ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಸ್ಕಾಂ ಕಚೇರಿಯಲ್ಲಿ ಮಿಕ್ಸಿ ಹಾಕಿಕೊಂಡು ಹೋಗುತ್ತಿದ್ದ ರೈತ: ಸಿಬ್ಬಂದಿಗೆ ನೋಟಿಸ್

Last Updated 31 ಮೇ 2022, 4:04 IST
ಅಕ್ಷರ ಗಾತ್ರ

ಹೊಳೆಹೊನ್ನೂರು: ಮನೆಗೆ ಸಮಪರ್ಕವಾಗಿ ವಿದ್ಯುತ್ ಪೂರೈಕೆಯಾಗದ ಕಾರಣ ರೈತನೊಬ್ಬ ಮೆಸ್ಕಾಂಗೆ ಕಚೇರಿಗೆ ಮಿಕ್ಸಿ ತೆಗೆದುಕೊಂಡು ಹೋಗಿ ಮಸಾಲೆ ರುಬ್ಬುವುದು ಹಾಗೂ ಮೊಬೈಲ್ ಚಾರ್ಚ್ ಮಾಡಿಕೊಂಡು ಬರುತ್ತಿದ್ದ ಸಂಬಂಧ ಕಚೇರಿಯ ಕೆಳಹಂತದ ಎಂಟು ಮಂದಿ ಸಿಬ್ಬಂದಿ ವಿರುದ್ಧ ನೋಟಿಸ್‌ ಜಾರಿ ಮಾಡಲಾಗಿದೆ.

ಸಮೀಪದ ಮಂಗೋಟೆ ಗ್ರಾಮದ ರೈತ ಹನುಮಂತ ಕಳೆದ ವರ್ಷ ಸ್ವಂತ ಹಣದಲ್ಲಿ ಟಿ.ಸಿ. ಅಳವಡಿಸಿಕೊಂಡು, ಮನೆಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರು. ಮೆಸ್ಕಾಂ ಅಧಿಕಾರಿಗಳು ಮೀಟರ್ ಹಾಗೂ ವಿದ್ಯುತ್ ಕಂಬವನ್ನು ಹಾಕಿದ್ದರು. ಆದರೆ, ಪ್ರತಿನಿತ್ಯ ಕೇವಲ 2 ತಾಸು ಮಾತ್ರ ವಿದ್ಯುತ್ ನೀಡುತ್ತಿದ್ದರು. ಒಂದೆರಡು ತಿಂಗಳು ಅಕ್ಕಪಕ್ಕದ ಮನೆಗಳಲ್ಲಿ ಮಿಕ್ಸಿ ಹಾಕಿಕೊಂಡು, ಮೊಬೈಲ್ ಚಾರ್ಚ್ ಮಾಡಿಕೊಂಡು ರೋಸಿ ಹೋದ ಹನುಮಂತ, ಮೆಸ್ಕಾಂ ಎಂಜಿನಿಯರ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಮಾತಿನ ಚಕಮಕಿ ವೇಳೆ ಅಧಿಕಾರಿ, ‘ಮನೆಯಲ್ಲಿ ಕರೆಂಟ್ ಇಲ್ಲ ಎಂದರೆ ಕಚೇರಿಗೆ ಬಂದು ಮಿಕ್ಸಿ ಮಾಡಿಕೊಂಡು ಹೋಗು’ ಎಂದಿದ್ದರು ಎನ್ನಲಾಗಿದೆ. ಅಂದಿನಿಂದ ರೈತ ಹನುಮಂತ ಮೆಸ್ಕಾಂ ಕಚೇರಿಗೆ ಬಂದು ಮಿಕ್ಸಿ ಹಾಕಿಕೊಂಡು ಹೋಗುತ್ತಿದ್ದರು.

ಮನೆಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ಆಗ್ರಹಿಸಿ ಮೆಸ್ಕಾಂ ಅಧಿಕಾರಿಗಳು, ಶಾಸಕರು, ಸಂಸದರನ್ನು ಹತ್ತಾರು ಭೇಟಿ ಮಾಡಿ ಮನವಿ ಮಾಡಿದರೂ ಯಾರೂ ಸ್ಪಂದಿಸಿಲ್ಲ. ಹನುಮಂತ ಅವರನ್ನು ತಡೆಯುವ ಪ್ರಯತ್ನವನ್ನು ಯಾವ ಸಿಬ್ಬಂದಿಯೂ ಮಾಡಿಲ್ಲ. ಮೇಲಧಿಕಾರಿಗಳಿಗೂ ಯಾವುದೇ ದೂರು ನೀಡಿರಲಿಲ್ಲ.

ವಿಷಯ ಗೊತ್ತಿದ್ದರೂ ಜೆಇ ವಿಶ್ವನಾಥ್ ಅವರು, ‘ತಮಗೂ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಹನುಮಂತ ಯಾರೆಂಬುದು ಗೊತ್ತಿಲ್ಲ’ ಎಂದು ಹೇಳಿದ್ದಾರೆ. ಆದರೆ, ರೈತ ಹನುಮಂತ, ‘ಜೆಇ ಅವರು ಕಚೇರಿಗೆ ಬಂದು ಮಿಕ್ಸಿ ಹಾಕಿಕೊಂಡು ಹೋಗು ಎಂದು ಹೇಳಿದ್ದರಿಂದ ಬಂದು ಹೋಗುತ್ತಿದ್ದೆ. ಅವರಿಗೆ ಕರೆ ಮಾಡಿದ ಮೊಬೈಲ್ ಕಾಲ್ ಲಿಸ್ಟ್ ಇದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT