ಸೋಮವಾರ, ಮೇ 23, 2022
28 °C
ಬೇಗೂರು ಮರಡಿ ತಾಂಡಾದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಡಿಕೆಶಿ

ಬಗರ್‌ಹುಕುಂ ಸಾಗುವಳಿದಾರರ ಒಕ್ಕಲೆಬ್ಬಿಸಲು ಬಿಡುವುದಿಲ್ಲ: ಡಿ.ಕೆ.ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇಗೂರು ಮರಡಿ ತಾಂಡಾ (ಶಿಕಾರಿಪುರ): ‘ಬಂಜಾರ ಸಮುದಾಯದ ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಕಾಂಗ್ರೆಸ್ ಬಿಡುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ತಾಲ್ಲೂಕಿನ ಬೇಗೂರು ಮರಡಿ ತಾಂಡಾದಲ್ಲಿ ಗುರುವಾರ ಬಂಜಾರ ಸಮುದಾಯದ ಜನರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಂಜಾರ ಸಮುದಾಯ ಹಲವು ವರ್ಷಗಳಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿದೆ. ಭೂಮಿಯ ಹಕ್ಕನ್ನು ಕೊಡಿಸಲು ನಮ್ಮ ಪಕ್ಷದ ನಾಯಕರೊಂದಿಗೆ ಹೋರಾಟ ನಡೆಸುತ್ತೇನೆ. ನನ್ನ ಸಹೋದರ ಡಿ.ಕೆ.ಸುರೇಶ್ ಮೂಲಕ ಸಂಸತ್ತಿನಲ್ಲಿ ನಿಮ್ಮ ಹಾಗೂ ರಾಜ್ಯದಲ್ಲಿರುವ ಬಂಜಾರ ಸಮುದಾಯ ಜನರಿಗೆ ಭೂಮಿಯ ಹಕ್ಕುಪತ್ರ ಕೊಡಿಸುವ ವಿಷಯ ಪ್ರಸ್ತಾಪಿಸುಂತೆ ಹೇಳುತ್ತೇನೆ’ ಎಂದರು.

‘ಬಂಜಾರ ಸಮುದಾಯದ ಸಂಸ್ಕೃತಿ, ಆಚಾರ ವಿಚಾರ ವಿಶಿಷ್ಟವಾಗಿದೆ. ಈ ಸಮುದಾಯ ಅನುಭವಿಸುತ್ತಿರುವ ಕಷ್ಟ ಹಾಗೂ ಸಮಸ್ಯೆಗಳನ್ನು ತಿಳಿದುಕೊಳ್ಳಲು ಬಂದಿದ್ದೇನೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಿಮ್ಮ ಸಮಸ್ಯೆಗಳ ಈಡೇರಿಕೆಗಳ ಬಗ್ಗೆ ಪ್ರಸ್ತಾಪಿಸುತ್ತೇನೆ. ರಾಜ್ಯದಲ್ಲಿ ಎಲ್ಲ ವರ್ಗದ ಜನರನ್ನು ಭೇಟಿ ಮಾಡಿ
ಸಮಸ್ಯೆ ಆಲಿಸುತ್ತೇನೆ. ಡಾ.ಅಂಬೇಡ್ಕರ್ ಹಾಗೂ ಬಸವಣ್ಣನವರ ಚಿಂತನೆ
ಯಂತೆ ಎಲ್ಲ ವರ್ಗದ ಜನರಿಗೂ ಅವಕಾಶವಾಗುವಂತಹ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಮಾರವಳ್ಳಿ ಉಮೇಶ್, ‘2010ರಲ್ಲಿ ಸರ್ಕಾರ ಅರಣ್ಯ ಇಂಡೀಕರಣ ಕಾನೂನಿನ ಮೂಲಕ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿದ ಪರಿಣಾಮ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ದೊರೆಯುತ್ತಿಲ್ಲ. ಈ ಕಾನೂನು ತಿದ್ದುಪಡಿ ಮಾಡುವ ಮೂಲಕ ಅರಣ್ಯ ಇಲಾಖೆಯಿಂದ ಭೂಮಿಯನ್ನು ಪುನಃ ಕಂದಾಯ ಇಲಾಖೆಗೆ ವರ್ಗಾಯಿಸಲು ತಿಳಿಸಬೇಕು. ಕಂದಾಯ ಇಲಾಖೆಗೆ ಭೂಮಿ ವರ್ಗಾವಣೆಯಾದರೆ ತಾಲ್ಲೂಕಿನ 15 ಸಾವಿರ ಜನರಿಗೆ ಭೂಮಿ ಹಕ್ಕುಪತ್ರ ದೊರೆಯುತ್ತದೆ’ ಎಂದು ಮನವಿ ಮಾಡಿದರು.

ನಾಗೀಬಾಯಿ, ‘ಕೊರೊನಾ ಸಮಯದಲ್ಲಿ ಕೆಲಸವಿಲ್ಲದೇ ಸಾಕಷ್ಟು ಕಷ್ಟ ಅನುಭವಿಸಬೇಕಾಯಿತು.
ಸಂಘದ ಮೂಲಕ ಪಡೆದ ₹ 5 ಲಕ್ಷ ಹಣವನ್ನು ಕಟ್ಟಲು ಆಗುತ್ತಿಲ್ಲ. ಬ್ಯಾಂಕ್‌ನವರು ಬಡ್ಡಿ ಹಾಕುತ್ತಿದ್ದು, ಸಾಲ ಹಾಗೂ ಬಡ್ಡಿ ಕಟ್ಟಲು ಒತ್ತಾಯ ಮಾಡದಂತೆ ತಿಳಿಸಬೇಕು’ ಎಂದು  ಮಾತನಾಡಿದರು.

ನಳ್ಳಿನಕೊಪ್ಪ ಕುಮಾರನಾಯ್ಕ, ‘ನಾವು ಕಟ್ಟಿದ ಮನೆಗಳಿಗೆ ಈ ಸ್ವತ್ತು ದೊರೆಯುತ್ತಿಲ್ಲ. ಈ ಸ್ವತ್ತು ಇಲ್ಲದೇ ಬ್ಯಾಂಕಿನ ಸಾಲ ಸೌಲಭ್ಯ ಪಡೆಯಲು ಆಗುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಘೋಷಣೆ ಮಾಡಿದ ಕಂದಾಯ ಗ್ರಾಮದ ಪ್ರಕ್ರಿಯೆ ಮುಂದುವರಿಸಲು ಸರ್ಕಾರಕ್ಕೆ ತಿಳಿಸಬೇಕು’ ಎಂದರು.

ಮುಖಂಡರಾದ ಧ್ರುವನಾರಾಯಣ, ಶಿವಮೂರ್ತಿನಾಯ್ಕ, ರುದ್ರಪ್ಪ ಲಮಾಣಿ, ಆರ್.ಪ್ರಸನ್ನಕುಮಾರ್, ಪ್ರಕಾಶ್ ರಾಥೋಡ್, ಆಗ ಸುಲ್ತಾನ್, ಕೆ.ಬಿ.ಪ್ರಸನ್ನಕುಮಾರ್, ಎಚ್.ಎಸ್.ಸುಂದರೇಶ್, ಮಂಜುನಾಥ್ ಭಂಡಾರಿ, ಎಂ.ಎನ್.ಮೂರ್ತಿ, ನಗರದ ಮಹಾದೇವಪ್ಪ, ಮರಿಯೋಜಿರಾವ್, ಗೋಣಿ ಮಾಲತೇಶ್, ಶಾಂತವೀರಪ್ಪಗೌಡ್ರು, ತೀ.ನಾ.ಶ್ರೀನಿವಾಸ್, ನರಸಿಂಗನಾಯ್ಕ, ಶಿವುನಾಯ್ಕ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು