ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಎಂಟು ತಿಂಗಳ ಬಳಿಕ ಗರಿಗೆದರಿದ ರಂಗಭೂಮಿ

ನಾಟಕ ಪ್ರದರ್ಶನ: ಕಲಾವಿದರಲ್ಲಿ ಹೊಸ ಚೈತನ್ಯ
Last Updated 30 ನವೆಂಬರ್ 2020, 2:51 IST
ಅಕ್ಷರ ಗಾತ್ರ

ಶಿವಮೊಗ್ಗ: ಕೊರೊನಾ ಕಾರಣದಿಂದಾಗಿ ಎಂಟು ತಿಂಗಳ ಕಾಲ ರಂಗಭೂಮಿ ಮೇಲೆ ಕವಿದಿದ್ದ ಕಾರ್ಮೋಡ ಈಗ ಸರಿಯುತ್ತಿದ್ದು, ಜಿಲ್ಲೆಯಲ್ಲಿ ರಂಗ ಚಟುವಟಿಕೆ ಮತ್ತೆ ಗರಿಗೆದರಿದೆ.

ಎಂಟು ತಿಂಗಳಿಂದ ಬಣ್ಣದ ಸಾಂಗತ್ಯದಿಂದ ದೂರವಿದ್ದ ಕಲಾವಿದರು ಹಲವು ಸಂಕಷ್ಟ ಎದುರಿಸಿದ್ದರು. ರಂಗಭೂಮಿಯನ್ನೇ ವೃತ್ತಿ
ಯನ್ನಾಗಿಸಿಕೊಂಡ ಕಲಾವಿದರಿಗೆ ಬಣ್ಣದಿಂದ ದೂರ ಉಳಿಯುವುದು ತುಸು ಕಷ್ಟವೇ ಆಗಿತ್ತು. ಈಗ ಶಿವಮೊಗ್ಗದಲ್ಲಿ ರಂಗಚಟುವಟಿಕೆ ಆರಂಭ ಆಗುತ್ತಿರುವುದರಿಂದ ಕಲಾವಿದರಲ್ಲಿ ಹೊಸ ಹುರುಪು ಮೂಡಿದೆ

ಲಾಕ್‌ಡೌನ್‌ ನಿಯಮಗಳು ಸಡಿಲಿಕೆ ಆಗುತ್ತಿದ್ದಂತೆ ಒಂದೂವರೆ ತಿಂಗಳ ಹಿಂದೆಯೇ ಶಿವಮೊಗ್ಗ ರಂಗಾಯಣವು ರಂಗಚಟುವಟಿಕೆಗೆ ಮರು ಚಾಲನೆ ನೀಡಿತ್ತು.

ರಂಗಾಯಣವು ಸರ್ಕಾರದ ಅಧೀನ ಸಂಸ್ಥೆಯಾಗಿದ್ದು, ಇಲ್ಲಿ ಹಲವೆಡೆಯ ಕಲಾವಿದರು, ತಂತ್ರಜ್ಞರು ಇದ್ದರು. ಎಲ್ಲರೂ ಬಣ್ಣ ಹಚ್ಚದೇ ಕಸಿವಿಸಿಗೊಂಡಿದ್ದರು. ಲಾಕ್‌ಡೌನ್‌ ಅವಧಿಯಲ್ಲೂ ಕಲಾವಿದರು, ತಂತ್ರಜ್ಞರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ‘ಸಂಸಾರ ರಂಗತಾರ’ ಎಂಬ ನಾಟಕವನ್ನು ಸಿದ್ಧಮಾಡಿ ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿದ್ದರು.

ಆನ್‌ಲೈನ್‌ನಲ್ಲಿ 10 ನಾಟಕಗಳನ್ನು ಪ್ರಸಾರ ಮಾಡಲಾಗಿದ್ದು, ಚರ್ಚೆ, ಕಥಾ, ಓದು ನಾಟಕ, ವಿಚಾರ ಗೋಷ್ಠಿಗಳನ್ನು ನಡೆಸಲಾಗಿತ್ತು.

‘ಚಾಣಕ್ಯ ಪ್ರಪಂಚ’ ನಾಟಕ ಪ್ರದರ್ಶನ: ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಭಾನುವಾರದಿಂದ ನಾಟಕ ಪ್ರದರ್ಶನ ಆರಂಭವಾಗಿದೆ. ಮೊದಲ ಪ್ರಯೋಗವಾಗಿ ‘ಚಾಣಕ್ಯ ಪ್ರಪಂಚ’ ನಾಟಕ ಪ್ರದರ್ಶನಗೊಂಡಿದೆ.30ರಂದು ಸಂಜೆ 6.15ಕ್ಕೂ ನಾಟಕ ಪ್ರದರ್ಶನ ನಡೆಯಲಿದೆ.

ಕೆ.ವಿ. ಸುಬ್ಬಣ್ಣ ರಚನೆಯ ಬಿ.ಆರ್. ವೆಂಕಟರಮಣ ಐತಾಳ ಅವರ ನಿರ್ದೇಶನದ ‘ಚಾಣಕ್ಯ ಪ್ರಪಂಚ’ ನಾಟಕ ಪ್ರದರ್ಶನಗೊಂಡಿದೆ. 12 ಕಲಾವಿದರು, 3 ಜನ ಕಲಾ ತಂತ್ರಜ್ಞರು 36 ದಿನಗಳ ನಾಟಕ ತಯಾರಿ ನಡೆಸಿದ್ದಾರೆ ಎಂದು ರಂಗಾಯಣ ನಿರ್ದೇಶಕರಂಗಾಯಣದ ನಿರ್ದೇಶಕ ಸಂದೇಶ ಜವಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಾಟಕಕ್ಕೆ ರಾಘು ಪುರಪ್ಪೇಮನೆ ಮತ್ತು ಎಚ್‌.ಕೆ. ಶ್ವೇತಾರಾಣಿ ಸಹ ನಿರ್ದೇಶನ ಮಾಡಿದ್ದಾರೆ. ಹಿರಿಯ ರಂಗಕರ್ಮಿ ಪುರುಷೋತ್ತಮ ತಲವಾಟ ಪ್ರಸಾಧನ ಹಾಗೂ ಬೆಳಕಿನ ವಿನ್ಯಾಸವನ್ನು ಶಂಕರ್ ಬೆಳಕಟ್ಟೆ ನಿರ್ವಹಿಸಿದ್ದಾರೆ.
ರಂಗಾಯಣ ಶಿವಮೊಗ್ಗ ರೆಪರ್ಟರಿಯ ನೂತನ ಕಲಾವಿದರು ನಾಟಕದಲ್ಲಿ ಉತ್ತಮವಾಗಿ ಅಭಿನಯಿಸಿದ್ದಾರೆ. ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT