ಸೋಮವಾರ, ಜನವರಿ 18, 2021
25 °C

ನನಸಾಗದ ಬಡ, ಮಧ್ಯಮ ವರ್ಗಗಳ ಸೂರಿನ ಕನಸು...

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಬಡ, ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ಒದಗಿಸಿ, ಸ್ವಂತ ಮನೆಯೊಳಗೆ ನೆಮ್ಮದಿಯ ಜೀವನ ನಡೆಸಲು ಪೂರಕ ವಾತಾವರಣ ಕಲ್ಪಿಸುವುದು ನಗರಾಭಿವೃದ್ಧಿ ಪ್ರಾಧಿಕಾರದ ಹೊಣೆ.

ಶಿವಮೊಗ್ಗದಲ್ಲೂ ನಗರಾಭಿವೃದ್ಧಿ ಪ್ರಾಧಿಕಾರ ಹಿಂದೆಲ್ಲ ಕಾಲಕಾಲಕ್ಕೆ ಹೊಸ ಬಡಾವಣೆಗಳನ್ನು ಸಿದ್ಧಪಡಿಸಿ, ಹಂಚಿಕೆ ಮಾಡುತ್ತಾ ಬಂದಿತ್ತು. ಸುಮಾರು 4 ಲಕ್ಷ ಜನಸಂಖ್ಯೆ ಹೊಂದಿರುವ ಶಿವಮೊಗ್ಗ ನಗರದಲ್ಲಿ ನಿವೇಶನಗಳಿಗೆ ಭಾರಿ ಬೇಡಿಕೆ ಇದ್ದರೂ ಒಂದು ದಶಕದಿಂದ ಈಚೆಗೆ ಒಂದೂ ಹೊಸ ಬಡಾವಣೆ ನಿರ್ಮಿಸಿಲ್ಲ. ಯಾರಿಗೂ ಒಂದು ನಿವೇಶನ ಹಂಚಿಕೆ ಮಾಡಿಲ್ಲ.

ವಾಜಪೇಯಿ ಬಡಾವಣೆಯೇ ಕೊನೆಯ ಹಂಚಿಕೆ: ವಿನೋಬ ನಗರದಂತಹ ದೊಡ್ಡ ಬಡಾವಣೆ ನಿರ್ಮಿಸಿದ ಪ್ರಾಧಿಕಾರ ಇಂದು ಕೇವಲ ಖಾಸಗಿ ಲೇಔಟ್‌ಗಳಿಗೆ ಅನುಮತಿ ನೀಡುವ ಘಟಕವಾಗಿ ಕಾರ್ಯನಿರ್ವಹಿಸುತ್ತಿದೆ. ಎರಡು ದಶಕಗಳಿಂದ ಈಚೆಗೆ ಸವಳಂಗ ರಸ್ತೆಯ ಜೆಎನ್‌ಸಿಸಿಇ ಎದುರು ಕುವೆಂಪು ಹೆಸರಿನಲ್ಲಿ ನಿರ್ಮಿಸಿದ ಬಡಾವಣೆ ಹೊರತುಪಡಿಸಿದರೆ, 2008–12ರ ಅವಧಿಯಲ್ಲಿ ಸಾಗರ ರಸ್ತೆಯ ಮಲ್ಲಿಗೇನಹಳ್ಳಿ ಬಳಿ ನಿರ್ಮಿಸಿದ ವಾಜಪೇಯಿ ಬಡಾವಣೆಯೇ ‘ಸೂಡಾ’ ಸಿದ್ಧಪಡಿಸಿದ ಕೊನೆಯ ಬಡಾವಣೆ. ಆದರೆ, ಆ ಬಡಾವಣೆಯೂ ಹಗರಣಗಳ ಸುಳಿಗೆ ಸಿಲುಕಿ ಅಲ್ಲಿ ನಿವೇಶನ ಪಡೆದ ಫಲಾನುಭವಿಗಳು ಇದುವರೆಗೂ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ.

ಬಡಾವಣೆಯಲ್ಲಿ 1,163 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಅವುಗಳಲ್ಲಿ ಶೇ 70ಕ್ಕಿಂತ ಹೆಚ್ಚು ಫಲಾನುಭವಿಗಳು ಅರ್ಹರಾಗಿಲ್ಲ. ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿದೆ. ಹಾಗಾಗಿ, ನಿವೇಶನಗಳ ಪುನರ್ ಹಂಚಿಕೆಯಾಗಬೇಕು ಎಂದು ಹಲವು ಸಂಘನೆಗಳು ಆಗ್ರಹಿಸಿದ್ದವು. ಇದರಿಂದಾಗಿ ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಲಾಗಿತ್ತು. ಈಚೆಗೆ ಲೋಕಾಯುಕ್ತ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ.

‘ಹಲವು ಅರ್ಜಿದಾರರು ಈಗಾಗಲೇ ಅರ್ಜಿಗಳನ್ನು ವಾಪಸ್ ತೆಗೆದುಕೊಂಡಿದ್ದಾರೆ. 6,700 ಅರ್ಜಿಗಳು ಬಾಕಿ ಇವೆ. ನಿವೇಶನ ಮರು ಹಂಚಿಕೆ ಮಾಡಿದರೂ ಮನೆ ಕಟ್ಟುವ ಉತ್ಪಾದನಾ ವೆಚ್ಚ ಕೂಡ ಹೆಚ್ಚಾಗುತ್ತದೆ. 10 ವರ್ಷಗಳ ಹಿಂದೆಯೇ ನಿವೇಶನ ನೀಡಿದ್ದರೆ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟಲು ಸಾಧ್ಯವಾಗುತ್ತಿತ್ತು. ಅಲ್ಲದೇ, ಬ್ಯಾಂಕ್‌ ಸಾಲ ಪಡೆಯಲು ಸೇವಾ ಅವಧಿ ಅತ್ಯಂತ ಕಡಿಮೆಯಾಗಿದೆ’ ಎನ್ನುತ್ತಾರೆ ನಿವೇಶನದ ನಿರೀಕ್ಷೆಯಲ್ಲಿರುವ ಫಲಾನುಭವಿ ಶಿಕ್ಷಕ ರಾಜು.

ಅನುಷ್ಠಾನಗೊಳ್ಳದ ಊರುಗಡೂರು ಯೋಜನೆ: ಊರುಗಡೂರು ಬಳಿ 60 ಎಕರೆ ಪ್ರದೇಶದಲ್ಲಿ 687 ನಿವೇಶನಗಳನ್ನು ನಿರ್ಮಿಸಲು ದಶಕಗಳ ಹಿಂದೆ ಭೂಸ್ವಾಧೀನ ಮಾಡಲಾಗಿತ್ತು. ಕೆಲವು ರೈತರು ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ಕೋರ್ಟ್‌ ಮೊರೆಹೋಗಿದ್ದರು.  ಜಮೀನು ಕಳೆದುಕೊಂಡವರಿಗೆ ನಿವೇಶನ ನೀಡಲು ಕೋರ್ಟ್‌ ಸಮ್ಮತಿಸಿತ್ತು. ಹಾಗಾಗಿ, ಹಲವು ವರ್ಷಗಳು ವಿಳಂಬವಾಗಿತ್ತು. ಯೋಜನೆ ಅನುಷ್ಠಾನಕ್ಕೆ ₹ 42 ಕೋಟಿ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. ಆದರೂ, ಇದುವರೆಗೆ ಯೋಜನೆ ಅನುಷ್ಠಾನ ಸಾಧ್ಯವಾಗಿಲ್ಲ.

‘ಗಗನಕ್ಕೇರಿರುವ ಜಮೀನುಗಳ ಬೆಲೆಯೇ ಜನ ಸಾಮಾನ್ಯರಿಗೆ ನಿವೇಶನ ದೊರಕಿಸಲು ಇರುವ ಪ್ರಮುಖ ಅಡ್ಡಿ. ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಶ್ರಮದ ಫಲವಾಗಿ ಬಹುಮಹಡಿ ಮನೆಗಳನ್ನು ನೀಡುವ ಯೋಜನೆ ರೂಪುಗೊಂಡಿದೆ. ಕೇಂದ್ರ, ರಾಜ್ಯ ಸರ್ಕಾರದ ವಸತಿ ಯೋಜನೆಗಳ ಅಡಿ ಹಲವರು ಪ್ರಯೋಜನ ಪಡೆದಿದ್ದಾರೆ. ಮಧ್ಯಮ ವರ್ಗದ ಜನರು ‘ಸೂಡಾ’ ನಿವೇಶನಗಳತ್ತ ಚಿತ್ತ ಹರಿಸಿದ್ದಾರೆ. ರೈತರ ಸಹಭಾಗಿತ್ವದಲ್ಲಿ ಬಡಾವಣೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಮೊದಲು 40:60ರ ಅನುಪಾತದಲ್ಲಿ ನಿವೇಶನಗಳನ್ನು ಖರೀದಿಸಲಾಗುತ್ತಿತ್ತು. ಈಗ 50:50 ಅನುಪಾತಕ್ಕೆ ಸರ್ಕಾರ ಅನುಮತಿ ನೀಡಿದೆ. ಹೊಸ ಬಡಾವಣೆಗಳನ್ನು ರೂಪಿಸಲು ಈಗಾಗಲೇ ಸುಮಾರು 16 ಕಡೆ ಜಮೀನು ಗುರುತಿಸಲಾಗಿದೆ. ನಿವೇಶನ ರಹಿತರಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ‘ಸೂಡಾ’ ಅಧ್ಯಕ್ಷ ಎಸ್‌.ಎಸ್.ಜ್ಯೋತಿಪ್ರಕಾಶ್.

ಜಿ+2 ಮಾದರಿ ಮನೆಗಳಿಗೆ ವೇಗ: ಗೋವಿಂದಾಪುರ ಹಾಗೂ ಗೋಪಿಶೆಟ್ಟಿಕೊಪ್ಪ ಪ್ರದೇಶದಲ್ಲಿ ಸುಮಾರು 8 ಸಾವಿರ ಜಿ+2 ಮಾದರಿ ಆಶ್ರಯ ಮನೆಗಳ ಹಂಚಿಕೆ ಮಾಡಲು ಯೋಜನೆ ರೂಪಿಸಲಾಗಿದೆ. ಇದುವರೆಗೆ 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ರಾಜೀವ್ ಗಾಂಧಿ ವಸತಿ ಯೋಜನೆ ಮೂಲಕ ಮನೆಗಳ ನಿರ್ಮಾಣ ಪ್ರಕ್ರಿಯೆಗಳೂ ಆರಂಭವಾಗಿವೆ.

ಈ ಯೋಜನೆಯಲ್ಲಿ ಸಾಮಾನ್ಯ ವರ್ಗದ ಫಲಾನುಭವಿಗಳು ₹ 80 ಸಾವಿರ, ಪರಿಶಿಷ್ಟ ಜಾತಿ, ವರ್ಗದವರು ₹ 50 ಸಾವಿರ ಕಟ್ಟಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ₹ 3.20 ಲಕ್ಷ ಸಬ್ಸಿಡಿ ನೀಡಲಿದೆ. ಬ್ಯಾಂಕ್‌ಗಳು ₹ 1.30 ಲಕ್ಷ ಸಾಲ ನೀಡಲಿವೆ. ಒಟ್ಟು ₹ 5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲಾಗುತ್ತಿದೆ.

ಚಿಕ್ಕ ಅಪಾರ್ಟ್‌ಮೆಂಟ್‌ಗಳತ್ತ ಸೂಡಾ ಚಿತ್ತ: ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಖರೀದಿಸಲು ಅನುಕೂಲವಾಗುವಂತೆ ಒಂದು ಸಾವಿರ ಚಿಕ್ಕ ಅಪಾರ್ಟ್‌ಮೆಂಟ್‌ಗಳನ್ನು (ಸಿಂಗಲ್‌ ಬೆಡ್‌ ರೂಂ ಇರುವ) ನಿರ್ಮಿಸಲು ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.

ಹಲವು ಕುಟುಂಬಗಳು ಸಣ್ಣ–ಪುಟ್ಟ ವ್ಯವಹಾರ, ಉದ್ಯೋಗ ಮಾಡಿಕೊಂಡು ನಿಶ್ಚಿತ ಆದಾಯ ಗಳಿಸುತ್ತಾ ಜೀವನ ನಡೆಸುತ್ತಿದ್ದಾರೆ. ಇಂತಹ ಕುಟುಂಬಗಳನ್ನು ಗುರುತಿಸಿ, ಅವರ ಆರ್ಥಿಕ ಸ್ಥಿತಿಗೆ ಹೊಂದುವಂತೆ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸ
ಲಾಗುತ್ತಿದೆ. ಈಗಾಗಲೇ ಸೋಮಿನಕೊಪ್ಪದಲ್ಲಿ 1.9 ಎಕರೆ ಜಾಗ ಗುರುತಿಸಲಾಗಿದೆ.

ಎರಡು ದಶಕಗಳ ನಿರೀಕ್ಷೆಯ ‘ಸೂರು’
ಭದ್ರಾವತಿ:
ಸೂರಿನ ನಿರೀಕ್ಷೆಯಲ್ಲಿರುವ ನಗರಸಭಾ ವ್ಯಾಪ್ತಿಯ 4 ಸಾವಿರ ನಾಗರಿಕರನ್ನು ಆಯ್ಕೆ ಮಾಡಿದ್ದು, ಅವರ ಪಾಲಿನ ಪ್ರಥಮ ಕಂತಿನ ಹಣ ಪಾವತಿಗೆ ಅವಕಾಶ ನೀಡಲಾಗುತ್ತಿದೆ.

1994ರಲ್ಲಿ ಆಶ್ರಯ ಬಡಾವಣೆ ಮೂಲಕ ನಿವೇಶನ ಹಂಚಿದ ಪ್ರಕ್ರಿಯೆ ಮುಗಿದ ನಂತರ 2001ರಲ್ಲಿ ಬುಳ್ಳಾಪುರ ಬಳಿ ಮನೆಗಳ ವಿತರಣೆ ಮಾಡಿದ್ದು ಬಿಟ್ಟರೆ 20 ವರ್ಷಗಳ ನಂತರ ಮನೆ ಹಂಚಿಕೆಯ ಆಯ್ಕೆಪಟ್ಟಿ ಸಿದ್ಧಪಡಿಸಲಾಗಿದೆ.

‘ಈ ಯೋಜನೆ ಹೊರತಾಗಿ ಸುಮಾರು 950 ಸ್ವಂತ ನಿವೇಶನ ಹೊಂದಿದ್ದ ಫಲಾನುಭವಿಗಳಿಗೆ ಮೂರು ವರ್ಷಗಳ ಅವಧಿಯಲ್ಲಿ ಅಟಲ್ ವಸತಿ ಯೋಜನೆ, ಬಸವ–ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಳ್ಳಲು ನೆರವು ನೀಡಲಾಗಿದೆ. ಮತ್ತಷ್ಟು ಮನೆಗಳ ಅಗತ್ಯ ಇದೆ. ಸುಮಾರು 26 ಎಕರೆ ಜಾಗ ಗುರುತಿಸಲಾಗಿದೆ. ಮನೆ ನಿರ್ಮಾಣಕ್ಕೆ ಒಪ್ಪಿಗೆ ಪಡೆಯಲು ಶಾಸಕರ ನೇತೃತ್ವದಲ್ಲಿ ಆಶ್ರಯ ಸಮಿತಿ ಸಭೆ ನಡೆಸಲಾಗಿದೆ’ ಎಂದು  ಪೌರಾಯುಕ್ತ ವಿ.ಮನೋಹರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮನೆಗಳಿಗೆ ಬೇಡಿಕೆ ಹೆಚ್ಚಿದೆ. ನಗರಸಭಾ ವ್ಯಾಪ್ತಿಯಲ್ಲಿ ಖಾಲಿ ಇರುವ ಜಾಗ ಸದ್ಬಳಕೆ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ. ಮುಂದಿನ ಮೂರು ವರ್ಷಗಳಲ್ಲಿ ಅರ್ಜಿ ಹಾಕಿದ ಎಲ್ಲರಿಗೂ ಸೂರು ಒದಗಿಸುವ ಕೆಲಸ ಮಾಡಲಾಗುವುದು’ ಎಂದು ಶಾಸಕ ಬಿ.ಕೆ.ಸಂಗಮೇಶ್ವರ ಹೇಳಿದರು.

ಅರ್ಜಿ ಹಾಕುವುದೇ ಕೆಲಸ: ‘ಪ್ರತಿಸಲವೂ ಮನೆಗಾಗಿ ಅರ್ಜಿ ಹಾಕವುದೇ ಬದುಕಾಗಿದೆ. ಇಪ್ಪತ್ತು ವರ್ಷಗಳಿಂದ ಪ್ರಯತ್ನ ಮಾಡಿದ್ದೇನೆ ಇಂದಿಗೂ ಸೂರು ಸಿಕ್ಕಿಲ್ಲ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಕಣ್ಣ.

‘ಹಕ್ಕುಪತ್ರ ನೀಡಿರುವ ಮನೆಗಳ ಸ್ಥಿತಿ ಅಂತೂ ಬದಲಾಗಿಲ್ಲ. ಅಲ್ಲಿಯೂ ಮನೆ ಕಟ್ಟಲು ಹಣಕಾಸಿನ ನೆರವು ನೀಡುವುದಾಗಿ ಹೇಳುತ್ತಾರೆ. ದಾಖಲೆ ಸರಿ ಇಲ್ಲದೆ ಅದನ್ನು ಪಡೆಯಲು ಸಾಧ್ಯವಾಗಿಲ್ಲ’ ಎನ್ನುವ ಸಣ್ಣಮ್ಮ, ಮುರುಕಲು ಜೋಪಡಿಯ ತಮ್ಮ‘ಅರಮನೆ’ಯನ್ನು ತೋರುತ್ತಾರೆ.

‘ವಾರದ ಹಿಂದೆ ದುಡ್ಡು ಕಟ್ಟಲು ಸಿದ್ಧರಾಗಲು ನಗರಸಭೆ ಸೂಚಿಸಿತ್ತು. ತಾಂತ್ರಿಕ ಕಾರಣದಿಂದ ಮುಂದೂಡಲಾಗಿದೆ. ಈ ಸಲವೂ ಮನೆ ಎನ್ನುವುದು ನಮ್ಮ ಪಾಲಿಗೆ ಕನಸೋ ಎಂಬ ಅನುಮಾನ ಕಾಡುತ್ತಿದೆ. ಎರಡು ದಶಕಗಳಿಂದ ಸೂರಿಗಾಗಿ ಕಾದಿರುವ ಜನರಲ್ಲಿ ಕೆಲವರಿಗೆ ಹಕ್ಕು ಸಿಕ್ಕರೂ ಮೊದಲ ಕಂತಿನ ಮೊತ್ತ ಪಾವತಿ ಮಾಡಲು ನಿಗದಿ ಮಾಡಿದ್ದ ದಿನ ಮುಂದೂಡಿರುವುದು ಬೇಸರ ತಂದಿದೆ’ ಎನ್ನುತ್ತಾರೆ ನಾಗರತ್ನಾ.

ನಿವೇಶನಕ್ಕಾಗಿ 2,200 ಅರ್ಜಿ
ಶಿಕಾರಿಪುರ: 
ಪುರಸಭೆ ನಿವೇಶನ ಹಂಚುತ್ತದೆ ಎಂಬ ನಿರೀಕ್ಷೆಯಲ್ಲಿ 2,200 ನಿವಾಸಿಗಳು ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರ ಕನಸು ನನಸಾಗಿಲ್ಲ.

ಪುರಸಭೆ ಕಾನೂರು ಆಶ್ರಯ ಬಡಾವಣೆಯಲ್ಲಿ 2005-06ರಲ್ಲಿ 181 ನಿವೇಶನ, 2007-08ರಲ್ಲಿ 254 ನಿವೇಶನ, 2016-17ರಲ್ಲಿ 75 ನಿವೇಶನ ಒಟ್ಟು 410 ನಿವೇಶನ ವಿತರಿಸಿದೆ.

ಹಳಿಯೂರು ಆಶ್ರಯ (ದೂಪದಹಳ್ಳಿ) ಬಡಾವಣೆಯಲ್ಲಿ 2005ರಲ್ಲಿ 207 ನಿವೇಶನ, 2011-12ರಲ್ಲಿ 61 ನಿವೇಶನಗಳನ್ನು ನಿವೇಶನರಹಿತರಿಗೆ ವಿತರಿಸಿದೆ. ಎರಡು ಬಡಾವಣೆಗಳು ಸೇರಿ ಸುಮಾರು 677 ನಿವೇಶನಗಳನ್ನು ವಿತರಿಸಿದೆ.

ಪ್ರಸ್ತುತ ಪುರಸಭೆಗೆ ಸುಮಾರು 2,200 ನಿವಾಸಿಗಳು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಪುರಸಭೆ ನಿವೇಶನ ಯಾವಾಗ ಹಂಚುತ್ತದೆ ಎಂಬ ನಿರೀಕ್ಷೆ ನಿವಾಸಿಗಳದ್ದಾಗಿದೆ. ಪ್ರತಿ ಬಾರಿ ವಿಧಾನಸಭೆ, ಪುರಸಭೆ ಚುನಾವಣೆಯಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ನಿವೇಶನ ರಹಿತರು ಯಾವಾಗ ನಿವೇಶನ ವಿತರಿಸುತ್ತೀರಿ ಎಂಬ ಮಾತು ಕೇಳುವುದು ಸಾಮಾನ್ಯವಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು