ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರವರ್ಧಿತ ಅಕ್ಕಿ ವಿತರಣೆ ಆರಂಭ- ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಮಾಹಿತಿ

Last Updated 7 ಮೇ 2022, 3:14 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಅಂತ್ಯೋದಯ, ಆದ್ಯತಾ ಪಡಿತರ ಚೀಟಿಗಳಿಗೆ ಪ್ರಸಕ್ತ ತಿಂಗಳಿನಿಂದಲೇ ಸಾರವರ್ಧಿತ ಅಕ್ಕಿ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಹೇಳಿದರು.

ಕೇಂದ್ರ ಸರ್ಕಾರದ ಸಚಿವ ಸಂಪುಟ ಸರ್ಕಾರಿ ಕಾರ್ಯಕ್ರಮಗಳ ಅಡಿಯಲ್ಲಿ ಸಾರವರ್ಧಿತ ಅಕ್ಕಿ ವಿತರಿಸುವ ಯೋಜನೆಗೆ ಅನುಮೋದನೆ ನೀಡಿದೆ. ಭಾರತ ಆಹಾರ ನಿಗಮ ಮತ್ತು ರಾಜ್ಯ ಏಜೆನ್ಸಿಗಳು ಈಗಾಗಲೇ ಪೂರೈಕೆ ಮತ್ತು ವಿತರಣೆಗಾಗಿ ಸಾರವರ್ಧಿತ ಅಕ್ಕಿ ಸಂಗ್ರಹಿಸಿವೆ. ಈ ಯೋಜನೆ ಪ್ರಥಮ ಹಂತದಲ್ಲಿ 14 ಜಿಲ್ಲೆಗಳಲ್ಲಿ ಜಾರಿಗೆ ಬಂದಿದೆ. ನಂತರ ಉಳಿದ ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ. ಆಹಾರದ ಪೌಷ್ಟಿಕಾಂಶದ ಗುಣಮಟ್ಟ ಸುಧಾರಿಸಲು, ಆರೋಗ್ಯ ವರ್ಧನೆಗೆ ಆಹಾರದಲ್ಲಿ ಅಗತ್ಯ ಸೂಕ್ಷ್ಮ ಪೋಷಕಾಂಶಗಳನ್ನು ಹೆಚ್ಚಿಸುವುದು ಸಾರವರ್ಧಿತ ಅಕ್ಕಿ ವಿತರಣೆ ಉದ್ದೇಶ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಾಮಾನ್ಯ ಅಕ್ಕಿಗೆ ಪೋಷಕಾಂಶಗಳನ್ನು ಸೇರಿಸಲು ವಿವಿಧ ತಂತ್ರಜ್ಞಾನಗಳು ಲಭ್ಯವಿವೆ. ಉದಾಹರಣೆಗೆ ಲೇಪ, ದೂಳು ಹೊರ ತೆಗೆಯುವಿಕೆ, ಎಕ್ಸ್‌ಟ್ರೂಡರ್ ಯಂತ್ರ ಬಳಸಿಕೊಂಡು ಮಿಶ್ರಣದಿಂದ ಸಾರವರ್ಧಿತ ಅಕ್ಕಿ ಕಾಳುಗಳನ್ನು ಉತ್ಪಾದಿಸಲಾಗುವುದು. ಸಾಮಾನ್ಯ ಅಕ್ಕಿಯೊಂದಿಗೆ ಸಾರವರ್ಧಿತ ಅಕ್ಕಿ ಕಾಳುಗಳನ್ನು ಮಿಶ್ರಣ ಮಾಡಲಾಗುವುದು. ಒಂದು ಕ್ವಿಂಟಲ್ ಪಡಿತರ ಅಕ್ಕಿಗೆ ಒಂದು ಕೆಜಿ ಸಾರವರ್ಧಿತ ಅಕ್ಕಿ ಬೆರೆಸಲಾಗುವುದು ಎಂದು ವಿವರ ನೀಡಿದರು.

ಜಿಲ್ಲೆಯಲ್ಲಿ ಬಿಪಿಎಲ್, ಎಪಿಎಲ್, ಅಂತ್ಯೋದಯ ಸೇರಿ 4,91,049 ಪಡಿತರ ಚೀಟಿಗಳಿವೆ. 3,88,907 ಬಿಪಿಎಲ್ ಕುಟುಂಬಗಳಿಗೆ ಸಾರವರ್ಧಿತ ಅಕ್ಕಿ ವಿತರಿಸಲಾಗುವುದು. ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಮಧ್ಯಾಹ್ನದ ಊಟ ಸೇರಿ ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ವಿತರಿಸುವ ಅಕ್ಕಿಯನ್ನು 2024ರವರೆಗೆ ಬಲಪಡಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಂಜುನಾಥ್, ಎಫ್‌ಸಿಐ ಪ್ರಧಾನ ವ್ಯವಸ್ಥಾಪಕ ಭಗವಾನ್ ಸಿಂಗ್, ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT