ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9, 10ನೇ ತರಗತಿ ವಿದ್ಯಾರ್ಥಿಗಳಿಗೂ ಮೊಟ್ಟೆ, ಚಿಕ್ಕಿ

ಶಿಕ್ಷಕರ ಜೇಬಿನಿಂದ ಹಣ, ಶಾಲಾಭಿವೃದ್ಧಿ ಸಮಿತಿಯ ಶ್ರಮ
Last Updated 2 ಆಗಸ್ಟ್ 2022, 2:16 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಇಲ್ಲಿನ ಹೊಸೂರು ಗುಡ್ಡೇಕೇರಿಯ ಸರ್ಕಾರಿ ಪ್ರೌಢಶಾಲೆಯ 9 ಹಾಗೂ 10ನೇ ತರಗತಿ 79 ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಹಾಗೂ ಸಿಬ್ಬಂದಿ ಪ್ರತಿ ತಿಂಗಳು ₹ 3500ರಿಂದ ₹ 4000 ಖರ್ಚು ಮಾಡಿ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಿಸುತ್ತಿದ್ದಾರೆ.

ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ 2022– 23ನೇ ಸಾಲಿನ ಪ್ರಧಾನಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ್‌ ಯೋಜನೆ ಅಡಿ 1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೇಹಣ್ಣು, ಶೇಂಗಾ ಚಿಕ್ಕಿ ವಿತರಣೆ ಮಾಡುತ್ತಿದೆ. ಆದರೆ, 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗುತ್ತಿಲ್ಲ. 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟದ ಜೊತೆಗೆ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ಕೊಡಲಾಗುತ್ತಿದೆ. ಅದೇ ಹೊತ್ತಿಗೆ ಊಟಕ್ಕೆ ಕುಳಿತಿರುತ್ತಿದ್ದ 9 ಹಾಗೂ 10ನೇ ತರಗತಿಯವರಿಗೆ ಈ ಸೌಲಭ್ಯ ಇರಲಿಲ್ಲ. ಈ ತಾರತಮ್ಯ ನಿವಾರಿಸಲು ಶಿಕ್ಷಕರು ತಮ್ಮ ಕೈಯಿಂದ ಹಣ ನೀಡುತ್ತಿದ್ದಾರೆ.

ಪಾಲಕರ, ಶಾಲಾಭಿವೃದ್ಧಿಸಮಿತಿ, ಶಿಕ್ಷಕರು ಶ್ರಮ: ಸರ್ಕಾರಿ, ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮಂಗಳವಾರ, ಶುಕ್ರವಾರದ ಮೆನುವಿನಲ್ಲಿ ಮೊಟ್ಟೆ, ಬಾಳೇಹಣ್ಣು ವಿತರಿಸಬೇಕು. ತಿಂಗಳಲ್ಲಿ 8 ದಿನ ಅಪೌಷ್ಟಿಕತೆ ನಿವಾರಣೆಯ ಈ ಕಾರ್ಯಕ್ರಮ ಜಾರಿಯಲ್ಲಿದೆ. ವಾರದ ಹಿಂದೆ ಆರಂಭವಾದ ಯೋಜನೆ ಆರಂಭಿಕ ಹಂತದಲ್ಲಿ ತಾರತಮ್ಯಕ್ಕೆ ಗುರಿಯಾಗಿದೆ. ಪ್ರೌಢಶಾಲೆಯ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಸೌಲಭ್ಯ ನೀಡದಿರುವುದು ಅಸಮಾನತೆ ಸೃಷ್ಟಿಗೆ ಕಾರಣವಾಗಿದೆ.

ಬಿಸಿಯೂಟ ಸಿಬ್ಬಂದಿ, ಶಿಕ್ಷಕರು ಈ ತಾರತಮ್ಯದ ಪರಿಹಾರಕ್ಕೆ ದೇಣಿಗೆ ಸಂಗ್ರಹಿಸಬೇಕಾದ ಅನಿವಾರ್ಯ ಎದುರಾಗಿದೆ. ತಾಲ್ಲೂಕಿನ ಗುಡ್ಡೇಕೇರಿ, ರಾಮಕೃಷ್ಣಪುರ, ಕುಡುಮಲ್ಲಿಗೆ ಪ್ರೌಢಶಾಲೆಗಳಲ್ಲಿ ಸ್ಥಳೀಯರಿಂದ ದೇಣಿಗೆ ಸಂಗ್ರಹಿಸಿ ಎಲ್ಲ ವಿದ್ಯಾರ್ಥಿಗಳಿಗೂ ಬಿಸಿಯೂಟದೊಂದಿಗೆ ಮೊಟ್ಟೆ, ಬಾಳೇಹಣ್ಣು, ಶೇಂಗಾ ಚಿಕ್ಕಿ ವಿತರಿಸಲಾಗುತ್ತಿದೆ.

ಒಬ್ಬರ ಪೋಷಣೆಗೆ 6 ರೂಪಾಯಿ: 2019-20ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮೀಕ್ಷೆಯಲ್ಲಿ 6 ರಿಂದ 15 ವರ್ಷದ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ, ಬಹುಪೋಷಕಾಂಶ ಕೊರತೆ ದೃಢಪಟ್ಟಿದೆ. ಕೇಂದ್ರ ಶೇ 60, ರಾಜ್ಯ ಶೇ 40 ಅನುಪಾತದಲ್ಲಿ ವೆಚ್ಚ ಭರಿಸಲಿದೆ. ಶೈಕ್ಷಣಿಕ ಸಾಲಿನ 46 ದಿನ ವಿದ್ಯಾರ್ಥಿಗಳಿಗೆ 50 ಗ್ರಾಂ ತೂಕದ ಎರಡು ಮೊಟ್ಟೆ, ಸೇವಿಸದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು, 40 ಗ್ರಾಂ ಚಿಕ್ಕಿ ನೀಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೆ ಸರ್ಕಾರ ₹6 ಭರಿಸಲಿದ್ದು, ₹1 ಸಾಗಾಟ ₹ 5 ಯೋಜನೆಯ ಅನುಷ್ಠಾನಕ್ಕೆ ಮೀಸಲಿರಿಸಿದೆ.

***

8, 9,10ನೇ ತರಗತಿ ವಿದ್ಯಾರ್ಥಿಗಳನ್ನು ಸರ್ಕಾರ ಸಮಾನವಾಗಿ ನೋಡಿಕೊಳ್ಳಬೇಕು. ಈಗ ಸೃಷ್ಟಿಯಾಗಿರುವ ಗೊಂದಲವನ್ನು ಸರ್ಕಾರ ಶೀಘ್ರ ಪರಿಹರಿಸಬೇಕು. ರಾಜ್ಯದ ಎಲ್ಲಾ ಪ್ರೌಢಶಾಲೆಗಳಿಗೂ ಯೋಜನೆ ವಿಸ್ತರಿಸುವುದು ಉತ್ತಮ.

ರಮೇಶ್‌ ಶೆಟ್ಟಿ, ಕುಡುಮಲ್ಲಿಗೆ ಪ್ರೌಢಶಾಲೆ ನಾಮ ನಿರ್ದೇಶಿತ ಸದಸ್ಯ

***

ಕೇಂದ್ರ ಸರ್ಕಾರ ಪೋಷಣ್‌ ಶಕ್ತಿ ನಿರ್ಮಾಣ್‌ ಯೋಜನೆ ಪೋಷಕಾಂಶ ಕೊರತೆ ನಿವಾರಣೆಗೆ ಸಹಕಾರಿಯಾಗಿದೆ. ನಮ್ಮ ಶಾಲೆಯಲ್ಲೂ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿ ಮಾಡಿದ್ದೇವೆ.

ಮಂಜುಬಾಬು ಎಚ್.ಪಿ ಗುಡ್ಡೇಕೇರಿ, ಪ್ರೌಢಶಾಲೆ ಮುಖ್ಯಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT