ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿಸಂ, ಗಾಂಜಾ ಮಾರಾಟ ಸಹಿಸಲ್ಲ

ಸಾರ್ವಜನಿಕರೊಂದಿಗೂ ಸಂವಹನ: ಎಸ್‌ಪಿ ಮಿಥುನ್‌ಕುಮಾರ್
Last Updated 7 ಅಕ್ಟೋಬರ್ 2022, 6:19 IST
ಅಕ್ಷರ ಗಾತ್ರ

ಶಿವಮೊಗ್ಗ: ‘ರೌಡಿಸಂ, ಗಾಂಜಾ ಮಾರಾಟವನ್ನು ಇಲಾಖೆ ಯಾವುದೇ ಕಾರಣಕ್ಕೂ ಅದನ್ನು ಸಹಿಸಿಕೊಳ್ಳುವುದಿಲ್ಲ’ ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಶೀಘ್ರ ಸಾರ್ವಜನಿಕರೊಂದಿಗೆ ಸಂವಹನ ನಡೆಸಿ ಇಲ್ಲಿನ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ. ಅಪರಾಧ ಚಟುವಟಿಕೆ ಕಂಡು ಬಂದಲ್ಲಿ ಇಲ್ಲವೇ ಮಾಹಿತಿ ಇದ್ದಲ್ಲಿ ಮಾಧ್ಯಮದವರು ಹಾಗೂ ಸಾರ್ವಜನಿಕರು ನೇರವಾಗಿ ನಮಗೆ ಮಾಹಿತಿ ಕೊಡಬಹುದು’ ಎಂದು ತಿಳಿಸಿದರು.

ಕೋಮುಗಲಭೆ, ರೌಡಿ ಚಟುವಟಿಕೆ ಹಾಗೂ ಗಾಂಜಾ ಮಾರಾಟ ಶಿವಮೊಗ್ಗ ನಗರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ಎಂಬುದಕ್ಕೆ ಪ್ರತಿಕ್ರಿಯಿಸಿದ ಮಿಥುನ್‌ಕುಮಾರ್, ‘ಕೋಮು ಗಲಭೆ ವಿಚಾರದಲ್ಲಿ ನನ್ನದು ಭಿನ್ನ ನಿಲುವು. ಎಲ್ಲ ಕೋನಗಳಿಂದಲೂ ನೋಡಿ ಇನ್ನಷ್ಟು ಅರ್ಥಮಾಡಿಕೊಂಡು ಆ ಬಗ್ಗೆ ಕ್ರಮಗಳಿಗೆ ಮುಂದಾಗುವೆ’ ಎಂದರು.

ನಗರದಲ್ಲಿ ಸಂಚಾರದಟ್ಟಣೆ ಸಮಸ್ಯೆಯ ಬಗ್ಗೆ ಜನರಿಂದಲೂ ಕೇಳಿದ್ದೇನೆ. ನಗರ ದೊಡ್ಡದಾಗಿ ಬೆಳೆದಿದೆ. ವಾಹನಗಳ ಸಂಖ್ಯೆ ಹೆಚ್ಚಳಗೊಂಡಿದೆ. ಹೀಗಾಗಿ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ಅದನ್ನು ಸರಿಪಡಿಸಲಾಗುವುದು. ಆಟೊ ಮೀಟರ್‌ ಅಳವಡಿಕೆ, ಪ್ರೀ ಪೇಯ್ಡ್ ಆಟೊ ವ್ಯವಸ್ಥೆ ಆರಂಭಕ್ಕೆ ಸಂಬಂಧಿಸಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಾಧ್ಯಮಗಳಿಗೆ ಸಂಬಂಧ ವಿಲ್ಲದವರು ‘ಪ್ರೆಸ್’ ಎಂಬ ಸ್ಟಿಕ್ಕರ್ ಬಳಸಿಕೊಂಡು ಓಡಾಡುತ್ತಿರುವ ಬಗ್ಗೆ ಗಮನ ಸೆಳೆದಾಗ ಅದರ ನಿಯಂತ್ರಣಕ್ಕೆ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂ‍ಪರ್ಕಾಧಿಕಾರಿಯಿಂದ ನೈಜ ಪತ್ರಕರ್ತರ ಬಗ್ಗೆ ಮಾಹಿತಿ ಪಡೆದು ಅದರ ‘ಪ್ರೆಸ್’ ಪದ ದುರುಪಯೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರದಲ್ಲಿ ಗೂಡಂಗಡಿಗಳಲ್ಲೂ ಓಸಿ ಜೂಜಾಟ ಅವ್ಯಾವಹತವಾಗಿ ನಡೆಯುತ್ತಿದೆ. ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣವಿಲ್ಲದಾಗಿದೆ ಎಂದು ಮಾಧ್ಯಮದವರು ಗಮನ ಸೆಳೆದಾಗ ಆ ಬಗ್ಗೆ ನಿಶ್ಚಿತವಾಗಿ ಕ್ರಮ ಕೈಗೊಳ್ಳುವೆ ಎಂದು ಹೇಳಿದರು.

ಹದಿಹರೆಯದವರು ಪರವಾನಗಿ ಇಲ್ಲದೇ ವಾಹನ ಚಲಾಯಿಸುವುದನ್ನು ತಡೆದು ಅಪಘಾತಗಳನ್ನು ತಪ್ಪಿಸಿ, ಜೀವ ಹಾನಿ ತಡೆಯುವುದು ತಮ್ಮ ಆದ್ಯತೆಯ ಸಂಗತಿ ಎಂದರು.

ಸುದ್ದಿಗೋಷ್ಠಿಯಲ್ಲಿ ಎಎಸ್‌ಪಿ ವಿಕ್ರಂ ಅವಟೆ, ಡಿವೈಎಸ್‌ಪಿ ಬಾಲರಾಜ್ ಇದ್ದರು.

ಐಪಿಎಸ್‌ಗೆ ಮುನ್ನ ಸಾಫ್ಟ್‌ವೇರ್ ಎಂಜಿನಿಯರ್‌
ತುಮಕೂರು ಜಿಲ್ಲೆಯ ಕೊರಟಗೆರೆ ನಮ್ಮೂರು. ತುಮಕೂರಿನಲ್ಲಿ ಶಿಕ್ಷಣ ಮುಗಿಸಿ ಎಂಜಿನಿಯರಿಂಗ್ ಓದಿದ್ದೇನೆ. ನಾಲ್ಕು ವರ್ಷ ಸಾಫ್ಟ್‌ವೇರ್ ಕಂಪನಿಯಲ್ಲೂ ಕೆಲಸ ಮಾಡಿದ್ದು, ನಾಗರಿಕ ಸೇವೆ ಪರೀಕ್ಷೆ ಬರೆದು 2016ರಲ್ಲಿ ಐಪಿಎಸ್‌ ಅಧಿಕಾರಿಯಾಗಿ ಆಯ್ಕೆಯಾಗಿದ್ದೇನೆ ಎಂದು ಮಿಥುನ್‌ಕುಮಾರ್ ತಮ್ಮ ಪರಿಚಯ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT