ಮಂಗಳವಾರ, ಜನವರಿ 31, 2023
18 °C
ಅವಿನಾಶ್ ಚಕ್ರಸಾಲಿ ಕ್ಷೇತ್ರ ಕಾರ್ಯ

ಸೊರಬ: ದೂಗೂರು ಗ್ರಾಮದಲ್ಲಿ 5ನೇ ಶತಮಾನದ ಶಾಸನಗಳು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೊರಬ: ತಾಲ್ಲೂಕಿನ ದೂಗೂರು ಗ್ರಾಮದಲ್ಲಿ ಕ್ರಿ.ಶ. 5ನೇ ಶತಮಾನದ ಸಿದ್ದೇಶ್ವರ ದೇವಾಲಯ, ಪಾರ್ವತಿ ದೇವಾಲಯ ಹಾಗೂ ಕಾಲ
ಭೈರವೇಶ್ವರ ದೇವಾಲಯಗಳ ಜೊತೆಗೆ ಅನೇಕ ಮಹಾಸತಿ, ವೀರಗಲ್ಲುಗಳು, ಲಿಂಗ ಮುದ್ರೆ ಕಲ್ಲುಗಳು, ಕೋಣನತಲೆ ಶಿಲ್ಪ ಹಾಗೂ ಗಜಲಕ್ಷ್ಮಿ ಶಿಲ್ಪಗಳು ಪತ್ತೆಯಾಗಿವೆ.

ದೂಗೂರಿಗೆ ಮೂಲ ಗ್ರಾಮ ದುರ್ಗದಘಡ ಎನ್ನುವ ಹೆಸರಿದ್ದು, ಗ್ರಾಮದ ಸುತ್ತಲೂ ಮಣ್ಣಿನ ಕೋಟೆಯಿದ್ದ ಕುರುಹು ಕಾಣಸಿಗುತ್ತದೆ. ಪಳೆಯುಳಿಕೆಗಳು, ಜೊತೆಗೆ ಅಲ್ಲಲ್ಲಿ ಎತ್ತರವಾದ ಮಣ್ಣಿನ ಗುಡ್ಡೆಗಳು, ಹಳೆಯ ಸುಟ್ಟ ಹೆಂಚಿನ ಚೂರುಗಳು, ಗೃಹೋಪಯೋಗಿ ವಸ್ತುಗಳು, ಶತಮಾನಗಳ ಹಿಂದಿನ ಮನೆಗಳು ಹಾಗೂ ಜನವಸತಿ ಇದ್ದಿರುವುದಕ್ಕೆ ಪುಷ್ಟಿ ನೀಡುತ್ತವೆ. ಕೋಟೆ ರಚನೆಯ ಒಳಗೆ ಒಟ್ಟು ಸುಮಾರು 9 ಅಡಿ ಸುತ್ತಳತೆಯ ಆಳವಾದ (ಕುಂದಳಿಕೆ) ಬಾವಿಗಳಿವೆ.

ಶತಮಾನಗಳ ಹಿಂದೆ ಸುಟ್ಟ ಮಣ್ಣಿನ ರಿಂಗುಗಳನ್ನು ಅಳವಡಿಸಿ ನೀರಿನ ಮೂಲವಾಗಿ ಬಳಸಿರುವುದು ಕಾಣಸಿಗುತ್ತವೆ. ಗ್ರಾಮದಲ್ಲಿ ವಾಸವಿರುವ ಕೊಂಡ್ಲಿ ಮನೆತನಕ್ಕೆ ‘ಕೊಂಡ್ಲಿ’ ಎಂಬ ಹೆಸರು ಬರಲು ಕುಂದಳಿಕೆ ಬಾವಿಗಳ ನಿರ್ಮಾಣ ಅಥವಾ ಅವುಗಳ ಬಳಿ ವಸತಿಯ ಕಾರಣದಿಂದಲೋ ಆ ಹೆಸರು ಬಂದಿರುವುದಕ್ಕೆ ಪುಷ್ಟಿ ನೀಡುತ್ತದೆ. ಜನವಸತಿ ಇದ್ದ ಪ್ರದೇಶದಲ್ಲಿ ಅಲ್ಲಲ್ಲಿ ಮನೆಗಳ ತಳಪಾಯ, ರುಬ್ಬುವ ಕಲ್ಲು, ಗುಂಡುಗಳು, ಸುಟ್ಟ ಮಣ್ಣಿನ ಹೆಂಚುಗಳು ಕಾಣ ಸಿಗುತ್ತವೆ. ಮಣ್ಣಿನ ಕೋಟೆಯ ರಚನೆಯ ಒಳಗೆ ದೇವಾಲಯ/ಮಠದ ಕುರುಹುಗಳಿದ್ದು ಗ್ರಾಮಸ್ಥರು ವರ್ಷಕ್ಕೊಂದು ಬಾರಿ ಕಾಡಿನೊಳಗೆ ತೆರಳಿ ಮಠದ ಚೌಡಮ್ಮ ಎಂಬ
ಶಕ್ತಿದೇವತೆಯನ್ನು ಪೂಜಿಸುತ್ತಾರೆ.

ದೂಗೂರು ಗ್ರಾಮದಲ್ಲಿ ಒಟ್ಟು 6 ಮಹಾಸತಿ ಕಲ್ಲುಗಳು, 5 ವೀರಗಲ್ಲುಗಳು ಇವೆ. 4 ವೀರಗಲ್ಲುಗಳ ಪಾಠ ‘ಎಪಿಗ್ರಾಫಿಯಾ ಆಫ್ ಕರ್ನಾಟಕ’ದ ಶಿವಮೊಗ್ಗ ಜಿಲ್ಲೆಯ ಸಂಪುಟದಲ್ಲಿ ದಾಖಲಾಗಿವೆ. ಉಳಿದವುಗಳ ನಿಖರ ಅಧ್ಯಯನ ಇನ್ನಷ್ಟೇ ನಡೆಯಬೇಕಿದೆ.

ಸಿದ್ದರಾಮೇಶ್ವರ ದೇವಾಲಯದ ಎದುರಿರುವ ತುರುಗೋಳ್ ವೀರಗಲ್ಲು: ಶತಮಾನಗಳ ಹಿಂದೆ ಗೋವುಗಳು ಗ್ರಾಮದ ಹಾಗೂ ವೈಯಕ್ತಿಕ ಸಂಪತ್ತಾಗಿದ್ದವು. ಗೋವುಗಳ ಅಪಹರಣ ಹಾಗೂ ಶತ್ರುಗಳು ಗೋವುಗಳನ್ನು ಅಪಹರಿಸುವಾಗ ಅವುಗಳನ್ನು ಊರಿನ ವೀರರು ತಡೆದು ವೀರತ್ವ ಮೆರೆಯುವುದು ಹೆಚ್ಚಾಗಿ ಕಂಡುಬರುತ್ತದೆ. ವಿಜಯನಗರ ಸಾಮ್ರಾಜ್ಯದ ಅರಸು ವೀರ ಹರಿಹರ ರಾಯನ ಉಲ್ಲೇಖವಿರುವ 1310ರ ಶಾಸನದಲ್ಲಿ ಮುಟುಗುಪ್ಪೆಯ ರಿಕ್ಕಟ ಚಿಕ್ಕಗೊಂಡನ ಮಗ ಕೋವಿಕಾರ ದೇವಯ ನಾಯಕನು ಸರ್ಪವಾಗಿ ಮರಣ ಹೊಂದಿದಾಗ ಆತನ ಮಡದಿ ಮುದ್ದನಾಯಕತಿಯು ಮಹಾಸತಿ ಚಿತೆಗೇರಿ ವೈಕುಂಠ ಪ್ರಾಪ್ತಿಯಾದಳೆಂದು ತಿಳಿಸುತ್ತದೆ. ಇಂತಹ ಇನ್ನೂ ಹಲವು ಐತಿಹಾಸಿಕ ಕುರುಹುಗಳು ದೂಗೂರು ಗ್ರಾಮದಲ್ಲಿವೆ. ಇನ್ನೂ ಹೆಚ್ಚಿನ ಶೋಧನೆಯ ಅಗತ್ಯವಿದೆ.

ಹಿರಿಯ ಇತಿಹಾಸ ಸಂಶೋಧಕರಾದ ಉಳವಿಯ ರಮೇಶ್ ಕಾರಂತರು ಸಲಹೆ, ಮಾರ್ಗದರ್ಶನ ಮಾಡಿದ್ದು, ಉಳವಿ ಗ್ರಾಮದ ಇತಿಹಾಸ ಅಧ್ಯಯನಕಾರರಾದ ಅವಿನಾಶ್ ಚಕ್ರಸಾಲಿ ಕ್ಷೇತ್ರ ಕಾರ್ಯ ನಡೆಸಿದ್ದಾರೆ. ಹುಚ್ಚಪ್ಪ ದೂಗೂರು, ಸತ್ಯಪ್ಪ, ಉಮೇಶ್, ಲೋಕೇಶ್ ಸಹಕರಿಸಿದ್ದಾರೆ. ಕ್ಷೇತ್ರ ಕಾರ್ಯದಲ್ಲಿ ಗ್ರಾಮದ ಇತಿಹಾಸವನ್ನು ಗ್ರಾಮಸ್ಥರಿಗೆ ತಿಳಿಸಲಾಗಿದ್ದು, ಗ್ರಾಮಸ್ಥರು ಅಳಿವಿನಂಚಿನಲ್ಲಿರುವ ಐತಿಹಾಸಿಕ ಕುರುಹುಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಣೆ ಮಾಡುವುದಾಗಿ
ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.