಕ ಅವರ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ’ ಎಂದರು.

ಪ್ರಭಾರ ಇಒ ನಾಗರಾಜ್ ಅಣ್ವೇಕರ್, ಚುನಾವಣಾ ಅಧಿಕಾರಿ ನಾಗರಾಜ್, ಶಿರಸ್ತೇದಾರ್ ವಿಜಯಕುಮಾರ್, ಭೂಮಾಪನ ಇಲಾಖೆಯ ರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT