ಕಬ್ಬಿಣ ನಗರದ ಕುವರ ಮುನೀರ್ಗೆ ಏಕಲವ್ಯ ಪ್ರಶಸ್ತಿ

ಭದ್ರಾವತಿ: ಭಾರತ ತಂಡದ ಉಪನಾಯಕನಾಗಿ ಎರಡು ಬಾರಿ ಸೌತ್ ಏಷ್ಯನ್ ಕ್ರೀಡಾಕೂಟದಲ್ಲಿ ಕೊಕ್ಕೊದಲ್ಲಿ ಬಂಗಾರದ ಪದಕ ಪಡೆದಿರುವ ಕಬ್ಬಿಣ ನಗರದ ಕುವರ ಮುನೀರ್ ಬಾಷಾ ಅವರಿಗೆ ಕ್ರೀಡಾಕ್ಷೇತ್ರದ 2020–21ನೇ ಸಾಲಿನ ಅತ್ಯುನ್ನತ ಏಕಲವ್ಯ ಪ್ರಶಸ್ತಿ ಲಭಿಸಿದೆ.
ಪ್ರೈಮರಿ ಶಾಲಾ ಹಂತದಿಂದ ಕೊಕ್ಕೊದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಮುನೀರ್, ಬಡತನದ ನಡುವೆಯೂ ಸಾಧಿಸುವ ಛಲವನ್ನು ಮೈಗೂಡಿಸಿಕೊಂಡು ಸಾಧನೆ ಮಾಡಿದವರು. 33ನೇ ವಯಸ್ಸಿನಲ್ಲೂ ಕೊಕ್ಕೊದಲ್ಲಿ ಆಸಕ್ತಿ ಉಳಿಸಿಕೊಳ್ಳುವ ಜತೆಗೆ ತಮ್ಮ ಅಣ್ಣನ ಜತೆಯಲ್ಲಿ ಮರದ ಕೆತ್ತನೆ ಕೆಲಸ ಮಾಡಿಕೊಂಡು ಬದುಕಿನ ಜಟಕಾಬಂಡಿ ಎಳೆಯುತ್ತಿದ್ದಾರೆ. ಸದ್ಯ ಪ್ರಶಸ್ತಿಯ ಗರಿಯ ಜತೆಗೆ ಕೆಲಸ ನಿರೀಕ್ಷೆಯಲ್ಲಿ ಕಾಲ ದೂಡುತ್ತಾ ತಮ್ಮ ನೆಚ್ಚಿನ ಕ್ರೀಡೆಯಲ್ಲಿ ಮಗ್ನರಾಗಿದ್ದಾರೆ.
2016 ಮತ್ತು 2019ರಲ್ಲಿ ಭಾರತವನ್ನು ಪ್ರತಿನಿಧಿಸಿ ಬಂಗಾರದ ಪದಕ ಗೆದ್ದಿರುವ ಇವರು, 12 ಬಾರಿ ರಾಜ್ಯ ತಂಡವನ್ನು ಪ್ರತಿನಿಧಿಸಿ
ಚಿನ್ನ, ಬೆಳ್ಳಿ ಪದಕಗಳೊಂದಿಗೆ ನಗೆ ಬೀರಿದ್ದಾರೆ.
‘ಕೋವಿಡ್ ಸಂಕಷ್ಟದ ಕಾಲದಲ್ಲಿ ಎರಡು ವರ್ಷ ಯಾವುದೇ ಸಾಧನೆ ಮಾಡಲು ಸಾಧ್ಯವಾಗಿಲ್ಲ’ ಎಂಬ ನಿರಾಸೆಯ ಭಾವನೆಯನ್ನು ವ್ಯಕ್ತಪಡಿಸುವ ಮುನೀರ್, ‘ನಮ್ಮ ವಿಭಾಗಕ್ಕೆ ಈ ಪ್ರಶಸ್ತಿಯ ಭಾಗ್ಯ ಸಿಗುವುದಿಲ್ಲ ಎಂಬ ಭಾವನೆ ಇತ್ತು.ಈ ಪ್ರಶಸ್ತಿಯೊಂದಿಗೆ ಎರಡು ಬಾರಿ ದೇಶವನ್ನು ಪ್ರತಿನಿಧಿಸಿರುವ ನಮ್ಮಂತವರಿಗೆ ಸರ್ಕಾರಿ ಕೆಲಸ ಸಿಕ್ಕರೆ ಮತ್ತಷ್ಟು ಶಕ್ತಿ ಬರುತ್ತದೆ’ ಎನ್ನುತ್ತಾರೆ.
‘ಸದ್ಯಕ್ಕೆ ಪದವಿ ಮುಗಿಸಿರುವ ನಾನು, ಸಂಪೂರ್ಣವಾಗಿ ಕೊಕ್ಕೊದಲ್ಲಿ ಬದುಕು ಸವೆಸುತ್ತಿದ್ದೇನೆ. ಯುವಕರನ್ನು ಈ ಕ್ರೀಡೆಯಲ್ಲಿ ತೊಡಗಿಸುವ ಪ್ರಯತ್ನ ನಡೆಸಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ’ ಎಂದರು.
‘ತಂದೆ ಆರ್ಎಂಸಿ ಹಮಾಲಿ ಕೆಲಸಗಾರರಾಗಿ ನಮ್ಮನ್ನು ಬೆಳೆಸಿದ್ದಾರೆ. ಬಡತನದ ನೋವಿನ ನಡುವೆಯೂ ಒಂದಿಷ್ಟು ಸಾಧನೆ ಮಾಡಲು ಎಲ್ಲರ ಸಹಕಾರ ಸಿಕ್ಕಿದೆ. ಓದಿದ ಶಾಲಾ–ಕಾಲೇಜು ಶಿಕ್ಷಕರು ನೆರವು ನೀಡಿದ್ದಾರೆ. ಸದ್ಯ ಒಂದು ಸರ್ಕಾರಿ ಕೆಲಸ ಅಂತ ಸಿಕ್ಕರೆ ನಾನು ಮಾಡಿರುವ ಒಂದಿಷ್ಟು ಕೊಕ್ಕೊ ಚಟುವಟಿಕೆಗೆ ಉತ್ತೇಜನ ಸಿಕ್ಕಂತಾಗುತ್ತದೆ’ ಎಂದು ತಮ್ಮ ಬದುಕಿನ ನೋವನ್ನು ತೆರೆದಿಡುತ್ತಾರೆ ಮುನೀರ್ ಬಾಷಾ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.